ಆರೋಗ್ಯದ ಕಡೆಗೆ ಕಾಳಜಿ ವಹಿಸಿ
ಭಾಲ್ಕಿ:ಜು.2: ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರು ತಮ್ಮ ಕೆಲಸದ ಜತೆಗೆ ಆರೋಗ್ಯದ ಕಡೆಗೂ ಕಾಳಜಿ ವಹಿಸಬೇಕು ಎಂದು ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕ ಚಂದ್ರಶೇಖರ ಬನ್ನಾಳೆ ಹೇಳಿದರು.
ತಾಲೂಕಿನ ಖಟಕ್ ಚಿಂಚೋಳಿ ಗ್ರಾಮದಲ್ಲಿ ನರೇಗಾದಡಿ ಕೂಲಿ ಕಾರ್ಮಿಕರಿಗಾಗಿ ಸೋಮವಾರ ಆಯೋಜಿಸಿದ್ದ ಆರೋಗ್ಯ ತಪಾಸಣೆ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೂಲಿ ಕಾರ್ಮಿಕರು ಆರೋಗ್ಯವಾಗಿದ್ದರೆ ನರೇಗಾ ಯೋಜನೆಯಲ್ಲಿ ಅತಿ ಹೆಚ್ಚಿನ ಮಾನವ ದಿನಗಳ ಸೃಜನೆಯ ಗುರಿ ತಲುಪಲು ಸಾಧ್ಯವಾಗುತ್ತದೆ.
ಈ ಹಿನ್ನೆಲೆಯಲ್ಲಿ ಕೂಲಿ ಕಾರ್ಮಿಕರು ಆಗಾಗ ಆರೋಗ್ಯ ತಪಾಸಣೆಗೆ ಒಳಪಡಿಸುವುದು ಹೀಗೆ ಆರೋಗ್ಯದಲ್ಲಿ ಸಮತೋಲನ ಕಾಯ್ದುಕೊಂಡು ದೈನಂದಿನ ಜೀವನವನ್ನು ನಡೆಸುವುದರ ಬಗ್ಗೆ ಹೆಚ್ಚಿನ ಕಾಳಜಿ ತೋರಬೇಕು ಎಂದು ಸಲಹೆ ನೀಡಿದರು.
ಡಾ.ಶಶೇನಾಗ ಹೆಬ್ಬಾರೆ ಅವರು ಕೂಲಿ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿ ಆರೋಗ್ಯದ ಕಡೆಗೆ ಗಮನ ಕೊಡುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಸಂಗೀತಾ ಅನಿಲಕುಮಾರ, ಸದಸ್ಯ ಚಂದ್ರಶೇಖರ ಕಡಗಂಚಿ, ಟಿಸಿ ಮಲ್ಲಿಕಾರ್ಜುನ, ಪಿಡಿಓ ದಿಲೀಪ ಸಂತಪೂರೆ, ಸಂಗಮೇಶ ಪಾಟೀಲ್, ಸತೀಶ ಚಂದ್ರಶೇಖರ, ಸಿದ್ದಪ್ಪ ಬಾಮರಡ್ಡಿ, ಆಕಾಶ ಸೇರಿದಂತೆ ಹಲವರು ಇದ್ದರು.