ಪತಿಯ ಪ್ರೇಯಸಿ ಮನೆ ಎದುರು ಪತ್ನಿ ಧರಣಿ
(ಸಂಜೆವಾಣಿ ವಾರ್ತೆ)
ದಾವಣಗೆರೆ. ಜು.೨; ಪತಿ ಮನೆಗೆ ಬರುತ್ತಿಲ್ಲ ಎಂದು ಆರೋಪಿಸಿ ಪೊಲೀಸ್ ಪೇದೆಯ ಪತ್ನಿಯೊಬ್ಬರು ಪತಿಯು ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯ ಮನೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಘಟನೆ ದಾವಣಗೆರೆಯಲ್ಲಿ ಜರುಗಿದೆ. ೨೦೧೩ ರಲ್ಲಿ ಹರಪನಹಳ್ಳಿ ತಾಲೂಕಿನ ಎರಡತ್ತೇನಹಳ್ಳಿ ಗ್ರಾಮದ ಪೊಲೀಸ್ ಕಾನ್ಸಸ್ಟೇಬಲ್ ಗೋಣಪ್ಪ ಎಂಬುವವನೊಂದಿಗೆ ಸೌಮ್ಯ ಅವರ ಮದುವೆಯಾಗಿತ್ತು. ಮದುವೆಯಾಗಿ ಸುಖ ಸಂಸಾರಕ್ಕೆ ಸಾಕ್ಷಿಯಾಗಿ ಇಬ್ಬರು ಮುದ್ದಾದ ಹೆಣ್ಣು ಮಕ್ಕಳು ಇದ್ದಾರೆ. ಆದರೆ ಇದೀಗ ಗೋಣೆಪ್ಪ ಗೀತಾ ಎಂಬ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆ ಎಂದು ಆರೋಪಿಸಿ ದಾವಣಗೆರೆಯ ರಾಮನಗರದಲ್ಲಿರುವ ಗೀತಾ ಅವರ ಮನೆಯ ಮುಂದೆ ಪೊಲೀಸ್ ಪೇದೆಯ ಪತ್ನಿ ಸೌಮ್ಯ ಮಕ್ಕಳೊಂದಿಗೆ ಪ್ರತಿಭಟನೆ ನಡೆಸುತ್ತಿದ್ದಾರೆ. ಗೋಣಪ್ಪ ನನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ, ಮನೆಗೆ ಬರ್ತಾ ಇಲ್ಲ, ಜೀವನಾಂಶ ಕೂಡ ಕೊಡ್ತಾ ಇಲ್ಲ ಎಂದು ಸೌಮ್ಯ ಆರೋಪಿಸಿದ್ದಾರೆ.ಗೋಣಪ್ಪ ಪ್ರಸ್ತುತ ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿ ಪೇದೆಯಾಗಿ ಕೆಲಸ ಮಾಡುತ್ತಿದ್ದಾರೆ. ದಾವಣಗೆರೆಯ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕೆಲಸ ಮಾಡುತ್ತಿರುವಾಗ ಪ್ರಕರಣವೊಂದರಲ್ಲಿ ಗೀತಾ ಗೋಣಪ್ಪನಿಗೆ ಪರಿಚಯವಾಗಿದ್ಧಾರೆ. ಅಲ್ಲಿಂದ ಇಬ್ಬರ ನಡುಗೆ ಪ್ರೇಮಾಂಕುರವಾಗಿದೆ. ಹಾಗಾಗಿ ಗೋಣಪ್ಪ ಗೀತಾಳೊಂದಿಗೆ ಇದ್ದು, ನನ್ನನ್ನು ಕಡೆ ಗಣಿಸಿದ್ದಾರೆಂದು ಸೌಮ್ಯ ಆರೋಪ ಮಾಡುತ್ತಿದ್ದಾರೆ. ಇನ್ನು ಸೌಮ್ಯ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಇಬ್ಬರು ಅಸ್ತಮದಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಹಣ ಇಲ್ಲದಂತಾಗಿದೆ ಎಂದು ಸೌಮ್ಯ ತಮ್ಮ ಅಳಲು ತೋಡಿಕೊಂಡಿದ್ದಾರೆ.