ಮಕ್ಕಳಿಗೆ ಶಿಕ್ಷಣ ಜೊತೆಗೆ ಸಂಸ್ಕಾರ ಹಾಗೂ ಶಿಸ್ತು ಕಲಿಕೆ ಪ್ರಥಮ ಅಧ್ಯತೆ: ಬಿ.ಪಿ ಪ್ರಕಾಶ್
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು. 02- ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಜೊತೆಗೆ ಭಾರತೀಯ ಸಂಸ್ಕøತಿ ಹಾಗೂ ಪರಂಪರೆಯನ್ನು ಕಲಿಸಿ, ಸಮಯ ಪರಿಪಾಲನೆ ಹಾಗು ಶಿಸ್ತು ರೂಢಿಸುವುದು ನಮ್ಮ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಎಂದು ಸ್ಪೂರ್ತಿ ಟ್ರಸ್ಟ್‍ನ ಅಧ್ಯಕ್ಷ ಬಿ.ಪಿ ಪ್ರಕಾಶ್ ಅವರು ತಿಳಿಸಿದರು
ತಾಲೂಕಿನ ಅಂಕನಶೆಟ್ಟಿಪುರದಲ್ಲಿರುವ ಪ್ರೇರಣಾ ವಿದ್ಯಾ ಸಂಸ್ಥೆಯಲ್ಲಿ 2024-25ನೇ ಸಾಲಿಗೆ ಎಲ್‍ಕೆಜಿ ಮತ್ತು ಯುಕೆಜಿಗೆ ಪ್ರವೇಶ ಪಡೆದಿರುವ 48ಕ್ಕೂ ಹೆಚ್ಚು ಮಕ್ಕಳಿಗೆ ಹರದನಹಳ್ಳಿ ದಿವ್ಯಲಿಂಗೇಶ್ವರ ದೇವಸ್ಥಾನದ ಒಳಾವರಣದಲ್ಲಿರುವ ಶ್ರೀ ಸರಸ್ವತಿ ದೇವಿಯ ಸಮ್ಮುಖದಲ್ಲಿ ವಿಶೇಷ ಪೂಜೆ ಸಲ್ಲಿಸಿ, ನಂತರ ಅಕ್ಷರಭ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮ ಸಂಸ್ಥೆಯಡಿಯಲ್ಲಿ ನಡೆಯುತ್ತಿರುವ ಪ್ರೇರಣಾ ವಿದ್ಯಾಸಂಸ್ಥೆಯು ಕಳೆದ 14 ವರ್ಷಗಳಿಂದ ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಬೇಕೆಂಬ ಉದ್ದೇಶದಿಂದ ಶಾಲೆಯನ್ನು ಆರಂಭಿಸಿದ್ದೇವೆ. ಬಹಳ ಶ್ರದ್ದೆ ಹಾಗೂ ಪ್ರಾಮಾಣಿಕತೆಯಿಂದ ಸಂಸ್ಥೆಯನ್ನು ಮುನ್ನಡೆಸಲಾಗುತ್ತಿದೆ. ಪೋಷಕರು ಹಾಗೂ ಸಾರ್ವಜನಿಕರ ಸಹಕಾರದಿಂದ 300ಕ್ಕು ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂದರು.
ಪೋಷಕರು ಹಾಗೂ ವಿದ್ಯಾರ್ಥಿಗಳು ಸಂಸ್ಥೆಯ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದು, ನರ್ಸರಿಯಿಂದ ಆರಂಭಗೊಂಡು 7ನೇ ತರಗತಿಯವರೆಗೆ ಶಾಲೆಯನ್ನು ನಡೆಸಲಾಗುತ್ತದೆ. ಸುಂದರ ಪರಿಸರದಲ್ಲಿ ಸುಸಜ್ಜಿತ ಕಟ್ಟಡವನ್ನು ನಿರ್ಮಾಣಗೊಂಡು ಟ್ರಸ್ಟಿಗಳ ಸಹಕಾರದಿಂದ ಯಶಸ್ವಿಯಾಗಿ ಮುನ್ನಡೆಯುತ್ತಿದೆ, ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವ ಜೊತೆಗೆ ಮಕ್ಕಳ ಕಲಿಕೆಯ ಬಗ್ಗೆ ಹೆಚ್ಚಿನ ನಿಗಾ ವಹಿಸಿ, ಯಾವುದೇ ಗೊಂದಲ ಹಾಗೂ ಸುಳ್ಳು ಸುದ್ದಿಗಳಿಗೆ ಅಸ್ಪದ ನೀಡಬೇಡಿ. ಆಗಿದ್ದಾಂಗೆ ಶಾಲೆಗೆ ಆಗಮಿಸಿ, ಮಕ್ಕಳ ಕಲಿಕೆಯ ಬಗ್ಗೆ ಮಾಹಿತಿ ತಿಳಿದುಕೊಳ್ಳಿ ಎಂದು ಅಧ್ಯಕ್ಷ ಪ್ರಕಾಶ್ ತಿಳಿಸಿದರು.
ಸ್ಪೂರ್ತಿ ಟ್ರಸ್ಟ್‍ನ ಕಾರ್ಯದರ್ಶಿ ಹಾಗೂ ವಕೀಲ ಶಿವಸ್ವಾಮಿ ಮಾತನಾಡಿ, ಶಿಕ್ಷಣ ಜೀವನವನ್ನೇ ಬದಲಿಸುತ್ತದೆ. ಹೀಗಾಗಿ ಪ್ರತಿಯೊಬ್ಬರು ವಿದ್ಯಾವಂತರಾಗಬೇಕು. ನಿಮ್ಮ ಮಕ್ಕಳು ಸರಸ್ವತಿಯ ಸಮ್ಮುಖದಲ್ಲಿ ಅಕ್ಷರಾಭ್ಯಾಸವನ್ನು ಆರಂಭಿಸಿದ್ದಾರೆ. ಈಗ ಅವರೆಲ್ಲರು ಸರಸ್ವತಿ ಪುತ್ರರಾಗಿದ್ದಾರೆ. ಮಕ್ಕಳು ಕಲಿಕೆಗೆ ಹೆಚ್ಚಿನ ಒತ್ತು ನೀಡಿ ಎಂದು ಸಲಹೆ ನೀಡಿದರು. ಬಳಿಕ ಪುಟ್ಟ ಮಕ್ಕಳಿಂದ ಪೋಷಕರ ಸಹಕಾರದೊಂದಿಗೆ ಓಂ, ಶ್ರೀ ಅ, ಆ. ಅನ್ನು ಅಕ್ಕಿ ಕಾಳಿನಲ್ಲಿ ಬರೆಸುವ ಮೂಲಕ ದೇವಸ್ಥಾನದ ಪ್ರಧಾನ ಅರ್ಚಕರಾದ ವೇಣುಗೋಪಾಲ್ ಚಾಲನೆ ಕೊಟ್ಟರು.
ಕಾರ್ಯಕ್ರಮದಲ್ಲಿ ಸ್ಪೂರ್ತಿ ಟ್ರಸ್ಟ್ ಸದಸ್ಯ ನಟರಾಜನ್, ಪ್ರೇರಣಾ ವಿದ್ಯಾ ಸಂಸ್ಥೆಯ ಮುಖ್ಯ ಶಿಕ್ಷಕ ಎಚ್.ಜಿ. ಮಹೇಶ್‍ಕುಮಾರ್, ಸಹ ಶಿಕ್ಷಕರಾದ ಪಲ್ಲವಿ, ದೀಪಾ, ರಾಧ, ಜಿ. ದೀಪಾ, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.