ಪತಿ ವಿರುದ್ಧ ಪತ್ನಿ ಪ್ರಕರಣ ದಾಖಲಿಸಿದ ಅರ್ಜಿ ರದ್ದು
ಬೆಂಗಳೂರು, ಜು.೨- ಪತಿಯ ಜೊತೆ ಲೈಂಗಿಕ ಸಂಪರ್ಕ ಹೊಂದದೆ ಚರ್ಚೆಗೆ ಗ್ರಾಸವಾಗಿದ್ದ ಪ್ರಕರಣವೊಂದನ್ನು ಹೈಕೋರ್ಟ್ ವಜಾಗೊಳಿಸಿದೆ. ಪತಿಯ ವಿರುದ್ಧ ಸುಳ್ಳು ಆರೋಪ ಹೊರಿಸಿದ್ದ ಪತ್ನಿಯ ವಿರುದ್ಧ ಪತಿಗೆ ಕಾನೂನು ಕ್ರಮ ಕೈಗೊಳ್ಳಲು ಸ್ವಾತಂತ್ರ್ಯವಿದೆ ಎಂದು ಉಲ್ಲೇಖಿಸಿದೆ.
ಅಮೆರಿಕದ ಪ್ರಸಿದ್ಧ ಕಂಪನಿಯೊಂದರಲ್ಲಿ ಉತ್ಪಾದನಾ ಘಟಕದ ಎಂಜಿನಿಯರ್ ಆಗಿರುವ ೩೫ ವರ್ಷದ ಪತಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ಈ ಆದೇಶ ನೀಡಿತು. ಅರ್ಜಿದಾರರ ವಿರುದ್ಧ ವಿಚಾರಣಾ ನ್ಯಾಯಾಲಯದಲ್ಲಿರುವ ಪ್ರಕರಣವನ್ನು ಇದೇ ವೇಳೆ ರದ್ದುಗೊಳಿಸಿತು.
ಪ್ರಕರಣದಲ್ಲಿ ಪೊಲೀಸರ ಹೇಳಿಕೆ ಮತ್ತು ದೋಷಾರೋಪಣ ಪಟ್ಟಿಯಲ್ಲಿರುವ ಅಂಶಗಳನ್ನು ಪರಿಶೀಲಿಸಿ ದೂರುದಾರೆ ಪತ್ನಿಯ ದೂರಿನ ಲೋಪಗಳನ್ನು ಉಲ್ಲೇಖಿಸಿರುವ ನ್ಯಾಯಪೀಠ, ಭಾರತೀಯ ಸಂಪ್ರದಾಯದಂತೆ ವಿಧಿಬದ್ಧವಾಗಿ ಪಾಣಿಗ್ರಹಣ ಮಾಡಿರುವ ತನ್ನ ಪತಿಯ ವಿರುದ್ಧ ಧರ್ಮಪತ್ನಿ ಸಲ್ಲದ ಆರೋಪ ಹೊರಿಸಿ ಆತನನ್ನು ಕಂಗಾಲಾಗಿಸಿದ್ದಾರೆ.
ಕ್ಷುಲ್ಲಕ ಮತ್ತು ಕೌಟುಂಬಿಕ ಕಾರಣಗಳಿಗೆ ರೋಗದ ಲೇಪನ ಮಾಡಿ ವ್ಯಾಜ್ಯ ಹೂಡಿ ನ್ಯಾಯಾಲಯದ ಅಮೂಲ್ಯ ಸಮಯ ಹಾಳು ಮಾಡಿದ್ದಾರೆ. ಹೀಗಾಗಿ, ಪತ್ನಿಯ ವಿರುದ್ಧ ಪತಿ ಐಪಿಸಿ ಕಲಂ ೨೧೧ರ ಅಡಿಯಲ್ಲಿ ಕ್ರಿಮಿನಲ್ ದೂರು ದಾಖಲಿಸಿ ತಮಗಾಗಿರುವ ಅನ್ಯಾಯದ ವಿರುದ್ಧ ನ್ಯಾಯಪಡೆಯಲು ಅತ್ಯಂತ ಯೋಗ್ಯವಾಗಿದೆ ಎಂದು ಪೀಠ ಹೇಳಿದೆ.
ವರದಕ್ಷಿಣೆ ಕೇಳಿದ್ದಾರೆ ಎಂಬ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಪತ್ನಿಯು ತನ್ನ ಪತಿಯನ್ನು ಎಚ್‌ಐವಿ, ಸಿಫಿಲಿಸ್, ಹೆಪಟೈಟಿಸ್ ಬಿ ಮತ್ತು ಎಸ್‌ಟಿಡಿ ಪರೀಕ್ಷೆಗಳಿಗೆ ಒಳಪಡುವಂತೆ ಒತ್ತಾಯಿಸಿದ್ದಾರೆ. ಆದರೆ, ಈ ಸಂಬಂಧ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆಸಲಾದ ಈ ಎಲ್ಲಾ ಪರೀಕ್ಷೆಗಳಲ್ಲೂ ಪತಿಗೆ ಯಾವುದೇ ರೋಗವಿಲ್ಲ ಎಂಬುದು ದೃಢಪಟ್ಟಿದೆ.
ಆಕೆಯ ತಾಯಿ ಮತ್ತು ಸಹೋದರ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ವರದಕ್ಷಿಣೆ ಕಿರುಕುಳದ ಬಗ್ಗೆ ನಿರಾಕರಿಸಿದ್ದಾರೆ. ಹೀಗಾಗಿ, ಈ ಪ್ರಕರಣದಲ್ಲಿನ ಸಂಪೂರ್ಣ ದಾಖಲೆಗಳನ್ನು ಗಮನಿಸಿದಾಗ ಪತಿಯ ದೋಷ, ಕೌಟುಂಬಿಕ ಕ್ರೌರ್ಯದ ಆರೋಪಗಳು ನಿರಾಧಾರ ಎಂಬುದು ಸ್ಪಷ್ಟವಾಗಿದೆ ಎಂದು ನ್ಯಾಯಪೀಠ ವಿವರಿಸಿದೆ.