ಅಧುನೀಕತೆ ಮುದ್ರಣ ಮಾಧ್ಯಮಕ್ಕೆ ಸವಾಲು
ಕೋಲಾರ,ಜು,೨:ಅಧುನೀಕ ತಾಂತ್ರಿಕತೆಯ ಯುಗದಲ್ಲಿ ಇತರೆಲ್ಲಾ ಮಾಧ್ಯಮಗಳೊಂದಿಗೆ ಸ್ವರ್ಧೆ ನೀಡುವುದು ಮುದ್ರಣ ಮಾಧ್ಯಮಕ್ಕೆ ಸಮಸ್ಯತ್ಮಾಕ ಸವಾಲಾಗಿದೆ ಮತ್ತು ಯಾರು ಪತ್ರಕರ್ತರು ಎಂಬುದನ್ನು ನಿಷ್ಕರ್ಷೆ ಮಾಡುವ ಕಾಲದಲ್ಲಿರುವ ಸುದ್ದಿ ಮಾಧ್ಯಮ ಇಂದು ಸಂಕಷ್ಟಕ್ಕೆ ಸಿಲುಕಿದೆ ಎಂದು ತಿಳಿಸಿದ ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ.ನಿರಂಜನವಾನಳ್ಳಿ ಜಿಲ್ಲೆಯ ಪತ್ರಕರ್ತರಿಗಾಗಿ ವಿಶ್ವವಿದ್ಯಾಲಯದಲ್ಲಿ ಡಿಪ್ಲೊಮೋ ಕೋರ್ಸ್ ಪ್ರಾರಂಭಿಸುವ ಭರವಸೆ ನೀಡಿದರು.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ನಡೆದ ಪತ್ರಿಕಾ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರಧಾನ ಉಪನ್ಯಾಸಕರಾಗಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಪತ್ರಿಕಾದಿನ, ವೈದ್ಯರ ದಿನ,ಲೆಕ್ಕಪರಿಶೋಧಕರ ದಿನ ಎಲ್ಲವೂ ಜು.೧ ಆಗಿದೆ ವೈದ್ಯರು ದೇಹಕ್ಕೆ ಒಳಿತಾಗುವ ಕೆಲಸ ಮಾಡುವಂತೆ ಪತ್ರಕರ್ತರು ಸಮಾಜಕ್ಕೆ ಒಳಿತಾಗುವ ಕೆಲಸ ಮಾಡುತ್ತಿದ್ದು, ಮಾಧ್ಯಮ ಪ್ರತಿನಿಧಿಗಳು ಸಮಾಜದ ವೈದ್ಯರು ಎಂದು ಅಭಿಪ್ರಾಯಪಟ್ಟರು.
ಸಮಾಜದ ನಾಡಿಮಿಡಿತ ಅರ್ಥಮಾಡಿಕೊಂಡು ಸಾಗಬೇಕಾದ ಪತ್ರಕರ್ತರಿಗೆ ಸಾಮಾಜಿಕ ಹೊಣೆಗಾರಿಯೂ ಅಗತ್ಯವಿದೆ, ಇಡೀ ಮಾಧ್ಯಮ ಬದಲಾವಣೆ ಹಂತದಲ್ಲಿದ್ದು, ಎಲೆಕ್ಟ್ರಾನಿಕ್ ಮಾಧ್ಯಮ, ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್ ಚಾಲನೆ, ಫೇಸ್‌ಬುಕ್‌ಗಳು ಯಾರ ಹಂಗಿಲ್ಲ ಇವುಗಳಿಗೆ ಯಾವೂದೇ ರೀತಿ ಗೇಟ್ ಕೀಪರ್‌ಗಳಿಲ್ಲ ಆದರೆ ಮುದ್ರಣ ಮಾಧ್ಯಮಕ್ಕೆ ಗೇಟ್ ಕೀಪರ್ ಇದ್ದು, ಈ ಎಲ್ಲದರ ನಡುವೆಯೂ ವಸ್ತುನಿಷ್ಟವಾದ ಸುದ್ದಿಸಂಪ್ರದಾಯ ಪಾಲಿಸಿಕೊಂಡು ಬಂದಿದೆ ಎಂದರು.
ಇತರೆ ಮಾಧ್ಯಮ ದಾರಿ ತಪ್ಪಿದರೂ ಮುದ್ರಣ ಮಾಧ್ಯಮ ದಾರಿ ತಪ್ಪಬಾರದು ಎಂದು ಆಶಿಸಿದ ಅವರು, ಇಂದು ಅಸ್ಥಿತ್ವದ ಪ್ರಶ್ನೆ ಎದುರಾಗಿದ್ದು, ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ಸ್ವಾಭಿಮಾನವನ್ನು ಉಳಿಸು ಕೊಳ್ಳುವಂತಾಗ ಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್, ಸ್ವಂತ ಶಕ್ತಿಯಿಂದ ಹಾಗೂ ಸ್ವಂತ ಭವನದಲ್ಲೇ ನಮ್ಮ ಪತ್ರಿಕಾ ದಿನಾಚರಣೆ ಮಾಡಬೇಕು ಎಂಬ ಆಶಯ ಈಡೇರಿದೆ, ಸಂಘದ ಹಿರಿಯರ ಮಾರ್ಗದರ್ಶನದಲ್ಲಿ ಕಳೆದ ೨೫ ವರ್ಷಗಳಿಂದ ಆತ್ಮಸಾಕ್ಷಿಗನುಗುಣವಾಗಿ ಸಾಗಿ ಬಂದಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ಎಸ್,ಎಸ್.ಎಲ್.ಸಿ, ಪಿಯುಸಿ ಹಾಗೂ ಪದವಿಯ ಪ್ರತಿಭಾವಂತ ೩೨ ಮಂದಿ ವಿದ್ಯಾರ್ಥಿಗಳಿಗೆ (ಪತ್ರಕರ್ತರ ಮಕ್ಕಳಿಗೆ) ನಗದು ಪುರಸ್ಕಾರ ನೀಡಲಾಯಿತು. ಜಿಲ್ಲೆಯ ಹಿರಿಯ ಸಾಧಕರ ಹೆಸರಿನಲ್ಲಿ ೯ ಮಂದಿ ಪತ್ರಕರ್ತರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ನಗರದ ವಂಶೋದಯ ಆಸ್ಪತ್ರೆಯಿಂದ ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಮಹಮದ್ ಯೂನಸ್ ಉಪಸ್ಥಿತರಿದ್ದು, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್ ಸ್ವಾಗತಿಸಿ, ಸಂಘದ ಖಜಾಂಚಿ ಎ.ಜಿ.ಸುರೇಶ್ ಕುಮಾರ್ ನಿರೂಪಿಸಿದರು. ವಿವಿಧ ಸಂಘಟನೆಗಳ ಮುಖಂಡರು, ಜಿಲ್ಲೆಯ ಹಿರಿಯ ಪತ್ರಕರ್ತರು, ವಿವಿಧತಾಲ್ಲೂಕುಗಳ ಪದಾಧಿಕಾರಿಗಳು,ಪತ್ರಕರ್ತರು ಹಾಜರಿದ್ದರು.