ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಪ್ರದಾನ
ಕೋಲಾರ,ಜು,೨:ಪ್ರತಿಭಾವಂತ ಪತ್ರಕರ್ತರು ಇಂದು ಪತ್ರಿಕಾರಂಗಕ್ಕೆ ಅಗತ್ಯವಿದ್ದು, ಪೋಷಕರು ತಮ್ಮ ಮಕ್ಕಳನ್ನು ಮೆಡಿಕಲ್,ಇಂಜಿನಿಯರಿಂಗ್‌ಗೆ ಸೀಮಿತ ಮಾಡದೇ ಪತ್ರಿಕೋದ್ಯಮ ಓದಲು ಪ್ರೇರಣೆ ನೀಡಬೇಕು ಎಂದು ವಿಜಯವಾಣಿ ಪತ್ರಿಕೆ ಪ್ರಧಾನ ಸಂಪಾದಕ ಕೆ.ಎನ್.ಚನ್ನೇಗೌಡ ಕರೆ ನೀಡಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸಾಧಕ ಪತ್ರಕರ್ತರನ್ನು ಸನ್ಮಾನಿಸಿ ಅವರು ಮಾತನಾಡಿ,ರಾಜ್ಯದಲ್ಲಿಯೇ ಅತಿ ಹೆಚ್ಚು ಪತ್ರಕರ್ತರನ್ನು ಹೊಂದಿರುವ ಕೋಲಾರ ಜಿಲ್ಲೆಯು ಅನೇಕ ಪ್ರತಿಭೆಗಳನ್ನು ಹೊರ ಹೊಮ್ಮಿದೆ. ಪತ್ರಿಕೋದ್ಯಮದಲ್ಲಿ ವರದಿಗಾರಿಕೆ ಮಾತ್ರವಲ್ಲದೆ, ಟೈಪಿಂಗ್, ಪ್ರೊಫಿಂಗ್ ,ವಿನ್ಯಾಸ, ಛಾಯ ಚಿತ್ರ, ಸಂಕಲನ, ಪ್ರಸಾರ,ಜಾಹಿರಾತು, ಮುಂತಾದ ವಿಭಾಗಗಳನ್ನು ಹೊಂದಿರುವ ಅನೇಕ ಅವಕಾಶಗಳಿವೆ. ನಿರೀಕ್ಷಿತ ಮಟ್ಟದ ಸೇವೆ ಸಲ್ಲಿಸುವಂತ ಅಸಕ್ತಿ ಇದ್ದವರಿಗೆ ಅವಕಾಶಗಳಿವೆ. ಅವುಗಳನ್ನು ಸದ್ಬಳಿಸಿ ಕೊಳ್ಳುವಂತಾಗ ಬೇಕು, ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರರಾದ ಪ್ರಭಾಕರ್ ಅವರು ಸೇರಿದಂತೆ ಅನೇಕ ಸಚಿವರ ಸಲಹೆಗಾರರು ಕೋಲಾರದವರು ಅಗಿದ್ದಾರೆ ಎಂದು ನೆನಪಿಸಿದ ಅವರ ಪತ್ರಿಕೋದ್ಯಮ ಶಿಕ್ಷಣ ಪಡೆದರೆ ಪತ್ರಕರ್ತರೇ ಆಗಬೇಕಿಂದಿಲ್ಲ, ಸರ್ಕಾರಿ ಉದ್ಯೋಗಗಳು ಸಿಗಲಿದೆ, ಸಚಿವರು,ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾಗಿಯೂ ಕೆಲಸ ಪಡೆಯಬಹುದು ಇದಕ್ಕೆ ಹಿರಿಯ ಪತ್ರಕರ್ತರಾಗಿದ್ದು, ಇದೀಗ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾಗಿರುವ ಕೆ.ವಿ.ಪ್ರಭಾಕರ್ ಸಾಕ್ಷಿಯಾಗಿದ್ದಾರೆ ಎಂದರು.
ಇತ್ತೀದಿನ ದಿನಗಳಲ್ಲಿ ಉತ್ತರ ಕನ್ನಡ,ದಕ್ಷಿಣ ಕನ್ನಡ ಜಿಲ್ಲೆಯ ಪತ್ರಕರ್ತರು ರಾಜ್ಯ ಮಾಧ್ಯಮವಲಯದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ, ಬಯಲು ಸೀಮೆಯಿಂದಲೂ ಪ್ರತಿಭಾನ್ವಿತ ಪತ್ರಕರ್ತರ ಅಗತ್ಯವಿದೆ ಎಂಬುದನ್ನು ಮನಗಂಡು ಪತ್ರಿಕೋದ್ಯಮ ಶಿಕ್ಷಣ ಪಡೆಯಲು ಸಲಹೆ ನೀಡಿದರು.
ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಮುಂದಿನ ತಲೆಮಾರಿನಲ್ಲಿ ಯುವ ಪತ್ರಕರ್ತರನ್ನು ಹುಡುಕುವ ಪರಿಸ್ಥಿತಿ ತಲೆದೋರಲಿದೆ, ಜಿಲ್ಲಾ ಪತ್ರಕರ್ತರ ಸಂಘವೂ ಯುವ ಪತ್ರಕರ್ತರಿಗೆ ತರಬೇತಿ ಆಯೋಜಿಸಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲೆಯ ಸಾಧಕರು
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನೀಡುವ ವಾರ್ಷಿಕ ಪ್ರಶಸ್ತಿಗೆ ಭಾಜನರಾದವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿದ್ದು, ದಿವಂಗತ ಜಿ.ನಾರಾಯಣಸ್ವಾಮಿ ನೆನಪಿನಲ್ಲಿ: ಕೋಲಾರದ ಪ್ರಿಯಪತ್ರಿಕೆ ದಿನಪತ್ರಿಕೆಯ ಸಂಪಾದಕ ಕೋ.ನಾ.ಮಂಜುನಾಥ್, ಕೆ.ಆರ್.ಕೃಷ್ಣಸ್ವಾಮಿ ನೆನಪಿನಲ್ಲಿ: ಶ್ರೀನಿವಾಸಪುರದ ವಿಜಯಧ್ವನಿ ದಿನಪತ್ರಿಕೆಯ ತಾಲೂಕು ವರದಿಗಾರ ಎನ್.ಕೃಷ್ಣಮೂರ್ತಿ, ಬಿ.ವಿ.ನರಸಿಂಹಮೂರ್ತಿ ನೆನಪಿನಲ್ಲಿ: ಕೋಲಾರದ ಕೋಲಾರ ಶಕ್ತಿ ದಿನಪತ್ರಿಕೆಯ ಸಂಪಾದಕಿ ಕೆ.ಗೋಪಿಕಾಮಲ್ಲೇಶ್, ಎಂ.ಮಲ್ಲೇಶ್ ನೆನಪಿನಲ್ಲಿ: ಬೂದಿಕೋಟೆ ಸಂಯುಕ್ತಕರ್ನಾಟಕ ದಿನಪತ್ರಿಕೆಯ ಹೋಬಳಿ ವರದಿಗಾರ ಪ್ಯಾರೇಜಾನ್, ಬಿ.ಎನ್.ಗುರುಪ್ರಸಾದ್ ನೆನಪಿನಲ್ಲಿ: ಮಾಲೂರಿನ ಈಸಂಜೆ ದಿನಪತ್ರಿಕೆಯ ತಾಲೂಕು ವರದಿಗಾರ ಎಸ್.ವಿ.ಲೋಕೇಶ್, ಹೆಚ್.ಎನ್.ಸೋಮಶೇಖರಗೌಡ ನೆನಪಿನಲ್ಲಿ: ಕೋಲಾರದ ಸುವರ್ಣ ಟಿ.ವಿ ಜಿಲ್ಲಾ ವರದಿಗಾರ ಸಿ.ದೀಪಕ್, ಬಿ.ಆರ್ಮುಗಂ ನೆನಪಿನಲ್ಲಿ: ಕೆ.ಜಿ.ಎಫ್ ಹೊಸದಿಗಂತ ದಿನಪತ್ರಿಕೆಯ ತಾಲೂಕು ವರದಿಗಾರ ಸಿ.ಎ.ಮುರಳೀಧರರಾವ್, ಸಿ.ಎಂ.ರಂಗಾರೆಡ್ಡಿ ನೆನಪಿನಲ್ಲಿ: ಮುಳಬಾಗಿಲಿನ ಕನ್ನಡಮಿತ್ರ ದಿನಪತ್ರಿಕೆಯ ತಾಲೂಕು ವರದಿಗಾರ ಪಿ.ಎಲ್.ಅಮೃತಯ್ಯ, ವಿ.ಎಂ.ನಾಗಪ್ಪ ಅವರ ನೆನಪಿನಲ್ಲಿ: ಕೋಲಾರದ ಪ್ರಜಾ ಟಿ.ವಿ ಕೆಮರಾಮೆನ್ ಸಿ.ಎನ್.ಪವನ್‌ಕುಮಾರ್‌ರನ್ನು ಸನ್ಮಾನಿಸಲಾಯಿತು.
ಜಿಲ್ಲೆಯ ಎಸ್ಸೆಸ್ಸೆಲ್ಸಿ,ದ್ವಿತೀಯ ಪಿಯುಸಿ,ಪದವಿಯಲ್ಲಿ ಉತ್ತಮ ಸಾಧನೆ ಮಾಡಿದ ೩೨ ಮಂದಿ ಪತ್ರಕರ್ತರ ಮಕ್ಕಳಿಗೆ ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬೆಂಗಳೂರು ವಿವಿ ಕುಲಪತಿ ಪ್ರೊ.ನಿರಂಜನ ವಾನಳ್ಳಿ ಪ್ರಧಾನ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ವಹಿಸಿದ್ದರು.ಕಾರ್ಯಕ್ರಮದಲ್ಲಿ ರಾಜ್ಯಸಂಘದ ಖಜಾಂಚಿ ವಾಸುದೇವಹೊಳ್ಳ, ಕಾರ್ಯಕಾರಿ ಸದಸ್ಯರಾದ ಮುನಿರಾಜು, ಕೆ.ಎಸ್.ಗಣೇಶ್,ಮಹಮದ್ ಯೂನಸ್ ಸೇರಿದಂತೆ ಜಿಲ್ಲೆಯ ಪತ್ರಕರ್ತರು, ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.