ಸರ್ವಾಂಗೀಣ ಅಭಿವೃದ್ಧಿಗೆ ಕಟಿ ಬದ್ದನಾಗಿದ್ದೇನೆ:ಕಂದಕೂರು
ಸೈದಾಪುರ:ಜು.2:ತಂದೆಯವರು ಶಾಸಕರಾಗಿದ್ದಾಗ ವಿಶೇಷ ಕಾಳಜಿವಹಿಸಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಈ ಭಾಗದಲ್ಲಿ ಹಾಕಿಕೊಂಡಿದ್ದರು. ಅದರಂತೆ ನಾನು ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಕಟಿ ಬದ್ಧನಾಗಿದ್ದೇನೆ ಎಂದು ಶಾಸಕ ಶರಣಗೌಡ ಕಂದಕೂರು ಅಭಿಪ್ರಾಯಪಟ್ಟರು.
ಸಮೀಪದ ಬೆಳಗುಂದಿ ಗ್ರಾಮದಲ್ಲಿ 2023-24ನೇ ಸಾಲಿನ ಕೆಕೆಆರ್‍ಡಿಬಿಯ 10 ಕೋಟಿ ಅನುದಾನದಲ್ಲಿ ಬೆಳಗುಂದಿ-ಆನೂರು.ಕೆ ರಸ್ತೆ, ಭೀಮನಹಳ್ಳಿ-ಆನೂರು ಕೆ ರಸ್ತೆ ಮತ್ತು ಸೇತುವೆ ನಿರ್ಮಾಣ ಕಾಮಗಾರಿಕೆಯ ಉದ್ಘಾಟನೆ ಹಾಗೂ ಬೆಳಗುಂದಿ ಗ್ರಾಮದಲ್ಲಿ ಅಲ್ಪಸಂಖ್ಯಾತರ ಕಾಲೋನಿಯಲ್ಲಿನ 10 ಲಕ್ಷ ಅನುದಾನದ ಕಾಮಗಾರಿಗಳ ಅಡಿಗಲ್ಲು ಸಮಾರಂಭದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದರು. ಈ ಭಾಗ ಸ್ವಾತಂತ್ರ್ಯ ಬಂದ ನಂತರವು ಉತ್ತಮವಾದ ರಸ್ತೆ, ಶಾಲೆ, ಸೇತುವೆ ಸೇರಿದಂತೆ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿತ್ತು. ಇದೀಗ ವಿವಿಧ ಯೋಜನೆಗಳು ನೆರವೇರಲ್ಲಿದ್ದೂ ಮುಂದಿನ ದಿನಗಳಲ್ಲಿ ಉತ್ತಮ ಅನುಕೂಲತೆಗಳು ಲಭಿಸಲಿವೆ ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳ ರೈತರ ಮತ್ತು ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ ಸಂಬಂದಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯಬೇಕು ಆಗ ಸಮಗ್ರ ಅಭಿವೃದ್ಧಿ ಸಾಧ್ಯ. ಇದನ್ನು ಪರಿಗಣಿಸಿ ಜೆಟಿಟಿಸಿ ಕಾಲೇಜಿಗೆ 5 ಕೋಟಿ ಅನುದಾನ, ಬಾಡಿಯಾಲ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಸೈದಾಪುರದಲ್ಲಿ ಕಾಲೇಜು ಪ್ರಾರಂಭ ಮಾಡುವುದರೊಂದಿಗೆ ಅನೇಕ ಅಭಿವೃದ್ಧಿ ಕಾರ್ಯಗಳು ಮಾಡುವ ಉದ್ದೇಶವಿದೆ. ಇದಕ್ಕಾಗಿ ಹೆಚ್ಚಿನ ಅನುದಾನ ತರಲು ಪ್ರಯತ್ನಿಸುತ್ತಿದ್ದೇನೆ.
ಟಿ ಶರಣಗೌಡ ಕಂದಕೂರು, ಶಾಸಕರು