ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ
ಕಲಬುರಗಿ,ಜು.2-ಹಣ ಕೊಡುವ ಮತ್ತು ತೆಗೆದುಕೊಳ್ಳುವ ವಿಷಯಕ್ಕೆ ಜಗಳ ತೆಗೆದು ಎಳೆನೀರು ಕೊಚ್ಚುವ ಮಚ್ಚಿನಿಂದ ಹೊಡೆದು ಸಹೋದರಿಯ ಪತಿಯನ್ನು ಕೊಲೆ ಮಾಡಿದ ಇಬ್ಬರು ಆರೋಪಿಗಳಿಗೆ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 4 ಲಕ್ಷ ರೂಪಾಯಿ ದಂಡ ವಿಧಿಸಿದೆ.
5.10.2022 ರಂದು ಸಂಜೆ 7.15ರ ಸುಮಾರಿಗೆ ಬಸಂತ ನಗರದಲ್ಲಿರುವ ಅಣ್ಣಾರಾವ ಅವಧೆ ಅವರ ಮನೆಗೆ ದಸರಾ ಹಬ್ಬದ ನಿಮಿತ್ಯ ಪತ್ನಿ ಜೊತೆಗೆ ಬನ್ನಿ ಕೊಡಲು ಹೋದ ಲಕ್ಷ್ಮೀಪುತ್ರ ಜಮಜೇನವರ ಅವರೊಂದಿಗೆ ಮಹಾದೇವ ನಗರದ ಶಿವಕಾಂತ ಮೂಲಗೆ ಮತ್ತು ಬಿದ್ದಾಪುರ ಕಾಲೋನಿಯ ಪ್ರಶಾಂತ ಮೂಲಗೆ ಅವರು ಹಣ ಕೊಡುವ ಮತ್ತು ತೆಗೆದುಕೊಳ್ಳುವ ವಿಷಯಕ್ಕೆ ಜಗಳ ತೆಗೆದು ಎಳೆನೀರು ಕೊಚ್ಚುವ ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದರು. ಈ ಸಂಬಂಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖಾಧಿಕಾರಿ ಪಂಡಿತ ಸಗರ ಅವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಾದ-ವಿವಾದ ಆಲಿಸಿದ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಹ್ಮದ್ ಮುಜೀರ್ ಉಲ್ಲಾ ಅವರು, ಕೊಲೆ ಆರೋಪಿಗಳಾದ ಶಿವಕಾಂತ ಮೂಲಗೆ ಮತ್ತು ಪ್ರಶಾಂತ ಮೂಲಗೆ ಅವರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 2 ಲಕ್ಷದಂತೆ 4 ಲಕ್ಷ ರೂ.ದಂಡ ವಿಧಿಸಿ ಮತ್ತು ಮೃತನ ಪತ್ನಿಗೆ 3.80 ಲಕ್ಷ ಪರಿಹಾರ ನೀಡಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ 3ನೇ ಅಪರ ಸರ್ಕಾರಿ ಅಭಿಯೋಜಕ ಗುರುಲಿಂಗಪ್ಪ ತೇಲಿ ಅವರು ವಾದ ಮಂಡಿಸಿದರು.