ನಾಳೆ ತವರಿಗೆ ಯೋಧನ ಪಾರ್ಥಿವ ಶರೀರ
ವಿಜಯಪುರ,ಜು.೨:ಜಿಲ್ಲೆಯ ತಿಕೋಟಾ ಪಟ್ಟಣದ ವೀರ ಯೋಧನೊಬ್ಬ ಸೇವಾ ನಿರತ ವೇಳೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ವೀರ ಮರಣ ಹೊಂದಿದ್ದು, ಅವರ ಪಾರ್ಥಿವ ಶರೀರ ನಾಳೆ ಬೆಳಗ್ಗೆ ತಿಕೋಟಾ ಪಟ್ಟಣಕ್ಕೆ ಬರಲಿದೆ.
ತಿಕೋಟಾ ಪಟ್ಟಣದ ರಾಜು ಗಿರಿಮಲ್ಲ ಕರ್ಜಗಿ ವೀರ ಮರಣ ಹೊಂದಿದ ಯೋಧ.
ಸೋಮವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ವೀರ ಮರಣವನ್ನು ಅಪ್ಪಿದ ಯೋಧ ರಾಜು ಅವರ ಪಾರ್ಥಿವ ಶರೀರವನ್ನು ಸೈನಿಕ ಅಧಿಕಾರಿಗಳು ಹೈದ್ರಾಬಾದ ಮೂಲಕ ವಿಜಯಪುರ ಜಿಲ್ಲೆಯ ತಿಕೋಟಾ ಪಟ್ಟಣಕ್ಕೆ ತರಲಿದ್ದಾರೆ.
ಯೋಧ ರಾಜು ಅವರು ಮೊದಲಿಗೆ ಮಧ್ಯಪ್ರದೇಶದ ಸಾಗರ ಜಿಲ್ಲೆಯ ಮಹಾ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸದ್ಯಕ್ಕೆ ಅವರು ಡೆಪ್ಯೂಟೇಶನ್‌ನಿಂದ ಜಮ್ಮು ಮತ್ತು ಕಾಶ್ಮೀರಿನ ೫೧ ರಾಷ್ಟ್ರೀಯ ರೈಫಲ್ಸ್ ಬಟಾಲಿಯನ್‌ನಲ್ಲಿ ಹವಾಲ್ದಾರರಾಗಿ ಸೇವೆಯಲ್ಲಿದ್ದರು.
ಯೋಧ ರಾಜು ಅವರು ಭಾರತೀಯ ಭೂಸೇನೆಯಲ್ಲಿ ೧೬ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಯೋಧನಿಗೆ ಕಳೆದ ೧೦ ವರ್ಷಗಳ ಹಿಂದೆ ಮದುವೆಯಾಗಿತ್ತು. ಇನ್ನೂ ಮಕ್ಕಳಿರಲಿಲ್ಲ. ವೀರ ಮರಣ ಹೊಂದಿದ ಯೋಧನಿಗೆ ತಂದೆ-ತಾಯಿ, ಸಹೋದರ ಇದ್ದಾರೆ.
ಯೋಧನ ಕುಟುಂಬದಲ್ಲಿ ಆಕಂದ್ರನ ಮುಗಿಲು ಮುಟ್ಟಿದೆ. ಇಡೀ ತಿಕೋಟಾ ಪಟ್ಟಣದಲ್ಲಿ ಸೂತಕ ಛಾಯೆ ಆವರಿಸಿದೆ.