ದೆಹಲಿ ವಾಸಿ ಎಂ ಬಿ ಅಯ್ಯನಹಳ್ಳಿ ವ್ಯಕ್ತಿ ನೇಣಿಗೆ ಶರಣು.
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜು.2 :- ದೆಹಲಿಯ ಕರ್ನಾಟಕ ಭವನದಲ್ಲಿ ಕಿಚನ್ ಮೇಟ್ ಆಗಿದ್ದ ತಾಲೂಕಿನ ಎಂ ಬಿ ಅಯ್ಯನಹಳ್ಳಿ ವ್ಯಕ್ತಿ ಹೊಸಹಳ್ಳಿ ಹೊರವಲಯದಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ಸಂಜೆಯಿಂದ ಸೋಮವಾರ ಮಧ್ಯಾಹ್ನದ ಮದ್ಯಾವಧಿಯಲ್ಲಿ ಜರುಗಿದೆ.
ಎಂ ಬಿ ಅಯ್ಯನಹಳ್ಳಿ ನಿವೃತ್ತ ಶಿಕ್ಷಕ ರಾಮಣ್ಣ ಇವರ ಮಗನಾದ ದೆಹಲಿಯಲ್ಲಿ ಕರ್ನಾಟಕ ಭವನದಲ್ಲಿ ಕಿಚನ್ ಮೇಟ್ ಆಗಿದ್ದ ಮಾರುತಿ (35)ಎಂಬಾತಾನೆ ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆ ಹೊಂದಿ ನೇಣಿಗೆ ಶರಣಾದ ವ್ಯಕ್ತಿಯಾಗಿದ್ದಾನೆ.
ಈತನು ತನ್ನ ಪತ್ನಿಯೊಂದಿಗೆ ಜೂನ್ 27ರಂದು ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದು ನಂತರ ಚಳ್ಳಕೆರೆಗೆ ಬಂದು ಪತ್ನಿಯನ್ನು ತವರು ಮನೆಗೆ ಬಿಟ್ಟು ಎಂ ಬಿ ಅಯ್ಯನಹಳ್ಳಿಗೆ ಬಂದಿದ್ದಾರೆಂದು ತಿಳಿದಿದೆ. ಮಾರುತಿ ಕೆಲ ದಿನಗಳಿಂದ ಮಾನಸಿಕವಾಗಿ ಒಬ್ಬನೇ ಕುಳಿತು ಏನೇನೋ ಯೋಚನೆ ಮಾಡುತ್ತಿದ್ದು ಪತ್ನಿ ಕೇಳಿದರು ಏನನ್ನೂ ಹೇಳದೆ ಮನೆಯಲ್ಲಿ ರಾತ್ರಿ ಸಮಯದಲ್ಲಿ ಸರಿಯಾಗಿ ನಿದ್ರೆ ಸಹ ಮಾಡದೆ ಇದ್ದು ಎಂ ಬಿ ಅಯ್ಯನಹಳ್ಳಿ ಗೆ ಬಂದ ನಂತರ  ಮಾನಸಿಕವಾಗಿ ಮನನೊಂದಿದ್ದ  ಮಾರುತಿ ಭಾನುವಾರ ಸಂಜೆಯಿಂದ ಯಾರಿಗೂ ಕಾಣದೆ ಇದ್ದು ಎಲ್ಲಾ ಕಡೆ ಹುಡುಕಿದರೂ ಸಿಗದೇ ಇದ್ದು ನಂತರ ಸೋಮವಾರ ನಸುಕಿನ ಜಾವ ಹೊಸಹಳ್ಳಿ ಹೊರವಲಯದ ಶಾನುಭೋಗರ ಹೊಲದ ಬದುವಿನಲ್ಲಿಯ ಹುಣಸೇ ಮರಕ್ಕೆ ಹಗ್ಗದಿಂದ ಕುತ್ತಿಗೆಗೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುತ್ತಾನೆ ಎಂದು ಮೃತ ಮಾರುತಿ ಪತ್ನಿ ನೀಡಿದ ದೂರಿನಂತೆ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.