ಪಿರಿಯಾಪಟ್ಟಣದಲ್ಲಿ ಪತ್ರಿಕಾ ದಿನಾಚರಣೆ
ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ: ಜು.02:- ಪತ್ರಕರ್ತರು ಸ್ಥಳೀಯ ಸಮಸ್ಯೆಗಳ ಬಗ್ಗೆ ಗಮನಹರಿಸುವ ಮೂಲಕ ಗ್ರಾಮೀಣ ಜನರ ಬದುಕು ಸುಧಾರಿಸಲು ನೆರವಾಗಬೇಕು ಎಂದು ಸಚಿವ ಕೆ. ವೆಂಕಟೇಶ್ ತಿಳಿಸಿದರು.
ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಸೋಮವಾರ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಜಕೀಯ ವ್ಯಕ್ತಿಗಳು ಮಾಡುವ ಟೀಕೆ ಮತ್ತು ಆರೋಪಗಳನ್ನು ಸತ್ಯಾಸತ್ಯತೆ ಪರಿಶೀಲಿಸದೆ ವರದಿ ಮಾಡುವ ಮೂಲಕ ಎಲೆಕ್ಟ್ರಾನಿಕ್ ಮಾಧ್ಯಮಗಳು ಮತ್ತು ಕೆಲವು ಪತ್ರಿಕೆಗಳು ರಾಜಕೀಯ ವ್ಯಕ್ತಿಗಳ ತೇಜೋವಧೆ ಮಾಡುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು. ಪತ್ರಕರ್ತರ ವೃತ್ತಿಗೆ ಗೌರವ ಉಳಿಯಬೇಕಾದರೆ ಸಮಸ್ಯೆಗಳ ಬಗ್ಗೆ, ಸಾಧಕರ ಬಗ್ಗೆ ಬೆಳಕು ಚೆಲ್ಲುವ ಕೆಲಸ ಮಾಡಬೇಕು ಎಂದರು.
ಹಿರಿಯ ಪತ್ರಕರ್ತ ಟಿ.ಗುರುರಾಜ್ ದಿನದ ಮಹತ್ವದ ಬಗ್ಗೆ ಮಾತನಾಡಿ ರಾಜಕಾರಣಿಗಳನ್ನು ದೂರುವುದು, ಅಧಿಕಾರಿಗಳತ್ತ ಬೆರಳು ಮಾಡಿ ತೋರಿಸುವುದು ಮಾಡುವುದು ನಮ್ಮ ಹಕ್ಕು ಎಂದು ತಿಳಿಯಬೇಕಿಲ್ಲ ನಮಗೆ ಸಿಗುತ್ತಿರುವ ಗೌರವಕ್ಕೆ ಭಾಗ್ಯಸ್ತರಾಗಿ ನಡೆದುಕೊಳ್ಳುತ್ತಿದ್ದೇವಾ ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕು ಎಂದರು. ಎಲೆಕ್ಟ್ರಾನಿಕ್ ಮಾಧ್ಯಮಗಳು ನಮ್ಮಲ್ಲೇ ಮೊದಲು ಎಂದು ತೋರಿಸುವ ಭರಾಟೆಯಲ್ಲಿ ಸುದ್ದಿ ಮೌಲ್ಯವನ್ನು ಕಳೆಯುತ್ತಿವೆ, ನ್ಯಾಯಾಲಯದಂತೆ ವರ್ತಿಸುತ್ತಿವೆ, ಪತ್ರಕರ್ತರ ಹುದ್ದೆ ಅಧಿಕಾರವಲ್ಲ ಅದು ಭಿಕ್ಷೆ ಎಂದು ತಿಳಿದು ಕೆಲಸ ಮಾಡಿದರೆ ಮಾತ್ರ ಪ್ರಾಮಾಣಿಕತೆ ನಿಷ್ಠೆ ಹಾಗೂ ವೃತ್ತಿ ಗೌರವ ಉಳಿಸಿಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಪತ್ರಕರ್ತರಿಗೆ ಸತತ ಅಧ್ಯಯನದ ಮನೋಭಾವ, ಸಮಸ್ಯೆಯನ್ನು ಆಲಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು, ನಮ್ಮ ಸುತ್ತಮುತ್ತ ಯಾವ ವಿದ್ಯಮಾನಗಳು ನಡೆಯುತ್ತಿವೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸುವುದನ್ನು ರೂಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಕಂಪಲಾಪುರದ ಸದಾಶಿವ ಅವರನ್ನು ಸನ್ಮಾನಿಸಲಾಯಿತು, ಎಸ್‍ಎಸ್‍ಎಲ್ ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ತೇರ್ಗಡೆ ಹೊಂದಿರುವ ತಾಲೂಕಿನ ಪತ್ರಕರ್ತರ ಮಕ್ಕಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ತಾಪಂ ಇಒ ಸುನೀಲ್ ಕುಮಾರ್, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ.ಸ್ವಾಮಿ, ಸಂಘದ ಅಧ್ಯಕ್ಷ ಬಿ.ಎಸ್.ಸತೀಶ್ ಆರಾಧ್ಯ, ಕಾರ್ಯದರ್ಶಿ ಪಿ.ಡಿ.ಪ್ರಸನ್ನ, ಉಪಾಧ್ಯಕ್ಷ ರವಿಚಂದ್ರ, ಖಜಾಂಚಿ ಪಿ.ಎನ್.ದೇವೇಗೌಡ, ಸಹ ಕಾರ್ಯದರ್ಶಿ ಅಶೋಕ್, ಸಂಘದ ನಿರ್ದೇಶಕರುಗಳಾದ ಪ್ರಸನ್ನ ಬೆಟ್ಟದಪುರ ಬೈಲುಕುಪ್ಪೆ ಶಿವಣ್ಣ ಹೆಚ್ ಕೆ ಮಹೇಶ್, ಇಮ್ತಿಯಾಜ್ ಅಹಮದ್, ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.