ಕಬ್ಬೂರಿನಲ್ಲಿ ಸರ್ಕಾರಿ ಪೂರ್ವ ಪ್ರಾಥಮಿಕ ಶಾಲೆ ಆರಂಭ:  ಜಾಥಾ ಮೂಲಕ ಅರಿವು
ಸಂಜೆವಾಣಿ ವಾರ್ತೆ
ದಾವಣಗೆರೆ.ಜು.೨: ಕಬ್ಬೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ಶಾಲೆ (ಎಲ್.ಕೆ.ಜಿ.) ಆರಂಭವಾಗುತ್ತಿದ್ದು, ಗ್ರಾಮದಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಸೋಮವಾರ ಊರಿನ ಗ್ರಾಮಸ್ಥರು, ಶಿಕ್ಷಕರು, ಎಸ್ ಡಿಎಂಸಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಮಕ್ಕಳಿಂದ ಜಾಥಾ ಹಮ್ಮಿಕೊಳ್ಳಲಾಗಿತ್ತು. ಕೇಂದ್ರ ಸರ್ಕಾರ ಶಿಕ್ಷಣ ಮಂತ್ರಾಲಯದ ವಾರ್ಷಿಕ ಯೋಜನಾ ಮಂಡಳಿಯಲ್ಲಿ ಅನುಮೋದನೆಗೊಂಡಂತೆ ಕರ್ನಾಟಕ ರಾಜ್ಯದ ಆಯ್ದ 578 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು (ಎಲ್ ಕೆಜಿ) ಆರಂಭಿಸಲು ತಿಳಿಸಿದ್ದು, ರಾಜ್ಯ ಸರ್ಕಾರ ಅನುಮತಿ ನೀಡಿದೆ.ಈ ನಿಟ್ಟಿನಲ್ಲಿ ದಾವಣಗೆರೆ ದಕ್ಷಿಣ ವಲಯದ ಕಬ್ಬೂರು ಹಿರಿಯ ಪ್ರಾಥಮಿಕ ಶಾಲೆ ಆಯ್ಕೆಯಾಗಿದ್ದು, ಅದರನ್ವಯ ಎಸ್ ಡಿಎಂಸಿ ಮತ್ತು ಸ್ಥಳೀಯ ಮಟ್ಟದಲ್ಲಿ ಪ್ರಚಾರ, ಕೊಠಡಿ ಸಿದ್ಧತೆ, ಶಿಕ್ಷಕರು ಮತ್ತು ಆಯಾ ನೇಮಕ, ದಾಖಲಾತಿ ಇತ್ಯಾದಿ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಕಬ್ಬೂರು ಹಾಗೂ ಸುತ್ತಮುತ್ತಲಿನ ಗ್ರಾಮದ 31.05.2024 ಕ್ಕೆ 4 ವರ್ಷ ತುಂಬಿದ ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳಲಾಗುವುದು. ಇದರ ಪ್ರಯೋಜನವನ್ನು ಪೋಷಕರು ಪಡೆದುಕೊಳ್ಳುವಂತೆ ಶಾಲೆಯ ಎಸ್ ಡಿಎಂಸಿ ಅಧ್ಯಕ್ಷ ಶರಣಪ್ಪ, ಮುಖ್ಯ ಶಿಕ್ಷಕ ಕಲ್ಲೇಶ್ವರಪ್ಪ,  ಗ್ರಾಂ.ಪಂ. ಸದಸ್ಯರಾದ ರಾಜಣ್ಣ, ಕಲ್ಲೇಶಪ್ಪ,ಕೋಟಿ, ಪಾರ್ವತಮ್ಮ ಮಂಜಪ್ಪ, ವಿಜಯಮ್ಮ, ಮಹೇಶಾಚಾರಿ, ಕಬ್ಬೂರು ಗ್ರಾಮದ ನಾಗರೀಕರು, ಶಿಕ್ಷಕ ವರ್ಗದವರು ಕೋರಿದರು.