ಪ್ರಾಮಾಣಿಕರು ಮಂತ್ರಿಗಳಾದರೆ ಭ್ರಷ್ಟರ ಮಾತು ಕೇಳುವುದಿಲ್ಲ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜು.02: ದಕ್ಷ ಹಾಗೂ ಪ್ರಾಮಾಣಿಕ ರಾಜಕಾರಣಿಗಳನ್ನು ಪಕ್ಷದಲ್ಲಿ ನಿರ್ಲಕ್ಷಿಸಲು ಸಾಧ್ಯವಿಲ್ಲ. ಆದರೆ ಪ್ರಾಮಾಣಿಕರು ಮಂತ್ರಿಗಳಾದರೆ ಭ್ರಷ್ಟರ ಮಾತುಗಳನ್ನು ಕೇಳುವುದಿಲ್ಲ. ಹಾಗಾಗಿ ಯಾರನ್ನು ಮಂತ್ರಿ ಮಾಡಬಾರದೊ, ಮಂತ್ರಿಯನ್ನಾಗಿ ಮಾಡಿದರೆ ಕೆಲವೊಮ್ಮೆ ಅಪಾಯ ಬರುತ್ತದೆಯೋ, ಮಂತ್ರಿಯಾದರೆ ಅವರಿಂದ ನಮ್ಮ ರಾಜಕಾರಣಕ್ಕೆ ಯಾವುದಾದರೋ ತೊಂದರೆ ಬರುತ್ತದೆಯೊ ಅಥವಾ ರಾಜಕಾರಣದ ನಿವೃತ್ತಿಯ ಅಂಚಿನಲ್ಲಿರುವವರನ್ನು ಶಾಸನ ಸಭೆಗಳ ಸ್ಪೀಕರ್ ಆಗಿಸಿ ಬಿಡುವ ಸಂಪ್ರದಾಯ ರಾಜಕಾರಣದಲ್ಲಿ ನಡೆಯುತ್ತಿದೆ ಎಂದು ರಾಜ್ಯ ವಿಧಾನ ಸಭೆಯ ಮಾಜಿ ಸ್ಪೀಕರ್ ರಮೇಶ್‍ಕುಮಾರ್ ಪ್ರಸ್ತುತ ರಾಜಕಾರಣದ ಬಗ್ಗೆ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಪಟ್ಟಣದ ಹೋಟೆಲ್ ರಾಮದಾಸ್ ಸಭಾಂಗಣದಲ್ಲಿ ಮಾಜಿ ಸ್ಪೀಕರ್ ದಿವಂಗತ ಕೆ.ಆರ್.ಪೇಟೆ ಕೃಷ್ಣ ಪ್ರತಿಷ್ಠಾನದ ವತಿಯಿಂದ ಕೃಷ್ಣ ಅವರ 84ನೇ ಜನ್ಮ ದಿನದ ಅಂಗವಾಗಿ ಆಯೋಜಿಸಿದ್ದ ವಿಚಾರ ಸಂಕಿರಣ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ಪೀಕರ್ ಹುದ್ದೆ ಕಳಂಕ ರಹಿತವಾಗಿರಬೇಕು. ನಾನು ಮತ್ತು ಕೃಷ್ಣ ಸ್ಪೀಕರ್ ಹುದ್ದೆಯ ಗೌರವಕ್ಕೆ ಚ್ಯುತಿಬಾರದಂತೆ ಕೆಲಸ ಮಾಡಿದ್ದೇವೆ. ಇಂದು ಸ್ಪೀಕರ್ ಹುದ್ದೆಯಲ್ಲಿ ಕುಳಿತುಕೊಂಡವರು ಕಣ್ಣುಮುಚ್ಚಿ ಕುಳಿತು ಕೊಳ್ಳಬೇಕಾಗಿದೆ. ತಪ್ಪು ಮಾಡಿದ ಮಂತ್ರಿಗಳು ಮತ್ತು ಸರ್ಕಾರವನ್ನು ರಕ್ಷಿಸಬೇಕಾದ ಜವಾಬ್ದಾರಿ ಸ್ಪೀಕರ್ ಗಳ ಮೇಲೆ ಬಿದ್ದಿದೆ. ಪ್ರಾಮಾಣಿಕ ರಾಜಕಾರಣಿಗಳು ಜೀವಂತ ಜ್ವಾಲೆಗಳಂತೆ ಬದುಕಬೇಕಾಗಿದೆ. ಸಾಮಾಜಿಕ ಮೌಲ್ಯದ ತಂಬೆಳಕಿನ ದೀಪ ಆರಿಹೋಗದಂತೆ ನೋಡಿಕೊಳ್ಳಬೇಕಾಗಿದೆ. ಆದರೆ ಬೀಸುವ ಗಾಳಿ ಮಾತ್ರ ಚಂಡಮಾರುತದಂತಿದ್ದು ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯಕ್ಕೆ ಸಿಲುಕಿದೆ ಎಂದ ರಮೇಶ್ ಕುಮಾರ್ ಇಂದಿನ ರಾಜಕೀಯ ವ್ಯವಸ್ತೆಯಲ್ಲಿರುವುದು ಎರಡೇ ಪಕ್ಷ. ಶ್ರೀಮಂತರು, ಬ್ರಷ್ಟರು, ಶಿಕ್ಷಣ ವ್ಯಾಪಾರಿಗಳು, ಅಮಾನವೀಯ ಗುಣಗಳನ್ನು ಉಳ್ಳ ವೈದ್ಯಕೀಯ ವ್ಯವಸ್ಥೆಯನ್ನು ಕಟ್ಟಿಕೊಂಡಿರುವವರು, ಗಣಿಗಾರಿಕೆ ನಡೆಸುತ್ತಿರುವವರು, ಕಳ್ಳ ವ್ಯಾಪಾರಿಗಳು ಒಂದು ಪಕ್ಷವಾದರೆ ಪ್ರಾಮಾಣಿಕ ರಾಜಕಾರಣಿಗಳು ಮತ್ತೊಂದು ಪಕ್ಷ. ಇಂದು ರಾಜಕೀಯ ಪಕ್ಷಗಳಲ್ಲಿ ಶಿಸ್ತಿಲ್ಲ. ಶಾಸಕರಾದ ಕೂಡಲೇ ಅವರಲ್ಲಿ ಪಾಳೆಯಗಾರಿಕೆಯ ಮನಸ್ಥಿತಿ ಬೆಳೆಯುತ್ತಿದೆ. ಬಹುತೇಕ ಶಾಸಕರು ಸದನಕ್ಕೆ ಬರುವುದೇ ಇಲ್ಲ. ಆದರೆ ಹಾಜರಾತಿ ಪುಸ್ತಕದಲ್ಲಿ ಮಾತ್ರ ಅವರ ಸಹಿ ಇರುತ್ತದೆ. ದೇಶದ ಕಾನೂನನ್ನು ಗೌರವಿಸಿ ನ್ಯಾಯಯುತ ರಾಜಕಾರಣ ಮಾಡಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣಗೊಳ್ಳುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮೌಲ್ಯಯುತ ರಾಜಕಾರಣಕ್ಕೆ ಮಂಡ್ಯ ಜಿಲ್ಲೆಯ ಕೊಡುಗೆ ದೊಡ್ಡದು, ಕೆ.ವಿ.ಶಂಕರೇಗೌಡ, ಹೆಚ್.ಕೆ.ವೀರಣ್ಣಗೌಡ, ಜಿ.ಮಾದೇಗೌಡ, ಹೆಚ್.ಡಿ.ಚೌಡಯ್ಯ, ಇಂಡುವಾಳು ಹೊನ್ನಪ್ಪ, ಎಸ್.ಎಂ.ಲಿಂಗಪ್ಪ, ಎಂ.ಕೆ ಬೊಮ್ಮೇಗೌಡ, ಎಸ್.ಎಂ.ಕೃಷ್ಣ, ಕೆ.ಆರ್.ಪೇಟೆ ಕೃಷ್ಣ, ಸಿಂಗಾರಿಗೌಡ ಸೇರಿದಂತೆ ಹತ್ತು ಹಲವು ಆದರ್ಶ ನಾಯಕರನ್ನು ಮಂಡ್ಯ ಜಿಲ್ಲೆ ರಾಜ್ಯ ರಾಜಕಾರಣಕ್ಕೆ ನೀಡಿದೆ. ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಸಂಸದೀಯ ವ್ಯವಸ್ಥೆಗೆ ಹೊಸ ಮೆರಗು ತಂದವರು. ಪುಟ್ಟಣ್ಣಯ್ಯ ಮಾತನಾಡುತ್ತಿದ್ದರೆ ಮಂಡ್ಯದ ನೆಲವೇ ಎದ್ದು ಮಾತನಾಡುತ್ತಿರುವಂತೆ ಕಣುತ್ತಿತ್ತು ಎಂದ ರಮೆಶ್ ಕುಮಾರ್ ಶಾಸನ ಸಭೆಗೆ ಆಯ್ಕೆಯಾಗುವವರಲ್ಲಿ ಶೇ.80 ರಷ್ಟು ರೈತ ಕುಟುಂಬದವರೇ. ಕೃಷಿಕರೇ ಶಾಸನ ಸಭೆಗೆ ಆರಿಸಿ ಬಂದರೂ ರೈತಕುಲಕ್ಕೆ ಮಾತ್ರ ಅನುಕೂಲವಾಗುತ್ತಿಲ್ಲ. ಗೊಬ್ಬರ, ಕೀಟನಾಶಕ, ಬಿತ್ತನೆ ಬೀಜ ಮಾರುವವರು, ಡಾಬಾ ನಡೆಸುವವರು, ಬಾರ್ ಮಾಲೀಕರು ಮತ್ತು ದಳ್ಳಾಳಿಗಳು ಉತ್ತಮವಾಗಿ ಬದುಕುತ್ತಿದ್ದಾರೆ. ಆದರೆ ರೈತರು ಮಾತ್ರ ಸಾಲಗಾರರಾಗುತ್ತಿರುವುದರ ಬಗ್ಗೆ ನಾವು ಗಂಭೀರವಾಗಿ ಚಿಂತಿಸಬೇಕಾಗಿದೆ ಎಂದು ರಮೆಶ್ ಕುಮಾರ್ ಹೇಳಿದರು.
ಒಕ್ಕಲಿಗರು ಜಾತಿವಾದಿಗಳಲ್ಲ: ನಾನು ಕೋಲಾರ ಜಿಲ್ಲೆಯ ಶ್ರೀನಿವಾಸಪುರದವನು. ನನ್ನ ಮಾತೃಭಾಷೆ ತೆಲುಗು, ಕನ್ನಡವನ್ನು ಇಂಗ್ಲೀಷಿನಂತೆ ಕಷ್ಠಪಟ್ಟು ಕಲಿತವನು. ಜಾತಿಯಲ್ಲಿ ನಾನು ಬ್ರಾಹ್ಮಣ. ಆದರೆ ವೃತ್ತಿಯಲ್ಲಿ ಒಕ್ಕಲಿಗ. ನನ್ನ ಕ್ಷೇತ್ರದಲ್ಲಿ ಒಕ್ಕಲಿಗ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರ ಯಾರೂ ಜಾತಿವಾದಿಗಳಲ್ಲ. ಒಕ್ಕಲಿಗರು ಜಾತಿವಾದಿಗಳಾಗಿದ್ದರೆ ನಾನು ಶ್ರೀನಿವಾಸಪುರ ಕ್ಷೇತ್ರದಲ್ಲಿ ರಾಜಕೀಯ ಮಾಡಲಾಗುತ್ತಿರಲಿಲ್ಲ. ಕೆಂಗಲ್ ಹನುಮಂತಯ್ಯ, ಕುವೆಂಪು ಅವರಂತಹ ಶ್ರೇಷ್ಠರಿಗೆ ಜನ್ಮ ಕೊಟ್ಟಿದ್ದು ಒಕ್ಕಲಿಗ ಜನಾಂಗ. ಒಕ್ಕಲಿಗ ಜನಾಂಗವನ್ನು ಜಾತಿವಾದಿಗಳೆಂದು ದೂರುವವರು ಅವಿವೇಕಿಗಳು. ಒಕ್ಕಲುತನದ ಬಗ್ಗೆ ವಿಚಾರ ಬಂದಾಗ ಒಕ್ಕಲಿಗ ರಾಜಕಾರಣಿಗಳು ಧ್ವನಿಯೆತ್ತಿದ್ದಾರೆ. ಆದರೆ ಅವರೆಂದು ಜಾತಿವಾದದ ರಾಜಕಾರಣ ಮಾಡಿಲ್ಲ. ಶ್ರೀನಿವಾಸಪುರದಲ್ಲಿ ನಾನಿಂದು ಸೋತಿರಬಹುದು ಆದರೆ ಅದು ಜನತೆಗೆ ಸೇರಿದ್ದು. ಪ್ರಾಮಾಣಿಕ ರಾಜಕಾರಣಿಗಳ ಸೋಲು ಗೆಲುವುಗಳು ಜನರಿಗೆ ಸೇರಿದ್ದು ಎಂದ ರಮೇಶ್ ಕುಮಾರ್ ಸಿದ್ದಾಂತದ ತಳಹದಿಯ ಮೇಲೆ ರಾಜಕಾರಣ ಮಾಡಿದವರನ್ನು ಇತಿಹಾಸದಿಂದ ಅಳಿಸಲು ಸಾಧ್ಯವಿಲ್ಲ. ಇದಕ್ಕೆ ಕೆ.ಆರ್.ಪೇಟೆ ಕೃಷ್ಣ ಅವರ ಹೆಸರಿನಲ್ಲಿ ನಡೆಯುತ್ತಿರುವ ಕಾರ್ಯಕ್ರಮವೇ ಸಾಕ್ಷಿ ಎಂದರು.
ಶಾಸಕ ಹೆಚ್.ಟಿ.ಮಂಜು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜು, ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ಮನ್ ಮುಲ್ ನಿರ್ದೇಶಕ ಡಾಲು ರವಿ, ರೈತ ಮುಖಂಡ ಕೆ.ಆರ್.ಜಯರಾಂ, ಆರ್.ಟಿ.ಓ ಅಧಿಕಾರಿ ಮಲ್ಲಿಕಾರ್ಜುನ್, ಕೃಷ್ಣ ಪ್ರತಿಷ್ಟಾನದ ಅಧ್ಯಕ್ಷ ಜವರಾಯಿಗೌಡ ಉಪಸ್ಥಿತರಿದ್ದು ಮಾತನಾಡಿದರು.
ಮೈಸೂರಿನ ಸಹಜ ಸಮೃದ್ಧಿ ಸಂಸ್ಥೆಯ ಕೃಷ್ಣಪ್ರಸಾದ್ ವಿಶೇಷ ಉಪನ್ಯಾಸ ನೀಡಿದರು.