ಕನ್ನಡ ಸರ್ವರನ್ನು ಒಳಗೊಳ್ಳುವ ಭಾಷೆ
ಲಕ್ಷ್ಮೇಶ್ವರ,ಜು2: “ಕನ್ನಡ ಸರ್ವರನ್ನು ಒಳಗೊಳ್ಳುವ ಭಾಷೆ. ಸಾವಿರಾರು ವರ್ಷಗಳಿಂದ ಹಲವಾರು ಭಾಷೆಗಳು ಒತ್ತಡ ತಂದರೂ ಎಂದಿಗೂ ತನ್ನ ಪಾರಮ್ಯವನ್ನು ಉಳಿಸಿಕೊಂಡಿರುವ ಕನ್ನಡ ಭಾಷೆ ತನ್ನ ಅಸ್ಮಿತೆಯನ್ನು ಎಂದಿಗೂ ಬಿಟ್ಟು ಕೊಟ್ಟಿಲ್ಲ, ಕೊಡುವುದೂ ಇಲ್ಲ” ಎಂದು ಹಿರಿಯ ಸಾಹಿತಿ ಸಿ.ಜಿ.ಹಿರೇಮಠ ಅಭಿಪ್ರಾಯಪಟ್ಟರು. ಅವರು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಲಕ್ಷ್ಮೇಶ್ವರ ಘಟಕದ ವತಿಯಿಂದ ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮದ ಕಾರ್ಯಕ್ರಮ ಮಾಲಿಕೆಯ 18ನೇ ಕಾರ್ಯಕ್ರಮವಾದ ಕರ್ನಾಟಕ ಸಂಭ್ರಮ 50ರ ಅಂಗವಾಗಿ ರಾಜ್ಯಾದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ರಥಯಾತ್ರೆ ಲಕ್ಷ್ಮೇಶ್ವರಕ್ಕೆ ಆಗಮಿಸುತ್ತಿರುವ ಸವಿ ನೆನಪಿಗಾಗಿ ”ಪುಲಿಗೆರೆ ನಾಡಿಗೆ ಕನ್ನಡ ತೇರು:ಚಿಂತನ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಚಿಂತನದಲ್ಲಿ ಭಾಗವಹಿಸಿ ಮಾತನಾಡಿದ ಹಿರಿಯ ಸಾಹಿತಿಗಳಾದ ಪೂರ್ಣಾಜಿ ಕರಾಟೆ “2006ರ ಇಸವಿಯಲ್ಲಿ ಲಕ್ಷ್ಮೇಶ್ವರ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ರಾಜ್ಯೋದಯದ 50ನೇ ವರ್ಷಾಚರಣೆ ಕಾರ್ಯಕ್ರಮ ಇಡೀ ನಾಡಿಗೆ ಮಾದರಿಯಾಗಿತ್ತು. ಪ್ರತಿಯೊಬ್ಬರೂ ತಮ್ಮ ಮನೆ ಮನೆಯ ಹಬ್ಬ ಎಂಬಂತೆ ಆಚರಣೆ ಮಾಡಿದ್ದು ಇಂದಿಗೂ ಕಣ್ಣಿಗೆ ಕಟ್ಟುವಂತಿದೆ” ಎಂದು ಅಭಿಪ್ರಾಯಪಟ್ಟರು.
ಮತ್ತೋರ್ವ ಚಿಂತಕರಾಗಿ ಭಾಗವಹಿಸಿದ್ದ ಹಿರಿಯ ಸಾಹಿತಿ ರಮೇಶ ನವಲೆ “ಕನ್ನಡ ಎಂದರೆ ಕೇವಲ ಆದೊಂದು ಭಾಷೆಯಲ್ಲ. ಅದೊಂದು ಸಂಸ್ಕೃತಿ. ಅದು ನಿತ್ಯ ನಿರಂತರ. ಮೈಸೂರು ಕರ್ನಾಟಕ ನಾಮಕರಣವಾದ ಸುವರ್ಣ ಸಂಭ್ರಮದಲ್ಲಿ ಆ ಕುರಿತ ಭಾಷಣ, ಚರ್ಚೆ, ಚಿತ್ರಕಲಾ, ನಾಟಕ ಸ್ಪರ್ಧೆ ಮುಂತಾದ ಕಾರ್ಯಕ್ರಮಗಳು ಜರುಗಿ ಮಕ್ಕಳಲ್ಲಿ ಜಾಗೃತಿ ಮೂಡಿಸುವಂತಾಗಬೇಕು” ಎಂದರು.
ಹಿರಿಯ ಸಾಹಿತಿ ಮರಳೀಧರ ಹುಬ್ಬಳ್ಳಿ “ಪುಲಿಗೆರೆಯಲ್ಲಿ ಹಲವಾರು ದಶಕಗಳ ಹಿಂದೆಯೇ ಶಾಲಾ ಕಾಲೇಜುಗಳಲ್ಲಿ ನಾಟಕೋತ್ಸವ, ಸಂಗೀತ ಕಾರ್ಯಕ್ರಮಗಳು ನಿರಂತರವಾಗಿ ಜರುಗುತ್ತಿದ್ದವು. ನಾಡಿನ ಸುಪ್ರಸಿದ್ಧ ಸಾಹಿತಿಗಳನ್ನು ಕರೆಸಿ ಉಪನ್ಯಾಸ ನಡೆಸುತ್ತಿದ್ದರು” ಎಂದು ನೆನಪಿಸಿಕೊಂಡರು.
ಕನ್ನಡ ಸಾಹಿತ್ಯ ಪರಿಷತ್ತು ಲಕ್ಷ್ಮೇಶ್ವರ ತಾಲೂಕ ಘಟಕದ ಅಧ್ಯಕ್ಷ ಈಶ್ವರ ಮೆಡ್ಲೇರಿ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಎಲ್. ಆರ್. ಮಲಸಮುದ್ರ ಪ್ರಾರ್ಥಿಸಿದರು. ಪುರಸಭಾ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ಶ್ರೀಮತಿ ಅಶ್ವಿನಿ ಅಂಕಲಕೋಟಿ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಮಂಜುನಾಥ ಚಾಕಲಬ್ಬಿ ಕಾರ್ಯಕ್ರಮ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ನಾಗರಾಜ ಮಜ್ಜಿಗುಡ್ಡ, ಈರಣ್ಣ ಗಾಣಿಗೇರ, ಎಸ್.ಬಿ.ಅಣ್ಣಿಗೇರಿ, ಎನ್.ಪಿ. ಪ್ಯಾಟಿಗೌಡ್ರ ನಾಡಗೀತೆ ಕಾರ್ಯಕ್ರಮ ನಡೆಸಿಕೊಟ್ಟರು. ಉಪನ್ಯಾಸಕ ತಮ್ಮನಗೌಡ ಪಾಟೀಲ ವಂದಿಸಿದರು. ವಿ.ಎಂ.ಹೂಗಾರ ನಾಡ ಭಕ್ತಿಗೀತೆ ಹಾಡಿದರು. ಕಾರ್ಯಕ್ರಮದಲ್ಲಿ ಕ.ರಾ.ವಿ.ಪ ಜಿಲ್ಲಾ ಅಧ್ಯಕ್ಷ ರಮೇಶ ರಿತ್ತಿ, ಎನ್. ಆರ್.ಸಾತಪುತೆ, ಉಪನ್ಯಾಸಕ ಸಂಘದ ಅಧ್ಯಕ್ಷ ಮಂಜುನಾಥ ಕೊಕ್ಕರಗುಂದಿ, ತಹಸೀಲ್ದಾರ, ಶಿಕ್ಷಕರಾದ ಎಸ್.ಬಿ.ಕನೋಜ, ಶಶಿಕಾಂತ ಕುಂಬಾರ, ಮಹೇಶ ಕಿರೆಸೂರ ಮುಂತಾದವರು ಉಪಸ್ಥಿತರಿದ್ದರು.