ಅ. 1ರಂದು ಫಲಾನುಭವಿಗಳಿಗೆ ಉಚಿತ ಸಾಧನ ಸಲಕರಣೆಗಳ ವಿತರಣೆ : ಸಿದ್ದತೆಗೆ ಎಡಿಸಿ ಸೂಚನೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.27– ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರಿಗೆ ಅಕ್ಟೋಬರ್ 1ರಂದು ನಗರದಲ್ಲಿ ಉಚಿತ ಸಾಧನ ಸಲಕರಣೆಗಳ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಈ ಸಂಬಂಧ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಅಲಿಂಕೋ ಶಿಬಿರದಲ್ಲಿ ಆಯ್ಕೆಯಾಗಿರುವ ಫಲಾನುಭವಿಗಳಿಗೆ ಉಚಿತ ಸಾಧನ ಸಲಕರಣೆಗಳನ್ನು ವಿತರಿಸುವ ಸಂಬಂಧ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಲಿಂಕೋ ಸಂಸ್ಥೆಯು ರಾಷ್ಟ್ರೀಯ ವಯೋಶ್ರೀ ಯೋಜನೆ (ಆರ್.ವಿ.ವೈ) ಹಾಗೂ ವಿಶೇಷಚೇತನ ವ್ಯಕ್ತಿಗಳಿಗೆ ಸಹಾಯ (ಎ.ಡಿ.ಐ.ಪಿ) ಯೋಜನೆಯಡಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಜೂನ್-2024ರಲ್ಲಿ ಜಿಲ್ಲೆಯಲ್ಲಿ ವಿಕಲಚೇತನರು ಹಾಗೂ ಹಿರಿಯ ನಾಗರಿಕರಿಗೆ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಿತ್ತು. ಶಿಬಿರದಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಅಕ್ಟೋಬರ್ 1ರಂದು ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಉಚಿತ ಸಾಧನ ಸಲಕರಣೆಗಳನ್ನು ವಿತರಿಸಲಾಗುತ್ತಿದೆ. ಕಾರ್ಯಕ್ರಮಕ್ಕೆ ಅವಶ್ಯ ಸಿದ್ದತೆಗಳನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಾರ್ಯಕ್ರಮಕ್ಕೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆಗಳು ಸಹಯೋಗ ವಹಿಸಲಿವೆ. ಸಾಧನ ಸಲಕರಣೆ ಪಡೆಯಲು ಆಯ್ಕೆಯಾಗಿರುವ ಫಲಾನುಭವಿಗಳನ್ನು ಕಾರ್ಯಕ್ರಮಕ್ಕೆ ಕರೆತರುವ ಹಾಗೂ ಬಳಿಕ ವಾಪಸ್ಸು ಕಳುಹಿಸುವ ವ್ಯವಸ್ಥೆಯಲ್ಲಿ ಯಾವುದೇ ಗೊಂದಲಗಳಿಗೆ ಅವಕಾಶವಾಗಬಾರದು. ಕಾರ್ಯಕ್ರಮ ಆಯೋಜನೆಯಲ್ಲಿ ಯಾವುದೇ ಲೋಪಗಳಾಗದಂತೆÉ ಎಚ್ಚರ ವಹಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿಯವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಫಲಾನುಭವಿಗಳಿಗೆ ಅವಶ್ಯವಾಗಿರುವ ಸಾಧನ ಸಲಕರಣೆಗಳನ್ನು ವಿತರಿಸುವ ಸಂಬಂಧ ಏರ್ಪಡಿಸಲಾಗಿದ್ದ ಆರೋಗ್ಯ ತಪಾಸಣೆ ಶಿಬಿರದಲ್ಲಿ ಈಗಾಗಲೇ 417 ವಿಶೇಷಚೇತನರು ಹಾಗೂ 240 ಹಿರಿಯ ನಾಗರಿಕರು ಸೇರಿದಂತೆ ಒಟ್ಟು 657 ಫಲಾನುಭವಿಗಳಿಗೆ ಉಚಿತ ಸಾಧನÀ ಸಲಕರಣೆ ವಿತರಿಸಲಾಗುತ್ತಿದೆ. ಕುಡಿಯುವ ನೀರು, ಶೌಚಾಲಯ ಹಾಗೂ ಸ್ವಚ್ಚತಾ ವ್ಯವಸ್ಥೆಗಳು ಸಮರ್ಪಕವಾಗಿರುವಂತೆ ನೋಡಿಕೊಳ್ಳಬೇಕು ಎಂದು ನಗರಸಭೆ ಅಧಿಕಾರಿಗಳಿಗೆ ತಿಳಿಸಿದರು.
ಹೆಚ್ಚಿನ ಜನರು ಭಾಗವಹಿಸುವ ಸಾಧ್ಯತೆ ಇರುವುದರಿಂದ ಕಾರ್ಯಕ್ರಮ ಸ್ಥಳದಲ್ಲಿ ಅಗ್ನಿಶಾಮಕ ವಾಹನ ಸನ್ನಧ್ಧವಾಗಿರಬೇಕು. ಅಲ್ಲದೆ ಆಂಬುಲೆನ್ಸ್ ವ್ಯವಸ್ಥೆ ಮಾಡಬೇಕು. ಕಾರ್ಯಕ್ರಮ ಸುಗಮ ನಿರ್ವಹಣೆಗಾಗಿ ವಿವಿಧ ಕಾಲೇಜುಗಳ ಎನ್.ಸಿ.ಸಿ ಹಾಗೂ ಎನ್.ಎಸ್.ಎಸ್. ಸ್ವಯಂ ಸೇವಕರನ್ನು ನಿಯೋಜಿಸಬೇಕು. ಎಲ್ಲಾ ತಾಲೂಕುಗಳ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಸಾಧನ ಸಲಕರಣೆ ವಿತರಣೆ ಸಲುವಾಗಿ ಸಂಬಂಧಿತ ಇಲಾಖೆಗಳಿಗೆ ಅಗತ್ಯ ಸಹಕಾರ ನೀಡಿ ಕಾರ್ಯಕ್ರಮದ ಯಶಸ್ವಿಗೆ ನೆರವಾಗಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿಕಲಚೇತನರು ಹಾಗೂ ಹಿರಿಯ ನಾಗರಿಕ ಕಲ್ಯಾಣಾಧಿಕಾರಿ ಸಕಲೇಶ್ವರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಮಂಜುನಾಥ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕÀ ಮಂಜುನಾಥ ಪ್ರಸನ್ನ, ಅಲಿಂಕೋ ಸಂಸ್ಥೆಯ ಕಿರಿಯ ವ್ಯವಸ್ಥಾಪಕ ರಿಷಬ್ ಮಲ್ಲೋತ್ರ, ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಶ್ರೀಕಂಠರಾಜೇ ಅರಸ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ, ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.