ಬಿಸಿಯೂಟ ಸೇವಿಸಿ 30ಕ್ಕೂ ಅಧಿಕ ಮಕ್ಕಳು ಅಸ್ವಸ್ಥ…!
ವಾಡಿ:ಜು.2: ಚಿತ್ತಾಪುರ ತಾಲೂಕಿನ ಕನಗನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ಬಿಸಿಯೂಟ ಸೇವಿಸಿ ವಾಂತಿ ಭೇದಿಯಿಂದ ಬಳಲಿ 30ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಪ್ರಕರಣ ಸೋಮವಾರ ನಡೆದಿದೆ.
ಘಟನೆಯಲ್ಲಿ ಸುಮಾರು 30ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದು ಅದರಲ್ಲಿ 5-6 ವಿದ್ಯಾರ್ಥಿಗಳ ಆರೋಗ್ಯದಲ್ಲಿ ಗಂಭೀರ ವ್ಯತ್ಯಾಸ ಕಂಡು ಬಂದಿದೆ ಎಂದು ಹೇಳಲಾಗುತ್ತಿದೆ.
ಎಂದಿನಂತೆ ಬಿಸಿಊಟ ಸೇವಿಸಿದ ಬಳಿಕ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಕೆಲವರಲ್ಲಿ ವಾಂತಿಭೇದಿ, ಕೈ ಕಾಲು ಸೆಳೆತ ತಲೆಸುತ್ತು ಉಂಟಾಗಿ ಶಾಲೆಯಲ್ಲೇ ನೆಲ ಹಿಡಿಯಲು ಪ್ರಾರಂಭಿಸಿದ್ದಾರೆ.
ಗಾಬರಿಗೊಂಡ ಶಿಕ್ಷಕರು ಪೆÇೀಷಕರಿಗೆ ಮಾಹಿತಿ ನೀಡಿ ಅಸ್ವಸ್ಥಗೊಂಡು ನೆಲ ಹಿಡಿದ ವಿದ್ಯಾರ್ಥಿಗಳನ್ನು ಸಮೀಪದ ಕೊಲ್ಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 20ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರ ಸಮಸ್ಯೆ ಕಂಡು ಬಂದ 5 ವಿದ್ಯಾರ್ಥಿಗಳನ್ನು ವಾಡಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದರೆ ಇನ್ನುಳಿದ 3-4 ವಿದ್ಯಾರ್ಥಿಗಳನ್ನು ಪೆÇೀಷಕರು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡುತ್ತಿದ್ದಾರೆ. ಘಟನೆಗೆ ಬಿಸಿಯೂಟ ಸೇವನೆ ಅಥವಾ ನೀರು ಸೇವನೆ ಕಾರಣ ಅನ್ನುವುದು ಗೊತ್ತಾಗಿಲ್ಲ. ವಿದ್ಯಾರ್ಥಿಗಳ ಅರೋಗ್ಯದಲ್ಲಿನ ಏರುಪೇರಿನಿಂದ ಗ್ರಾಮದಲ್ಲಿ ಈಗ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಚಿತ್ತಾಪುರ ತಹಶೀಲ್ದಾರ ಅಮರೇಶ ಬಿರಾದಾರ, ಬಿಇಒ, ಶಹಾಬಾದ ಡಿವೈಎಸ್‍ಪಿ ಶಂಕರಗೌಡ ಪಾಟೀಲ ಹಾಗೂ ಬಿಸಿಯೂಟ ಸಹಾಯಕ ನಿರ್ದೇಶಕ ಪ್ರಕಾಶ ನಾಯ್ಕೋಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.