ಆರೋಗ್ಯಕರ ಜೀವನಕ್ಕೆ ಕ್ರೀಡೆಗಳು ಪೂರಕ
ಬಸವಕಲ್ಯಾಣ: ಜು.2:ಕ್ರೀಡೆಗಳು ವ್ಯಕ್ತಿಯ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಕ್ರೀಯಾಶೀಲತೆ ಮತ್ತು ಆರೋಗ್ಯಕರ ಜೀವನಕ್ಕೆ ಕ್ರೀಡೆಗಳು ಪೂರಕ ಎಂದು ಬಿಇಟಿ ನಿರ್ದೇಶಕ, ಬಿಕೆಇಸಿ ಪ್ರಾಚಾರ್ಯ ಡಾ.ಅಶೋಕಕುಮಾರ ವಣಗೇರಿ ಹೇಳಿದರು.
ಬಿಇಟಿಯ ಬಸವಕಲ್ಯಾಣ ಇಂಜಿನೀಯರಿಂಗ್ ಕಾಲೇಜಿನಲ್ಲಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಸೋಮವಾರ ಆಯೋಜಿಸಲಾಗಿದ್ದ ಎರಡು ದಿನಗಳ ಕಲಬುರಗಿ ಅಂತರ್ ಕಾಲೇಜು ಮಟ್ಟದ ಟೆನ್ನಿಸ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಎಲ್ಲ ಸಮಯದಲ್ಲಿ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಂಡಾಗ ಮಾತ್ರ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ಇಂಜಿನೀಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಸಂಜುಕುಮಾರ ಜಲ್ದೆ ಮಾತನಾಡಿ, ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡುವ ಜತೆಗೆ ಕೌಶಲ್ಯಗಳನ್ನು ಅಭಿವೃದ್ಧಿಗೂ ಸಹಕಾರಿಯಾಗುತ್ತದೆ ಎಂದರು. ಡಾಸುದರ್ಶನ್, ಡಾ.ಅನೀಲ ಪಾಟೀಲ್, ಪ್ರೊ. ಸುವರ್ಣಲತಾ ಹಿರೇಮಠ, ಐಟಿಐ ಕಾಲೇಜಿನ ಪ್ರಾಚಾರ್ಯ ಪ್ರೊ.ಶಿವಕುಮಾರ ಎಚ್, ಪ್ರವೀಣ ಬೆಳಕೆರಿ, ಪಿಆರ್‍ಒ ಶಂಕರ ಅಗರಗಿ, ಗೋವಿಂದ ಕನಕಾ ಉಪಸ್ಥಿತರಿದ್ದರು. ಉಪ ಪ್ರಾಚಾರ್ಯ ಅರುಣಕುಮಾರ ಯಲಾಲ್ ಸ್ವಾಗತಿಸಿ, ಪಪ್ರಾಸ್ತಾವಿಕ ಮಾತನಾಡಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ದತ್ತಣ್ಣ ಮಂಟಗಿ ವಂದಿಸಿದರು. ವಿದ್ಯಾಸಾಗರ ಮೂಲಗೆ ನಿರೂಪಿಸಿದರು. ವಿಭಾಗದ ಮಟ್ಟದ ಕ್ರೀಡಾಕೂಟದಲ್ಲಿ ವಿಜಯಪುರ, ಬಾಗಲಕೋಟ್, ಹೊಸಪೇಟೆ, ಬಳ್ಳಾರಿ, ಕಲಬುರಗಿ, ಬೀದರ್, ಭಾಲ್ಕಿ ಹಾಗೂ ಬಸವಕಲ್ಯಾಣ ಇಂಜಿನಿಯರಿಂಗ್ ಕಾಲೇಜಿಗಳ ಕ್ರೀಡಾಪಟುಗಳು ಹಾಗೂ ಕಾಲೇಜಿಗಳ ದೈಹಿಕ ಶಿಕ್ಷಣ ನಿರ್ದೆಶಕರು ಭಾಗವಹಿಸಿದ್ದರು.