ರೈತರು ಕೃಷಿ ಮಾರುಕಟ್ಟೆಗಳನ್ನು ಆರಂಭಿಸಬೇಕು: ಕೃಷ್ಣಪ್ರಸಾದ್
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜು.02: ರೈತರ ಮಕ್ಕಳು ನಾಯಕರಾಗಬೇಕು. ರೈತರು ಕೃಷಿ ಉತ್ಪಾದಕ ಮಾರುಕಟ್ಟೆಗಳನ್ನು ಆರಂಭಿಸಬೇಕೆಂದು ಮೈಸೂರಿನ ಸಹಜ ಸಮೃದ್ಧಿ ಕೃಷಿ ಉತ್ಪನ್ನ ಮಾರುಕಟ್ಟೆಯ ನಿರ್ಮಾಪಕ ಕೃಷ್ಣಪ್ರಸಾದ್ ಕರೆ ನೀಡಿದರು.
ಅವರು ಪಟ್ಟಣದ ಹೋಟೆಲ್ ರಾಮದಾಸ್ ಸಭಾಂಗಣದಲ್ಲಿ ಮಾಜಿ ಸ್ಪೀಕರ್ ಕೃಷ್ಣ ಪ್ರತಿಷ್ಟಾನದ ವತಿಯಿಂದ ಕೃಷ್ಣ ಅವರ 84ನೇ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಕೃಷಿ ಉದ್ಯಮಗಳನ್ನು ಕಟ್ಟುವುದು ಹೇಗೆ? ಎನ್ನುವುದನ್ನು ಕುರಿತು ವಿಚಾರ ಮಂಡಿಸಿದರು.
ಇಂದು ಮಾರುಕಟ್ಟೆಯಲ್ಲಿ ರೈತರು ಮತ್ತು ದಳ್ಲಾಳಿಗಳ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ರೈತರ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಕೊಂಡು ಅದರಿಂದ ಹೆಚ್ಚು ಲಾಭ ಮಾಡುವ ಮಾರುಕಟ್ಟೆ ವ್ಯವಸ್ಥೆ ರೂಪುಗೊಂಡಿದೆ. ಇದಕ್ಕೆ ರೈತರು ಕೇವಲ ಕೃಷಿಕರಾಗಿರುವುದು ಕಾರಣ. ರೈತರು ತಮ್ಮ ಮಕ್ಕಳಿಗೆ ಹಣ ಕೊಡುವ ಬದಲು ಅವರಲ್ಲಿ ಕನಸುಗಳನ್ನು ತುಂಬಬೇಕು. ರೈತರು ತಮ್ಮ ಉತ್ಪನ್ನಗಳ ಮಾರಾಟಕ್ಕಾಗಿ ಮಾರುಕಟ್ಟೆಯನ್ನು ಹುಡುಕುವ ಬದಲು ಮಾರುಕಟ್ಟೆಗಳನ್ನು ನಿರ್ಮಿಸಬೇಕು. ರೈತರ ಮಕ್ಕಳು ಕೃಷಿ ಉದ್ಯಮಿಗಳಾಗಿ ಹೊರಹೊಮ್ಮಬೇಕು ಎಂದ ಕೃಷ್ಣಪ್ರಸಾದ್ ಇಂದು ತಮ್ಮ ಸಹಜ ಕೃಷಿ ಸಂಸ್ಥೆಯ ವತಿಯಿಂದ ರೂಪಿಸಿಕೊಂಡಿರುವ ಬಿತ್ತನೆ ಬೀಜ, ದೇಸೀಯ ಭತ್ತದ ತಳಿಗಳು, ನೀರಾ ಸಕ್ಕರೆ ತಯಾರಿಕೆ ಮತ್ತಿತರ ಮಾರುಕಟ್ಟೆ ವ್ಯವಸ್ಥೆಯ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.
ನೀರಾ ಚಳುವಳಿ ಮತ್ತು ಬಿತ್ತನೆ ಬೀಜ ಸ್ವಾತ್ಯಂತ್ರಕ್ಕಾಗಿ ರೈತರು ನಡೆಸಿದ ಚಳುವಳಿಯ ಸಂದರ್ಭದಲ್ಲಿ ಮಾಜಿ ಸ್ಪೀಕರ್ ದಿವಂಗತ ಕೃಷ್ಣ ಅವರು ನೀಡಿದ ಬೆಂಬಲದ ಬಗ್ಗೆ ಪ್ರಸ್ತಾಪಿಸಿದ ಕೃಷ್ಣಪ್ರಸಾದ್ ನೀರಾ ಮಾರಾಟಕ್ಕೆ ಅನುಮತಿ ಸಿಕ್ಕಿರುವುದರ ಹಿಂದೆ ಕೃಷ್ಣ ಅವರ ಕೊಡುಗೆಯಿದೆ ಎಂದರು.
ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ ಮಾಜಿ ಸ್ಪೀಕರ್ ಕೃಷ್ಣ ಮೌಲ್ಯಾಧಾರಿತ ರಾಜಕಾರಣದ ನೈಜ ಪ್ರತಿನಿಧಿ. ಇಂದು ಮೌಲ್ಯಧಾರಿತ ರಾಜಕಾರಣದ ಕೊಂಡಿಗಳು ಕಳಚುತ್ತಿವೆ ಇದು ಅಪಾಯಕಾರಿ ಬೆಳವಣಿಗೆ ಮೌಲ್ಯಾಧಾರಿತ ರಾಜಕಾರಣ ನಾಶವಾದರೆ ಅದನ್ನು ಸರಿದಾರಿಗೆ ತರಲು ಮತದಾರರಿಂದಲೂ ಅಸಾಧ್ಯ ಎಂದು ಎಚ್ಚರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಹೆಚ್.ಟಿ.ಮಂಜು ನಾನು ರೈತ ಚಳುವಳಿಯ ಮೂಲಕ ಬೆಳೆದವನು. ಮಂಡ್ಯ ಜಿಲ್ಲೆ ಆದರ್ಶ ರಾಜಕಾರಣಿಗಳಿಗೆ ಹೆಸರಾಗಿದೆ. ಹಿರಿಯರ ದಾರಿಯಲ್ಲಿ ನಾನು ನಡೆಯುತ್ತೇನೆ. ಕೃಷ್ಣ ಪ್ರತಿಷ್ಠಾನದ ಕಾರ್ಯಚಟುವಟಿಕೆಗಳಿಗೆ ಅಗತ್ಯ ಸಹಕಾರ ನೀಡುತ್ತೇನೆಂದರು.
ಇದೇ ಸಂದರ್ಭದಲ್ಲಿ ಸಾಹಿತಿ ಬಲ್ಲೇನಹಳ್ಳಿ ಮಂಜುನಥ್, ಜಲತಜ್ಞ ನವಿಲುಮಾರನಹಳ್ಳಿ ರಾಮೇಗೌಡ ಮತ್ತು ಪೌರ ಕಾರ್ಮಿಕೆ ಕರ್ಪಮ್ಮ ಅವರಿಗೆ ಕೃಷ್ಣ ನಾಗರೀಕ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಸರ್ಕಾರಿ ಶಾಲೆಯ ಮಕ್ಕಳಿಗೆ ಹಾಗೂ ಭಾರತೀಯ ನೌಕಾ ದಳದಲ್ಲಿ ಸಬ್ ಲೆಪ್ಟಿನೆಂಟ್ ಆಗಿ ಆಯ್ಕೆಯಾಗಿರುವ ತಾಲೂಕಿನ ಬೂಕಹಗಳ್ಳಿ ಗ್ರಾಮದ ಬಿ.ಎಂ.ಸಾಗರ್ ಅವರಿಗೆ ಕೃಷ್ಣ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ಮನ್ ಮುಲ್ ನಿರ್ದೇಶಕ ಡಾಲು ರವಿ, ರೈತ ಮುಖಂಡ ಕೆ.ಆರ್.ಜಯರಾಂ, ಆರ್.ಟಿ.ಓ ಅಧಿಕಾರಿ ಮಲ್ಲಿಕಾರ್ಜುನ್, ಕೃಷ್ಣ ಪ್ರತಿಷ್ಟಾನದ ಅಧ್ಯಕ್ಷ ಜವರಾಯಿಗೌಡ, ಶ್ರೀಮತಿ ಇಂದಿರಾ ಕೃಷ್ಣ, ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಪೆÇ್ರ: ಜಯಪ್ರಕಾಶ್‍ಗೌಡ, ಅಂ.ಚಿ.ಸಣ್ಣಸ್ವಾಮೀಗೌಡ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಕೃಷ್ಣ ಅಭಿಮಾನಿಗಳು ಭಾಗವಹಿಸಿದ್ದರು.