ಮುಂದಿನ ಭವಿಷ್ಯ ಬರೆಯುವ ಮಕ್ಕಳ ಆರೋಗ್ಯ ಮುಖ್ಯ: ಶಾಸಕ ಜಿ.ಟಿ.ಡಿ
ಸಂಜೆವಾಣಿ ನ್ಯೂಸ್
ಮೈಸೂರು.ಸೆ.27:- ಪ್ರತಿಯೊಬ್ಬರೂ ಶಿಕ್ಷಣ ಪಡೆಯುವ ಜತೆಗೆ ಆರೋಗ್ಯದಿಂದ ಇರಬೇಕು. ಮುಂದಿನ ಭವಿಷ್ಯವನ್ನು ನಿರ್ಮಾಣಮಾಡುವ ಇಂದಿನ ಮಕ್ಕಳು ಆರೋಗ್ಯದಿಂದ ಇರಬೇಕಾಗಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ಸಲಹೆ ನೀಡಿದರು.
ಜಿಪಂವತಿಯಿಂದ ಬೋಗಾದಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯೋಜಿಸಿದ್ದ ಪಿಎಂ ಪೆÇೀಷಣ- ಮಧ್ಯಾಹ್ನ ಉಪಹಾರ ಯೋಜನೆಯಡಿ ಮಕ್ಕಳಿಗೆ ವಾರದಲ್ಲಿ ಆರು ದಿನ ಮೊಟ್ಟೆ ವಿತರಿಸುವ ಮೈಸೂರು ತಾಲ್ಲೂಕು ಮಟ್ಟದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದರು. ಕರ್ನಾಟಕದ ಮಕ್ಕಳು ಶಿಕ್ಷಣ ಪಡೆಯುವ ಜತೆಗೆ ಆರೋಗ್ಯದಿಂದ ಇರಬೇಕು ಎನ್ನುವ ಕಾರಣಕ್ಕಾಗಿ ಪೌಷ್ಠಿಕಾಂಶವನ್ನು ಒದಗಿಸುವಂತಹ ಮೊಟ್ಟೆ ವಿತರಿಸಲು ಅಜೀಂ ಪ್ರೇಮ್‍ಜೀ ಅವರು 1590 ಕೋಟಿ ರೂ.ಅನುದಾನವನ್ನು ರಾಜ್ಯಸರ್ಕಾರಕ್ಕೆ ನೀಡುವಂತಹ ತೀರ್ಮಾನ ಮಾಡಿದ್ದು ಶ್ಲಾಘನೀಯ. ಬಡ ಮಕ್ಕಳ ಆರೋಗ್ಯಕ್ಕಾಗಿ ಇಷ್ಟೊಂದು ಪ್ರಮಾಣದ ಅನುದಾನ ನೀಡಿದ್ದರೆ ಅದು ಅಜೀಂಪ್ರೇಮ್‍ಜೀ ಎಂದು ಬಣ್ಣಿಸಿದರು.
ಎಸ್.ಎಂ.ಕೃಷ್ಣ ಅವರು ಸಿಎಂ ಆಗಿದ್ದಾಗ ಮಧ್ಯಾಹ್ನದ ಬಿಸಿಯೂಟ ಆರಂಭಿಸಿದ್ದರು. ಸಿದ್ದರಾಮಯ್ಯ ಅವರು ಸಿಎಂ ಆದ ನಂತರ ಕೆನೆಭರಿತ ಹಾಲು, ಎರಡು ದಿನಗಳ ಕಾಲ ಮೊಟ್ಟೆ, ಶೂ-ಸಾಕ್ಸ್ ನೀಡಲು ಶುರು ಮಾಡಿದ್ದರು.ಈಗ ವಾರದ ಆರು ದಿನಗಳಲ್ಲೂ ಮೊಟ್ಟೆ ವಿತರಿಸುವುದಕ್ಕೆ ಅಜೀಂ ಅವರು ಸರ್ಕಾರದ ಜತೆಗೆ ಒಪ್ಪಂದ ಮಾಡಿಕೊಂಡಿರುವುದರಿಂದ ಮಕ್ಕಳು ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಪ್ರಕಾಶ್, ಬಿಸಿಯೂಟ ಯೋಜನೆ ಸಹಾಯಕ ನಿರ್ದೇಶಕ ಮಹದೇವಸ್ವಾಮಿ, ಶಿಕ್ಷಕರ ಸಂಘದ ಅಧ್ಯಕ್ಷ ವಿ.ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಡಿ.ಮಾಲೇಗೌಡ, ಕೇರ್ಗಳ್ಳಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಮಹದೇವ, ಬೋಗಾದಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಲಿಂಗರಾಜು, ಬೋಗಾದಿ ಸಿಆರ್‍ಪಿ ವಿದ್ಯಾ,ಗ್ರಾಪಂ ಮಾಜಿ ಸದಸ್ಯರಾದ ಚಂದ್ರಶೇಖರ್, ನಾಗೇಶ್, ಆನಂದ್, ಆರೋಗ್ಯಮೇರಿ, ಬಾಬು, ನಿರ್ಮಲ ಶಿವಲಿಂಗಸ್ವಾಮಿ, ಪ್ರಶಾಂತ್ ಹಾಜರಿದ್ದರು.