ಉದ್ಯೋಗದಲ್ಲಿ ಕನ್ನಡಿಗರಿಗೇ ಸಿಂಹಪಾಲು ನೀಡಲಿ
ಸಂಜೆವಾಣಿ ನ್ಯೂಸ್
ಮೈಸೂರು: ಜು.02:- ಕನ್ನಡ ನೆಲದಲ್ಲಿ ಕನ್ನಡಿಗರಿಗೇ ಉದ್ಯೋಗ ನೀಡುವ ಸಂಬಂಧ ಕಾಯ್ದೆ ರೂಪಿಸಿ ಜಾರಿಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ಕರ್ನಾಟಕ ದೇಶದಲ್ಲೇ ಅತಿ ಹೆಚ್ಚು ಭೌಗೋಳಿಕ ಸಂಪನ್ಮೂಲ ಹೊಂದಿರುವ ರಾಜ್ಯ. ಪ್ರಕೃತಿ ಸೌಂದರ್ಯಕ್ಕೆ, ಉತ್ತಮ ಹವಾಗುಣಕ್ಕೆ, ಸಮೃದ್ಧಿಗೆ ಹೆಸರುವಾಸಿಯಾಗಿದೆ. ಸ್ವಾತಂತ್ರ್ಯದ ನಂತರ ರಾಜ್ಯಕ್ಕೆ ಬರುವ ವಲಸಿಗರ ಸಂಖ್ಯೆ ಹೆಚ್ಚಾಗಿದೆ. ಅದು ಇತ್ತೀಚಿನ ದಿನಗಳಲ್ಲಿ ತಾರಕಕ್ಕೇರಿದೆ. ಮೊದಲು ದಕ್ಷಿಣದ ರಾಜ್ಯಗಳಿಂದ ವಲಸೆ ಬಂದು ನೆಲೆ ನಿಂತರು. ಈಗ ಉತ್ತರದ ರಾಜ್ಯಗಳಿಂದ ವಲಸಿಗರ ಪ್ರವಾಹವೇ ಹರಿದುಬರುತ್ತಿದೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಮಂಗಳೂರಿನಂತಹ ಮಹಾನಗರಗಳಲ್ಲಿ ವಲಸೆ ಪ್ರಮಾಣ ಮಿತಿಮೀರಿದೆ. ಇದರಿಂದಾಗಿ ಕನ್ನಡ ನೆಲದಲ್ಲಿ ಕನ್ನಡಿಗರಿಗೇ ಉದ್ಯೋಗ ಇಲ್ಲದಂತಾಗಿದೆ ಎಂದು ಕಿಡಿ ಕಾರಿದರು.
ಕನ್ನಡ ನೆಲದಲ್ಲಿ ಕನ್ನಡಿಗರಿಗೇ ಉದ್ಯೋಗ ದೊರಕಬೇಕೆಂದು ಹಲವು ದಶಕಗಳಿಂದ ಹೋರಾಟ ಮಾಡಲಾಗುತ್ತಿದೆ. ಆದರೂ ಡಾ.ಸರೋಜಿನಿ ಮಹಿಷಿ ವರದಿ ಜಾರಿಯಾಗಿಲ್ಲ. ಖಾಸಗಿ ಸಂಸ್ಥೆಗಳು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಬೇರೆ ರಾಜ್ಯದವರನ್ನು ನೇಮಿಸಿಕೊಳ್ಳುತ್ತಿದ್ದಾರೆ. 2019ರಲ್ಲಿ ರಾಜ್ಯ ಸರ್ಕಾರ ಕಾರ್ಮಿಕ ಇಲಾಖೆಯ ಮೂಲಕ ಸ್ಥಾಯಿ ಆದೇಶದ ನಿಯಮಗಳಿಗೆ ಬದಲಾವಣೆ ತಂದು ಕನ್ನಡಿಗರಿಗೇ ಉದ್ಯೋಗ ನೀಡಬೇಕೆಂದು ಸೂಚಿಸಿದ್ದರೂ ಕಾಯ್ದೆ ಸಮರ್ಪಕವಾಗಿ ಜಾರಿಯಾಗಿಲ್ಲ. ಈ ವಿಚಾರದಲ್ಲಿ ಸರ್ಕಾರ ಇಚ್ಛಾಶಕ್ತಿ ತೋರಬೇಕು. ಕಾನೂನು ರೂಪಿಸುವ ವೇಳೆ ಎಚ್ಚರಿಕೆವಹಿಸಿ ನ್ಯಾಯಾಲಯಗಳಲ್ಲಿ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಹಕ್ಕೊತ್ತಾಯಗಳು: ಕೈಗಾರಿಕಾ ಉದ್ಯೋಗ ಸ್ಥಾಯಿ ಆದೇಶ ಕಾಯ್ದೆ 1946ರ ಅನ್ವಯ ರಾಜ್ಯ ಸರ್ಕಾರ ಬಲಿಷ್ಠ ಕಾನೂನು ರೂಪಿಸಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಬೇಕು. ಎಲ್ಲಾ ಖಾಸಗಿ ಸಂಸ್ಥೆ ಸಿ ಮತ್ತು ಡಿ ದರ್ಜೆಯ ನೌಕರಿಯಲ್ಲಿ ಶೇ.100ರಷ್ಟು ಉದ್ಯೋಗಗಳನ್ನು ಕನ್ನಡಿಗರಿಗೆ ಮೀಸಲಿಡಬೇಕು. ಎಲ್ಲಾ ಖಾಸಗಿ ಸಂಸ್ಥೆಗಳ ಹುದ್ದೆಗಳಲ್ಲಿ ಶೇ.80 ಉದ್ಯೋಗಗಳನ್ನು ಕನ್ನಡಿಗರಿಗೆ ನೀಡಬೇಕು. 15 ವರ್ಷಗಳ ಕಾಲ ಕರ್ನಾಟಕದಲ್ಲಿ ನೆಲೆಸಿರುವವರು ಕಡ್ಡಾಯವಾಗಿ ಕನ್ನಡ ಪರೀಕ್ಷೆ ಉತ್ತೀರ್ಣರಾಗಬೇಕು. ನಿಯಮಾವಳಿ ಪಾಲಿಸದ ಸಂಸ್ಥೆಗಳಿಗೆ ನೀಡಿರುವ ಮಾನ್ಯತೆ ರದ್ದುಗೊಳಿಸಬೇಕು. ಕೇಂದ್ರ ಸರ್ಕಾರದ ಇಲಾಖೆಗಳು, ಸಾರ್ವಜನಿಕರಿಗೆ ವಲಯದ ಘಟಕಗಳಲ್ಲಿ ಗ್ರೂಪ್ ಸಿ ಮತ್ತು ಡಿ ಗಳಲ್ಲಿ ಕನ್ನಡಿಗರಿಗೆ ಶೇ.100ರಷ್ಟು ಸ್ಥಾನ ಮೀಸಲಿಡಬೇಕು. ರಾಜ್ಯ ಸರ್ಕಾರ ರೂಪಿಸುವ ಕಾನೂನನ್ನು ಸಮರ್ಪಕವಾಗಿ ಜಾರಿಗೆ ತರಲು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಧಿಕಾರ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಪ್ರವೀಣ್ ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.