ಡಾ. ಜಯದೇವಿತಾಯಿ ಲಿಗಾಡೆ ರವರ ಜಯಂತೋತ್ಸವ ನಿಮಿತ್ಯ ಉಪನ್ಯಾಸ ಹಾಗೂ ಪ್ರಶಸ್ತಿ ಪ್ರದಾನ
ಬೀದರ:ಜು.2: ನಗರದ ಕರುನಾಡು ಸಾಂಸ್ಕøತಿಕ ಸಭಾಂಗಣದಲ್ಲಿ ಡಾ|| ಜಯದೇವಿತಾಯಿ ಲಿಗಾಡೆಯವರ ಜಯಂತೋತ್ಸವ ನಿಮಿತ್ಯ ಉಪನ್ಯಾಸ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವು ಜೂನ್ 30 ರಂದು ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಕನ್ನಡ ಪ್ರಗತಿ ಸಂಘ, ಬೀದರ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಜರುಗಿತು.
ಬೀದರನ ಹಿರಿಯ ಸಾಹಿತಿಗಳಾದ ಪಂಚಾಕ್ಷರಿ ಪುಣ್ಯಶೆಟ್ಟಿ ರವರು ಡಾ|| ಜಯದೇವಿತಾಯಿ ಲಿಗಾಡೆ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ದೀಪ ಬೆಳಗಿಸಿ, ಕಾರ್ಯಕ್ರಮ ಉದ್ಛಾಟಿಸಿ ಮಾತನಾಡುತ್ತಾ, ತ್ಯಾಗಿ, ಯೋಗಿ, ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ ಸೇವೆ ಮಾಡಿರುವ ವೀರ, ಧೀರ ಮಹಿಳೆಯಾದ ತಾಯಿ ಲಿಗಾಡೆಯವರು ಮೂಲತಃ ಮಹಾರಾಷ್ಟ್ರದ ಸೋಲ್ಲಾಪೂರದವರಾಗಿದ್ದರೂ 6ನೇ ತರಗತಿಯವರೆಗೆ ಕನ್ನಡ ಕಲಿತು ಬಸವತತ್ವ ಮತ್ತು ಕನ್ನಡವನ್ನು ಉಸಿರಾಗಿಸಿಕೊಂಡು ಮರಾಠಿಯಿಂದ ಕನ್ನಡದಲ್ಲಿ ಶಿವಯೋಗಿ ಸಿದ್ಧರಾಮೇಶ್ವರ ಪುರಾಣ ಮತ್ತು ಇನ್ನಿತರ ಕೃತಿಗಳನ್ನು ರಚಿಸಿದ್ದಾರೆ. ಅನಾಥರಿಗೆ, ಬಡ ಜನರಿಗೆ ಅನ್ನ-ವಸತಿ, ಬಟ್ಟೆಗಳನ್ನು ದಾನದ ರೂಪದಲ್ಲಿ ನೀಡಿರುತ್ತಾರೆ ಮತ್ತು ತಮ್ಮ ಆಸ್ತಿಯನ್ನು ಸಮಾಜಕ್ಕೆ ತ್ಯಾಗ ಮಾಡಿದ್ದಾರೆ. ಇವರ ಸಾಹಿತ್ಯ ಸಮಾಜ ಸೇವೆಯನ್ನು ಪರಿಗಣಿಸಿ ಮಂಡ್ಯದಲ್ಲಿಯ 47ನೇ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಪ್ರಥಮ ಮಹಿಳಾ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಇವರು ಕನ್ನಡ ಸಾಹಿತ್ಯ ಲೋಕದ ದೃವತಾರೆಯಾಗಿದ್ದಾರೆ ಎಂದು ನುಡಿದರು.
ಬೀದರ ಸಾಹಿತಿ ಮತ್ತು ಕರ್ನಾಟಕ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಡಾ|| ಮಹಾನಂದಾ ಮಡಕಿ ರವರು ಡಾ|| ಜಯದೇವಿತಾಯಿ ಲಿಗಾಡೆ ರವರ ಬದುಕು, ಬರಹ ಕುರಿತು ಉಪನ್ಯಾಸ ಮಂಡಿಸುತ್ತಾ, ಉತ್ತಮ ಸುಸಂಸ್ಕೃತ ಸಂಸ್ಕಾರದ ಕುಟುಂಬದಲ್ಲಿ ಜನಿಸಿದ ತಾಯಿಯವರು ಚಿಕ್ಕಂದಿನಿಂದಲೇ ಧಾರ್ಮಿಕ ಮತ್ತು ಅಧ್ಯಾತ್ಮಿಕ ಚಿಂತನೆಯಲ್ಲಿ ತೊಡಗಿಸಿಕೊಂಡಿದ್ದು, ಅಜ್ಜ, ಅಜ್ಜಿ, ತಂದೆ-ತಾಯಿಯವರ ಪ್ರಭಾವದಿಂದ ಶರಣ ಜೀವಿಗಳಾದರು. ಅಂದು ಸಂಸ್ಕೃತ ಪಾಠಶಾಲೆ, ಸ್ತ್ರೀ ಶಿಕ್ಷಣಕ್ಕಾಗಿ ಜ್ಞಾನಮಂದಿರ ಸ್ಥಾಪನೆ ಮಾಡಿದರು. ಬಸವ, ಗಾಂಧಿ ತತ್ವ ನಿಷ್ಠರು ಆಗಿರುವ ಇವರು ಖಾದಿ ಬಟ್ಟೆ ಧರಿಸುವುದರ ಜೊತೆಗೆ ಸ್ವದೇಶಿ ಪ್ರೇಮಿಯಾಗಿದ್ದರು. ಸ್ತ್ರೀ ಶಿಕ್ಷಣ, ಕನ್ನಡ ಸಾಕ್ಷರತಾ ಮತ್ತು ವರದಕ್ಷಿಗೆ ವಿರುದ್ಧ ಹೋರಾಟ ಮಾಡಿದ್ದಾರೆ. ಬರಗಾಲ ಸಮಯದಲ್ಲಿ ನಿರಾಶ್ರಿತರಿಗೆ ಆಶ್ರಯದಾತರಾಗಿದ್ದರು. ಇವರ ಸೇವೆ ಅಪಾರವಾದದ್ದು ಎಂದು ವಿಷಯ ಪ್ರತಿಪಾದಿಸಿದರು.
ಕರ್ನಾಟಕ ವಚನ ಸಾಹಿತ್ಯ ಪರಿಷತ್ತಿನ ತಾಲೂಕಾ ಅಧ್ಯಕ್ಷರಾದ ಚೇತನಾ ಪಾಟೀಲ್ ರವರು ಮುಖ್ಯ ಅತಿಥಿಗಳಾದ ಆಗಮಿಸಿ ಮಾತನಾಡುತ್ತಾ, ಲಿಗಾಡೆ ತಾಯಿಯವರು ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಭಕ್ತರಾಗಿದ್ದರು. ಸುಮಾರು ನಾಲ್ಕು ಸಾವಿರ ವಚನಗಳನ್ನು ತ್ರಿಪದಿಯಲ್ಲಿ ರಚಿಸಿದ್ದಾರೆ. ಅವರ ಬದುಕು ಬಸವ ತತ್ವ ಮತ್ತು ಸಮಾಜದ ಹೋರಾಟಕ್ಕಾಗಿ ಜೀವನ ಮೀಸಲಾಗಿಟ್ಟಿದ್ದರು. ಸೋಲ್ಲಾಪೂರದಲ್ಲಿ ಕನ್ನಡದ ಶಾಲೆಗಳನ್ನು ಸ್ಥಾಪಿಸಿ ನಾಲ್ಕು ನೂರು ಶಿಕ್ಷಕರನ್ನು ನೇಮಕ ಮಾಡಿ ತಮ್ಮ ಸ್ವಂತಿಕೆಯಿಂದ ಅವರಿಗೆ ಸಂಬಳ ಕೊಟ್ಟು ಕನ್ನಡ ಕಲಿಸುವ ಕಾರ್ಯ ಮಾಡಿದ್ದಾರೆ. ಮತ್ತು ನಿರಂತರವಾಗಿ ಬ್ರಾಹ್ಮಿಮೂರ್ತದಲ್ಲಿ ಕೋಟಿ ಜಪ ಮಾಡುತ್ತಿದ್ದರು ಎಂದರು.
ಕನ್ನಡ ಪ್ರಗತಿ ಸಂಘದ ಗೌರವಾಧ್ಯಕ್ಷರಾದ ಡಾ|| ರಮೇಶ ಮೂಲಗೆ ರವರು ಅಧ್ಯಕ್ಷತೆ ವಹಿಸಿ, ಮಾತನಾಡುತ್ತಾ, ಲಿಗಾಡೆ ತಾಯಿಯವರ ಕನ್ನಡ ಮತ್ತು ಸಮಾಜ ಸೇವೆ ಸ್ತ್ರೀಕುಲಕ್ಕೆ ಆದರ್ಶರಾಗಿದ್ದಾರೆ ಎಂದು ತಿಳಿಸಿದರು. ಕನ್ನಡ ಪ್ರಗತಿ ಸಂಘದ ಅಧ್ಯಕ್ಷರಾದ ಉಮಾಕಾಂತ ಮೀಸೆ ರವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಕನ್ನಡ ನಾಡ ನುಡಿ ಸೇವೆ ಮಾಡುತ್ತಿರುವ ಮತ್ತು ಶಾಲೆಯಲ್ಲಿ ಮಕ್ಕಳಿಗೆ ಉತ್ತಮ ರೀತಿಯಲ್ಲಿ ಭೋದನೆ ಮಾಡುತ್ತಿರುವ ಶಿಕ್ಷಕ ವೃಂದದವರಿಗೆ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸುವ ಕಾರ್ಯ ನಮ್ಮದಾಗಿದೆ ಎಂದರು.
ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕರಾದ ಡಾ|| ಸಂಜೀವಕುಮಾರ ಅತಿವಾಳೆ ರವರು ಮಾತನಾಡಿ, ಗಡಿ ಭಾಗದಲ್ಲಿ ಸಾಹಿತ್ಯ, ಸಂಸ್ಕೃತಿ ಬೆಳೆವಣಿಗೆಗಾಗಿ ವಿವಿಧ ರೀತಿಯ ಕನ್ನಡಪರ ಸಂಘಟನೆ ಸೇರಿ ನಿರಂತರ ಕಾರ್ಯ ಮಾಡಲಾಗುತ್ತದೆ ಎಂದರು. ಇದೇ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇದೆ ಸಂದರ್ಭದಲ್ಲಿ ನಾಡು, ನುಡಿ, ಸಮಾಜ ಸೇವೆ ಮಾಡುತ್ತಿರುವ ಮಹಿಳೆಯರಾದ, ಬಿ.ಎಂ. ಶಶಿಕಲಾ, ಪುಣ್ಯವತಿ ವಿಸಾಜೀ, ಪುಷ್ಪಾ ಕನಕ, ಶ್ರೀದೇವಿ ಪಾಟೀಲ್, ಸುನಿತಾ ಬಿರಾದಾರ, ಸಿದ್ಧಮ್ಮಾ ಹಳಕಾಯಿ ಯವರನ್ನು ಡಾ|| ಜಯದೇವಿತಾಯಿ ಲಿಗಾಡೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ತಿಳಿಸಿದರು.
ಚನ್ನಮ್ಮ ಡೋಣಗಾಪೂರೆ, ವೈಜಿನಾಥ ಬಾಬಶೆಟ್ಟಿ, ದಿಲೀಪಕುಮಾರ ಮತ್ತು ಪವನಕುಮಾರ ಕನ್ನಡ ಗೀತೆ ಗಾಯನ ಮಾಡಿದರು. ಬಸವರಾಜ ಹಳ್ಳೆ ಸ್ವಾಗತ ಕೋರಿದರೆ, ಶಿಲ್ಪಾ ಮಹೇಶ ಮಜಗೆ ನಿರೂಪಿಸಿದರು. ಲಕ್ಷ್ಮಣ ಮೇತ್ರೆ ವಂದಿಸಿದರು.