ವಿದ್ಯುತ್ ಸಂಬಂಧಿತ ಕೆಲಸ ನಿರ್ವಹಿಸಲು ಸುರಕ್ಷತಾ ವಿಧಾನ ಅನುಸರಿಸಿ: ಎಚ್.ಎಸ್.ವೆಂಕಟೇಶ್
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು..02-ವಿದ್ಯುತ್ ಬಳಕೆ ಹಾಗೂ ವಿದ್ಯುತ್ ಸಂಬಂಧಿಸಿ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಸುರಕ್ಷತಾ ವಿಧಾನಗಳನ್ನು ಅನುಸರಿಸಿ, ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಂಡರೆ ವಿದ್ಯುತ್ ಅವಘಡಗಳನ್ನು ತಪ್ಪಿಸಲು ಸಾಧ್ಯವಿದೆ ಎಂದು ಮೈಸೂರು ವಲಯದ ಅಪರ ಮುಖ್ಯ ವಿದ್ಯುತ್ ಪರಿವೀಕ್ಷಕ ಎಚ್.ಎಸ್. ವೆಂಕಟೇಶ್ ತಿಳಿಸಿದರು.
ನಗರದ ಡಾ. ರಾಜ್‍ಕುಮಾರ್ ಭವನದಲ್ಲಿ ಚಾಮುಂಡೇಶ್ವರಿ ವಿದ್ಯುತ್ ಪ್ರಸರಣ ನಿಗಮ ಹಾಗೂ ವಿದ್ಯುತ್ ಪರಿವೀಕ್ಷಣಾಲಯ ವತಿಯಿಂದ ನಡೆದ ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹ ಕಾರ್ಯಕ್ರಮವನ್ನು ಉದ್ಗಾಟಿಸಿ ವಿದ್ಯುತ್ ಸುರಕ್ಷತೆಗೆ ಅನುಸರಿಸಬೇಕಾದ ಕ್ರಮಗಳ ಕುರಿತು ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ವಿದ್ಯುತ್ ಬಳಕೆ ದೇಶದಲ್ಲಿ ಹೆಚ್ಚಾಗುತ್ತಿದೆ. ನಮ್ಮೆಲ್ಲರ ದೈನಂದಿನ ಜೀವನವು ಸಹ ವಿದ್ಯುತ್ ಉಪಕರಣಗಳ ಬಳಕೆಯಿಂದಲೇ ಆರಂಭವಾಗಬೇಕು. ಸುನಾಮಿ, ಪ್ರವಾಹ ಹಾಗೂ ಭೂಕಂಪದಿಂದ ಸಾವಿರಾರು ಮಂದಿ ಮೃತಪಟ್ಟಿರುವ ವರದಿಗಳನ್ನು ನೋಡುತ್ತೇವೆ. ಅದನ್ನು ತಡೆಯುವ ಬಗ್ಗೆ ಬಹಳ ಚರ್ಚೆಗಳು ನಡೆಯುತ್ತದೆ. ಕೋಟ್ಯಾಂತರ ರೂ.ಗಳನ್ನು ವೆಚ್ಚ ಮಾಡಲಾಗುತ್ತದೆ. ಅದರು ಸಹ ಅದನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ಅದೇ ಪ್ರಮಾಣದಲ್ಲಿ ವಿದ್ಯುತ್ ಅವಘಡಗಳಿಂದ ಸಾವಿಗೀಡಾಗುತ್ತಿದ್ದಾರೆ. ಅಷ್ಟೇ ಪ್ರಮಾಣದಲ್ಲಿ ಗ್ರಾಹಕರು ಮೃತಪಡುತ್ತಿದ್ದಾರೆ. ಇದಕ್ಕೆ ಕಾರಣ ವಿದ್ಯುತ್ ಬಗ್ಗೆ ನಮಗೆ ತಿಳುವಳಿಕೆ ಕೊರತೆ ಮತ್ತು ಅದು ಕಣ್ಣಿಗೆ ಕಾಣದ ಮತ್ತು ಗಮನಕ್ಕೆ ಬರುವ ಮುಂಚೆಯೇ ಅಪತ್ತು ಬರುತ್ತದೆ. ಹೀಗಾಗಿ ಈ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ವಿದ್ಯುತ್ ಪರಿವೀಕ್ಷಣಾ ನಿಗಮ ಕಾರ್ಯಾಗಾರವನ್ನು ಆಯೋಜನೆ ಮಾಡಿದೆ ಎಂದರು.
ರಾಜ್ಯ ಸರ್ಕಾರದ ಇಂಧನ ಇಲಾಖೆಯು ಈ ಬಗ್ಗೆ ಹೆಚ್ಚಿನ ಅಸಕ್ತಿ ವಹಿಸಿ, ವಿದ್ಯುತ್ ಅವಘಡಗಳನ್ನು ತಡೆಯುವ ಸಂಬಂಧ ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹವನ್ನು ಜೂ. 26 ರಿಂದ ಜು. 2 ವರೆಗೆ ಎಂಟು ದಿನಗಳ ಕಾಲ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ, ಇಂಧನ ಸಚಿವ ಕೆ.ಕೆ. ಜಾರ್ಜ್ ಅವರು ವಿಧಾನಸೌಧದಲ್ಲಿ ಸಪ್ತಾಹಕ್ಕೆ ಚಾಲನೆ ನೀಡಿದ್ದಾರೆ. ಗ್ರಾಹಕರು ಮತ್ತು ಚೆಸ್ಕಾಂ ನಿಗಮದ ಸಿಬ್ಬಂದಿಗಳು ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಕಾರ್ಯಾಗಾರವನ್ನು ಆಯೋಜನೆ ಮಾಡಲಾಗಿದೆ ಎಂದರು. ಪವರ್ ಪಾಯಿಂಟ್ ಮೂಲಕ ವಿದ್ಯುತ್ ಸುರಕ್ಷತೆ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ಚೆಸ್ಕಾಂನ ಮೈಸೂರು ವಲಯದ ಉಪ ಮುಖ್ಯ ವಿದ್ಯುತ್ ಪರಿವೀಕ್ಷಕ ಅಲ್ತಾಪ್ ಉಸ್ದಾನ್ ಜಕಾರ್ಕಿ, ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಸಿ. ರಮೇಶ್, ಜಿಲ್ಲಾಧ್ಯಕ್ಷ ಎಂ.ಜಿ. ಸುರೇಶ್, ಮೈಸೂರು ದಕ್ಷಿಣ ವಿದ್ಯುತ್ ಪರಿವೀಕ್ಷಕರಾದ ವೀಣಾ, ಮೈಸೂರು ಉತ್ತರ ಪರಿವೀಕ್ಷಕರಾದ ನೇತ್ರಾವತಿ, ಚಾ.ನಗರ ಉಪ ವಿದ್ಯುತ್ ಪರಿವೀಕ್ಷಕರಾದ ಎಂ. ಅರ್ಚನಾ, ಸಹಾಯಕ ಕಾರ್ಯಪಾಲಕ ಅಭಿಯಂತರಾದದ ಸುರೇಶ್‍ಕುಮಾರ್, ದ್ರುಪದ್, ಮುದ್ದರಾಜ್, ಸ್ಥಳಿಯ ಸಂಸ್ಥೆಯ ಅಧ್ಯಕ್ಷ ಮುರಳಿಕೃಷ್ಣ ಸ್ವಾಮಿ, ಎಸ್ಸಿ ಎಸ್ಟಿ ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಪ್ರಶಾಂತ್‍ಕುಮಾರ್, ಕಿರಿಯ ಇಂಜಿನಿಯರ್ ಎಸ್. ಮಂಜುನಾಥ್, ತಾಲೂಕು ಅಧ್ಯಕ್ಷ ಚಾ.ನಗರ ಗಂಗಾಧರಸ್ವಾಮಿ, ಗುಂಡ್ಲುಪೇಟೆ ಭೀಮಣ್ಣ, ಯಳಂದೂರು ಬಿ. ನಾಗೇಶ್, ಕೊಳ್ಳೇಗಾಲ ನಾಗರಾಜು, ಹನೂರು ಮುತ್ತುರಾಜು, ಇಂಜನಿಯರ್‍ಗಳು, ಪವರ್ ಮ್ಯಾನ್‍ಗಳು, ವಿದ್ಯುತ್ ಗುತ್ತಿಗೆದಾರರು ಉಪಸ್ಥಿತರಿದ್ದರು.