ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ಹರ್ಷಿಕಾ ದಂಪತಿ
ಬೆಂಗಳೂರು, ಜೂ.೨- ಕನ್ನಡ ಚಿತ್ರರಂಗದ ತಾರಾ ಜೋಡಿ ಕೊಡಗಿನ ಮುದ್ದು ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೂಣಚ್ಚ ತಮ್ಮ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕೊಡವ ಸಾಂಪ್ರದಾಯಿಕ ಉಡುಗೆಯಲ್ಲಿ ವಿಭಿನ್ನ ಫೋಟೋ ಶೂಟ್ ಮಾಡಿದ ದಂಪತಿಗಳು ಮಗುವಿನ ಆಗಮನದ ಸುದ್ದಿಯನ್ನು ಪ್ರಕಟಿಸಿದ್ದಾರೆ.
ಇದೇ ಅಕ್ಟೋಬರ್ ನಲ್ಲಿ ಮಗು ಜನಿಸಲಿದೆ ಎಂದು ಹರ್ಷಿಕಾ ದಂಪತಿ ಸಂತಸ ವ್ಯಕ್ತಪಡಿಸಿದ್ದಾರೆ. ಬಹಳ ದಿನಗಳಿಂದ ಸ್ನೇಹಿತರಾಗಿದ್ದ ಭುವನ್ ಮತ್ತು ಹರ್ಷಿಕಾ ಕಳೆದ ವರ್ಷ ಆಗಸ್ಟ್ ೨೪ ರಂದು ಕೊಡಗಿನಲ್ಲಿ ತಮ್ಮ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ಈಗ ವರ್ಷದೊಳಗೆ ಮಗು ಬರಲಿದೆ ಎಂಬ ಸುದ್ದಿ ನೀಡಿದ್ದಾರೆ.
ಸಾಂಪ್ರದಾಯಿಕ ಕೊಡವ ಹಳ್ಳಿಯ ಮನೆಯಲ್ಲಿ ಕ್ಲಾಸಿಕ್ ಶೈಲಿಯಲ್ಲಿ ದಂಪತಿಗಳು ಫೋಟೋಶೂಟ್ ಮಾಡಿದ್ದಾರೆ. ಇಡೀ ಕುಟುಂಬವು ಒಂದೇ ಶೈಲಿಯಲ್ಲಿ ಉಡುಗೆ ಧರಿಸಿದೆ. ಕಪ್ಪು ಮತ್ತು ಕಂದು ಬಣ್ಣದ ಕೊಡವ ಶೈಲಿಯ ಸೀರೆಯನ್ನು ಧರಿಸಿರುವ ಹರ್ಷಿಕಾ ತನ್ನ ಬೇಬಿ ಬಂಪ್ ತೋರಿಸಿದ್ದಾರೆ. ತಂದೆಯಾಗಲಿರುವ ಭುವನ್ , ಕೊಡವ ಸಂಪ್ರದಾಯದ ಕಪ್ಪು ಕೋಟು ಧರಿಸಿ, ತಲೆಗೆ ಪೇಟ ಧರಿಸಿ, ಕೈಯಲ್ಲಿ ಬಂದೂಕು ಹಿಡಿದು ಗರ್ಭಿಣಿ ಪತ್ನಿಯೊಂದಿಗೆ ನಿಂತಿದ್ದಾರೆ.
ಮದುವೆಯ ನಂತರ ಹರ್ಷಿಕಾ ನಟನೆಯಿಂದ ವಿರಾಮ ತೆಗೆದುಕೊಂಡು ಕುಟುಂಬದತ್ತ ಗಮನ ಹರಿಸಿದರು. ಮಗುವಿನ ಜನನದ ನಂತರ, ಅವರು ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗುವ ನಿರೀಕ್ಷೆಯಿದೆ. ಹರ್ಷಿಕಾ ಮತ್ತು ಭುವನ್ ಒಂದೇ ಊರಿನಲ್ಲಿ ಅದೇ ಸಂಪ್ರದಾಯದಲ್ಲಿ ಬೆಳೆದ ದಂಪತಿಗಳು. ಸ್ಯಾಂಡಲ್‌ವುಡ್‌ನ ಈ ಸ್ಟಾರ್ ಜೋಡಿ ಸದ್ಯ ತಮ್ಮ ಜೀವನದಲ್ಲಿ ಹೊಸ ಸದಸ್ಯರ ಆಗಮನವನ್ನು ಆನಂದಿಸುತ್ತಿದ್ದಾರೆ.
ಫ್ಯಾಷನ್ ಕ್ಷೇತ್ರದಲ್ಲಿ ಹೆಚ್ಚು ಗುರುತಿಸಿಕೊಂಡಿರುವ ಭುವನ್ ಮತ್ತು ಹರ್ಷಿಕಾ ಜೋಡಿ ಈಗ ಪ್ರೆಗ್ನೆನ್ಸಿ ರಿವೀಲ್ ಫೋಟೋ ಶೂಟ್‌ಗಾಗಿ ವಿಶಿಷ್ಟ ಪರಿಕಲ್ಪನೆಯನ್ನು ಯೋಜಿಸಿದ್ದಾರೆ. ಇಲ್ಲಿ ದಂಪತಿಗಳು ಕೊಡವರ ಸಂಪೂರ್ಣ ಕುಟುಂಬ ಶೈಲಿಯನ್ನು ಅನಾವರಣಗೊಳಿಸಿದ್ದಾರೆ. ಕುಟುಂಬದ ಸದಸ್ಯರೆಲ್ಲರೂ ಸಾಂಪ್ರದಾಯಿಕ ಉಡುಗೆಯಲ್ಲಿ ನಿಂತು ಗರ್ಭಿಣಿ ಸೊಸೆಯನ್ನು ಪರಿಚಯಿಸುವ ಸ್ಟೈಲ್ ವಿಡಿಯೋ ಈಗ ನೋಡುಗರ ಗಮನ ಸೆಳೆಯುತ್ತಿದೆ.