ವೈದ್ಯರ ಸಮರ್ಪಣಾ ಸೇವೆ ಬೆಲೆ ಕಟ್ಟಲಾಗದು: ಡಾ. ಶರಣ ಮಳಖೇಡ್ಕರ್
ವಿಜಯಪುರ,ಜು.2:ವೈದ್ಯರ ಸಮರ್ಪಣಾ ಸೇವೆ ಬೆಲೆ ಕಟ್ಟಲಾಗದು ಎಂದು ಜೆಎಸ್‍ಎಸ್ ಆಸ್ಪತ್ರೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಶರಣ ಮಳಖೇಡ್ಕರ ತಿಳಿಸಿದರು.
ನಗರದ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ರಾಷ್ಟ್ರೀಯ ವೈದ್ಯರ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಆರೋಗ್ಯ ತಪಾಸಣಾ ಉಚಿತ ಶಿಬಿರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಲ್ಲ ವೃತ್ತಿಗಳಿಗಿಂತ ವೈದ್ಯ ವೃತ್ತಿಯು ಅತ್ಯಂತ ಶ್ರೇಷ್ಠವಾಗಿದೆ. ಸಾವಿನ ಮನೆ ಬಾಗಿಲು ತಟ್ಟುವ ವ್ಯಕ್ತಿಗೆ ಭರವಸೆಯ ಚಿಕಿತ್ಸೆ ನೀಡುವ ಮೂಲಕ ಬದುಕಿನ ಅಂಗಳಕ್ಕೆ ತಂದು ಬಿಡುವ ಅದ್ಭುತವಾದ ಚಮತ್ಕಾರವನ್ನು ವೈದ್ಯರು ಮಾಡುತ್ತಾರೆ. ಹೀಗಾಗಿಯೇ ವೈದ್ಯರನ್ನು ನಾರಾಯಣನ ಸ್ವರೂಪ ಎಂದು ಭಾವಿಸುತ್ತಾರೆ. ನಮ್ಮ ಆಸ್ಪತ್ರೆಯ ವೈದ್ಯರಲ್ಲಿ ಆತ್ಮ ಸಮರ್ಪಣಾ ಭಾವದಿಂದ ಸೇವೆ ಸಲ್ಲಿಸುತ್ತಿರುವುದು ರೋಗಿಗಳಲ್ಲಿ ಅರ್ಧ ರೋಗ ವಾಸಿಯಾಗುವುದಕ್ಕೆ ಕಾರಣವಾಗಿದೆ ಎಂದು ಹೇಳಿದರು.
ಖ್ಯಾತ ನ್ಯೂರೋ ಸರ್ಜನ್ ಡಾ. ಮಯೂರ ಕಾಕು ಅವರು ಮಾತನಾಡಿ, ಯೋಗ ರೋಗವನ್ನು ವಾಸಿ ಮಾಡುವುದರ ಜೊತೆಗೆ ರೋಗವನ್ನು ತಡೆಯವ ಕೆಲಸ ಮಾಡುತ್ತದೆ. ವ್ಯಕ್ತಿಯು ಸದಾ ಆರೋಗ್ಯವಂತನಾಗಿರುವಂತೆ ನೋಡಿಕೊಳ್ಳುತ್ತದೆ. ಯೋಗವನ್ನು ಚಿಕಿತ್ಸಾ ವಿಧಾನದಲ್ಲಿ ಅಳವಡಿಕೆÉ ಮಾಡುವ ಮೂಲಕ ಶಸ್ತ್ರಚಿಕಿತ್ಸೆಗಳಿಗೆ ವೆಚ್ಚವಾಗುವ ಸುಮಾರು 75 ಕೋಟಿ ರೂಪಾಯಿಗಳನ್ನು ಉಳಿಸಿ ರೋಗಿಗಳ ಆರ್ಥಿಕ ಹೊರೆಯನ್ನು ತಗ್ಗಿಸಿದ ಸಂತೃಪ್ತಿ ನನಗಿದೆ. ಇಷ್ಟು ದಿನ ಬೆಂಗಳೂರಿನ ಜನಗಳಿಗೆ ಮಾತ್ರ ಸೀಮಿತವಾಗಿ ಉಳಿಯುತ್ತಿದ್ದ ನನ್ನ ಚಿಕಿತ್ಸೆ ಇನ್ನು ಮುಂದೆ ವಿಜಯಪುರ ಹಾಗೂ ಸುತ್ತ ಮುತ್ತಲಿನ ಜಿಲ್ಲೆಗಳ ಜನಗಳಿಗೆ ತಲುಪಿಸುವ ಮಹದುದ್ದೇಶದಿಂದ ವಿಜಯಪುರ ಜೆಎಸ್‍ಎಸ್ ಆಸ್ಪತ್ರೆಗೆ ಆಗಮಿಸುತ್ತಿದ್ದೇನೆ. ಸದಾ ನಿಮ್ಮ ಸೇವೆಯಲ್ಲಿ ತೊಡಗಿರುವ ಜೆಎಸ್‍ಎಸ್‍ನಲ್ಲಿ ನಾನು ಸದಾ ನಿಮ್ಮ ಸೇವೆ ಮಾಡಲು ಬಯಸುತ್ತೇನೆ ಎಂದು ಹೇಳಿದರು.
ಪತ್ರಕರ್ತ ಕೆ.ಎನ್. ರಮೇಶ ಪ್ರತಿ ದಿನ ರೋಗಿಗಳ ನೆರವಿಗೆ ನಿಲ್ಲುವ ಎಲ್ಲ ವೈದ್ಯರನ್ನು ಸನ್ಮಾನಿಸಿ ಮಾತನಾಡಿದ ಅವರು, ಜೆಎಸ್‍ಎಸ್ ಹಾಸ್ಪಿಟಲ್ಸ್ ನಡೆದು ಬಂದ ಹಾದಿ ಹಾಗೂ ಜನರಿಗೆ ನೀಡುತ್ತಿರುವ ಸೇವೆಯ ಜೊತೆಗೆ ಪೂಜ್ಯರ ಹೆಸರಿನಡಿಯಲ್ಲಿ ಜನ ಸಾಮಾನ್ಯರಿಗೆ ಆಸ್ಪತ್ರೆ ಮಾಡುತ್ತಿರುವ ಸಹಾಯದ ಕುರಿತು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಡಾ.ಸೌಮ್ಯಶ್ರೀ ಮಯೂರ ಕಾಕು, ಡಾ. ವೀಣಾ ಪಾಟೀಲ, ಡಾ. ಬಲವಂತಾರಾಯ ಮಸಳಿ, ಡಾ. ದೀಪಕ ಕಡ್ಲಿ, ಡಾ. ಶಿರೀಶ ಕನ್ನೂರ, ಡಾ. ಮಹಾಬಲೇಶ್ವರ ಬಡಿಗೇರ, ಡಾ. ವಿಕಾಸ ಸೊನಗೆ, ಡಾ. ಜ್ಞಾನೇಶ್ವರಿ ಸೇರಿದಂತೆ ಎಲ್ಲ ವೈದ್ಯರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ 500 ಕ್ಕೂ ಅಧಿಕ ಜನರು ಭಾಗವಹಿಸಿ ಚಿಕಿತ್ಸೆ ಪಡೆದುಕೊಂಡರು.