ಪೇದೆ ಶವ ಪತ್ತೆಗೆ ೨೫೦ ಸಿಸಿಟಿವಿ ಪರಿಶೀಲನೆ
ಬೆಂಗಳೂರು,ಜು.೨- ಮಡಿವಾಳ ಪೊಲೀಸ್ ಕಾನ್ಸ್‌ಟೇಬಲ್ ಶಿವರಾಜ್ ಆತ್ಮಹತ್ಯೆ ಪ್ರಕರಣ ಮಾಡಿಕೊಂಡಿದ್ದು,ಅವರ ಮೃತದೇಹವನ್ನು ಪೊಲೀಸರು ಪತ್ತೆ ಮಾಡಿರುವುದು ರೋಚಕವಾಗಿದೆ.!
ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರು ಮೃತದೇಹ ಪತ್ತೆ ಮಾಡಲು ಪೊಲೀಸರು ಬರೋಬ್ಬರಿ ೨೫೦ ಸಿಸಿಟಿವಿ ದೃಶ್ಯಗಳ ಪರಿಶೀಲನೆ ಮಾಡಿದ್ದಾರೆ.
ಸುಬ್ರಮಣ್ಯಪುರ ಪೊಲೀಸರು ಹಾಗೂ ಮಡಿವಾಳ ಪೊಲೀಸರಿಂದ ಶಿವರಾಜ್‌ಗಾಗಿ ಹುಡುಕಾಟ ನಡೆದಿತ್ತು. ಆದರೆ, ಮಡಿವಾಳ ಪೊಲೀಸ್ ಸಿಬ್ಬಂದಿಯಾಗಿದ್ದ ಕಾರಣ ಅಲ್ಲಿನ ಪೊಲೀಸರೇ ಹುಡುಕಾಟ ಶುರು ಮಾಡಿದ್ದರು.
ಇನ್ಸ್‌ಪೆಕ್ಟರ್ ಮೌಖಿಕ ಆದೇಶದ ಹಿನ್ನಲೆ ಹುಡುಕಾಟ ನಡೆಸಲಾಗಿದ್ದು, ಸುಬ್ರಮಣ್ಯಪುರದಿಂದ ಮೈಸೂರು ರಸ್ತೆಯ ಜ್ಞಾನಭಾರತಿ ಮೆಟ್ರೋ ಸ್ಟೇಷನ್ ವರೆಗೂ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಲಾಗಿದೆ.
೫ ದಿನ ನಿರಂತರ ಶೋಧ:
ಶಿವರಾಜ್ ನಾಪತ್ತೆಯಾಗಿ ಐದು ದಿನಗಳಿಂದ ನಿರಂತರವಾಗಿ ಅವರಿಗಾಗಿ ಮಡಿವಾಳ ಪೊಲೀಸರು ಹುಡುಕಾಟ ನಡೆಸಿದ್ದರು. ನಿರಂತರವಾಗಿ ಸಿಸಿಟಿವಿ ಪರಿಶೀಲನೆ ನಡೆಸಿದ್ದ ಪೊಲೀಸರಿಗೆ, ಕೊನೆಯಲ್ಲಿ ಶಿವರಾಜ್ ಜ್ಞಾನಭಾರತಿ ಮೆಟ್ರೋ ನಿಲ್ದಾಣಕ್ಕೆ ಬಂದು ಪಾರ್ಕಿಂಗ್ ಜಾಗದಲ್ಲಿ ಬೈಕ್ ನಿಲ್ಲಿಸಿ ನೀರಿನ ಬಾಟಲಿ ಹಿಡಿದು ಬೆಂಗಳೂರು ವಿವಿ ಆವರಣದ ಒಳಗೆ ನಡೆದುಕೊಂಡು ತೆರಳಿದ್ದು ಕಾಣಿಸಿತ್ತು.
ಸಿಸಿಟಿವಿ ದೃಶ್ಯಗಳ ಪರಿಶೀಲನೆಯ ಆಧಾರದಲ್ಲಿ ನಿನ್ನೆ ಬೆಳಗ್ಗೆ ಬೆಂಗಳೂರು ವಿವಿ ಆವರಣದೊಳಗೆ ಮಡಿವಾಳ ಪೊಲೀಸರು ಶೋಧ ನಡೆಸಿದಾಗ ಪಾಳು ಬಿದ್ದ ಬಾವಿಯಲ್ಲಿ ಶಿವರಾಜ್ ಮೃತದೇಹ ತೇಲುತ್ತಿತ್ತು. ಕೂಡಲೇ ಜ್ಞಾನಭಾರತಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಜ್ಞಾನಭಾರತಿ ಪೊಲೀಸರು ಸ್ಥಳಕ್ಕೆ ಬಂದು ಮೃತದೇಹ ಹೊರತೆಗೆಸಿ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಕೊಲೆಯಲ್ಲ ಆತ್ಮಹತ್ಯೆ:
ವಿವಿ ಆವರಣದೊಳಗೆ ಶಿವರಾಜ್ ಒಬ್ಬೊಂಟಿಯಾಗಿ ನಡೆದು ಬಂದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಹೀಗಾಗಿಯೇ ಪೊಲೀಸರು ಇದು ಕೊಲೆಯಲ್ಲ, ಆತ್ಮಹತ್ಯೆ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಶಿವರಾಜ್ . ಮೃತದೇಹ ಹೊರತೆಗೆದಾಗ ಆತ ಬಾವಿಗೆ ಕಲ್ಲು ಕಟ್ಟಿಕೊಂಡು ಹಾರಿರುವುದು ಪತ್ತೆಯಾಗಿದೆ.
ಆರಂಭದಲ್ಲಿ ಕಾನ್ಸ್‌ಟೇಬಲ್ ಶಿವರಾಜ್ ಕೊಲೆಯಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿತ್ತು. ಆದರೆ, ಸಿಸಿಟಿವಿಯಲ್ಲಿ ಒಬ್ಬನೇ ತೆರಳಿರುವುದು ಗೊತ್ತಾದ ಕಾರಣ ಪೊಲೀಸರು ಇದೊಂದು ಆತ್ಮಹತ್ಯೆ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.
೩ ತಿಂಗಳ ಹಿಂದೆ ವಿವಾಹ:
ಕೌಟುಂಬಿಕ ಕಾರಣಗಳಿಂದಾಗಿ ಶಿವರಾಜ್ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಮೂರು ತಿಂಗಳ ಹಿಂದಷ್ಟೇ ಶಿವರಾಜ್ ವಿವಾಹವಾಗಿತ್ತು. ಆದರೆ, ಅವರ ಕುಟುಂಬದಲ್ಲಿ ಎಲ್ಲವೂ ಸರಿ ಇರಲಿಲ್ಲ. ಶಿವರಾಜ್ ಮತ್ತು ಕುಟುಂಬದವರ ವಿರುದ್ಧ ಅವರ ಪತ್ನಿ ದಾವಣಗೆರೆಯಲ್ಲಿ ದೂರು ದಾಖಲಿಸಿದ ಬೆನ್ನಲ್ಲೇ ಕೆಲಸಕ್ಕೆಂದು ಹೊರಟಿದ್ದ ಶಿವರಾಜ್ ನಾಪತ್ತೆಯಾಗಿದ್ದರು. ಘಟನೆ ಸಂಬಂಧ ಅವರ ಸಹೋದರ ದೂರು ನೀಡಿದ್ದರು.
ದೂರು ಆಧರಿಸಿ ಶಿವರಾಜ್ ಪತ್ತೆಗೆ ಕಾರ್ಯಾಚರಣೆಗಿಳಿದ ಪೊಲೀಸರು ಕೊನೆಗೂ ಅವರ ಮೃತದೇಹ ಪತ್ತೆಮಾಡುವಲ್ಲಿ ಯಶಸ್ವಿಯಾಗಿದ್ದಾರೆ.