ಪತ್ರಿಕೋದ್ಯಮ ಒಂದು ಪವಿತ್ರ ಧರ್ಮ: ಗೋಪಾಲ ನಾಯಕ
ಸಂಜೆವಾಣಿ ವಾರ್ತೆ,
ವಿಜಯಪುರ,ಜು.2: ಪತ್ರಿಕೋದ್ಯಮ ಎನ್ನುವುದೇ ಒಂದು ಪವಿತ್ರ ಧರ್ಮವಾಗಿದ್ದು ಇದರಲ್ಲಿ ನಾವು ನಿಸ್ವಾರ್ಥವಾಗಿ ಸೇವೆ ಸಲ್ಲಿಸುವುದರ ಮೂಲಕ ಅದನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದು ನಗರದ ಹಿರಿಯ ಪತ್ರಕರ್ತ ಗೋಪಾಲ ನಾಯಕ ಹೇಳಿದರು.
­­ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ಇತಿಹಾಸ ಅಧ್ಯಯನ ವಿಭಾಗದ ವತಿಯಿಂದ ಸೋಮವಾರ ಆಯೋಜಿಸಿದ್ದ ‘ಪತ್ರಿಕಾ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾಧ್ಯಮದಲ್ಲಿ ಪತ್ರಿಕೆಗಳು ವಿಶಾಲವಾಗಿ ಬೆಳೆದಿದ್ದು, ಇದರಲ್ಲಿ ತಂತ್ರಜ್ಞಾನದ ಪ್ರಭಾವ ಕೂಡಾ ಜಾಸ್ತಿಯಾಗಿವೆ. ಇಂದು ಪತ್ರಿಕೋದ್ಯಮದಲ್ಲಿ ಬರುವ ಸುದ್ದಿಗಳೇ ನಿಜವಾದ ಹಾಗೂ ಸತ್ಯ ಸತ್ಯಾಂಶವುಳ್ಳ ಸುದ್ಧಿಗಳು ಎಂದು ಹೇಳಲು ನನಗೆ ಹೆಮ್ಮೆ ಅನಿಸುತ್ತದೆ. ಪತ್ರಿಕೆಗಳು ಜನಪರವಾಗಿದ್ದು, ಜನರ ಸಮಸ್ಯೆಗಳನ್ನು ಬಗೆಹರಿಸಿ ಸರಕಾರದ ಗಮನ ತರುವುದೇ ಇದರ ಗುರಿಯಾಗಿದೆ. ಪತ್ರಿಕೆಗಳು ಜನ ಮತ್ತು ಸರಕಾರದ ನಡುವೆ ಸೇತುವೆಯಾಗಿ ಕೆಲಸ ಮಾಡಬೇಕು. ಪತ್ರಿಕೆಗಳಲ್ಲಿ ಕೆಲಸ ಮಾಡುವಾಗ ಅನೇಕ ಅಡತಡೆಗಳು ಬಂದರೂ ಅವುಗಳನ್ನು ಎದುರಿಸಿ ನಿಲ್ಲಬೇಕು ಎಂದರು.
ಇದೇ ಸಂದರ್ಭದಲ್ಲಿ ಕತಾರನ ಮಾಧ್ಯಮ ತಜ್ಞೆ ಮಾಗೇಶ್ವರಿ ಮಾತನಾಡಿ, ಕನ್ನಡ ಭಾμÉಯ ಪ್ರಚಾರ ನಿಜಕ್ಕೂ ಶ್ಲಾಘನೀಯ. ಇಂದು ನಾವು ಕನ್ನಡ ಪತ್ರಿಕೋದ್ಯಮದ ಪರಂಪರೆಯನ್ನು ಆಚರಿಸುತ್ತಿದ್ದು, ಇದರ ಜವಾಬ್ದಾರಿ ಕೂಡ ನೆನಪಿಸಿಕೊಳ್ಳುವ ಸಮಯ. ವಿದ್ಯಾರ್ಥಿನಿಯರು ನಾಳೆಯ ಬೆಳಕಾಗಿದ್ದು ಧೈರ್ಯದಿಂದ ಹೊರಹೊಮ್ಮಬೇಕು. ಇಂದಿನ ತಂತ್ರಜ್ಞಾನದ ಕ್ಷಿಪ್ರ ಪ್ರಗತಿಗೆ ಸಾಕ್ಷಿಯಾಗಿರುವಂತೆ ಪತ್ರಕರ್ತರು ಶ್ರಮಿಸಬೇಕಾಗಿದೆ. ಕೃತಕ ಬುದ್ಧಿಮತ್ತೆಯ, ವರ್ಚುವಲ್ ರಿಯಾಲಿಟಿ ಮತ್ತು ಮಲ್ಟಿಮೀಡಿಯಾ ಸ್ಟೋರಿ ಹೀಗೆ ಹತ್ತು ಹಲವು ತಂತ್ರಜ್ಞಾನಗಳು ಕಣ್ಣಮುಂದೆ ಇದ್ದು ಅದನ್ನು ಬಳಕೆ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ ಮಹಿಳಾ ವಿವಿಯ ಕುಲಪತಿ ಪ್ರೊ. ಬಿ.ಕೆ. ತುಳಸಿಮಾಲ ಮಾತನಾಡಿ, ಪತ್ರಿಕೆಯಲ್ಲಿ ಎಷ್ಟೋ ಮಹನಿಯರ ಸಾಧನೆ ಆಗಾಧವಾಗಿದೆ. ಅವರಿಗೆ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಿ, ಇಂದು ಕನ್ನಡ ಪತ್ರಿಕಾ ದಿನಾಚರಣೆಯನ್ನು ಸಂಭ್ರಮಿಸಬೇಕಾಗಿದೆ. ಇಂದು ಮಾಧ್ಯಮ ಎಂಬುದು ಪ್ರತಿಯೊಂದು ಕ್ಷೇತ್ರಕ್ಕೂ ಅವಶ್ಯಕತೆಯಿದೆ. ಪತ್ರಿಕೋದ್ಯಮದಲ್ಲಿ ಸಾಕಷ್ಟು ಪೈಪೋಟಿ ಇದ್ದರೂ, ಎಲ್ಲಾ ಪತ್ರಿಕೆಯನ್ನು ಎದುರಿಸಿ ತನ್ನದೇ ಆದ ಸ್ಥಾನವನ್ನು ಗಟ್ಟಿಯಾಗಿ ಉಳಿಸಿಕೊಂಡು ಕನ್ನಡ ಪತ್ರಿಕೆಗಳು ನಿಂತಿವೆ. ಮಿಡಿಯಾ ಎನ್ನುವುದು ಜಗತ್ತಿನಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿರುವ ಉದ್ಯಮವಾಗಿದೆ. ಇಲ್ಲಿಯೂ ಕೂಡ ಒಳ್ಳೆಯ ಭವಿಷ್ಯ ಕಟ್ಟಿಕೊಳ್ಳಲು ಸಾಕಷ್ಟು ಅವಕಾಶಗಳಿವೆ. ತಂತ್ರಜ್ಞಾನ ಯುಗದಲ್ಲಿ ಹಲವಾರು ರೀತಿಯ ಕಾರ್ಯಚಟುವಟಿಕೆಗಳನ್ನು ಪತ್ರಿಕೋದ್ಯಮದಲ್ಲಿ ನೋಡುವುದರಿಂದ ಸಾಕಷ್ಟು ಉದ್ಯೋಗವಕಾಶಗಳನ್ನು ಪಡೆಯಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಇತಿಹಾಸ ವಿಭಾಗದ ಅತಿಥಿ ಉಪನ್ಯಾಸಕರಾದ ಚಂದ್ರಕಲಾ ಹಳ್ಳಿ ಹಾಗೂ ಗುರುರಾಜ ಬೋಮನಹಳ್ಳಿ, ವಿವಿಯ ವಿವಿಧ ವಿಭಾಗಳ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ಸಂಶೋಧನಾ ವಿದ್ಯಾರ್ಥಿನಿಯರು, ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿವಿಯ ಇತಿಹಾಸ ಅಧ್ಯಯನ ವಿಭಾಗದ ಸಂಯೋಜಕ ಡಾ. ಸುರೇಶ ಕೆ.ಪಿ ಸ್ವಾಗತಿಸಿದರು. ಸಂಶೋಧನಾ ವಿದ್ಯಾರ್ಥಿನಿಯರಾದ ಸುಷ್ಮಾ ಪವಾರ ಮತ್ತು ಫಿಲೋಮಿನಾ ಅತಿಥಿಯರನ್ನು ಪರಿಚಯಿಸಿದರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕ ಸಂದೀಪ ಪ್ರಾಸ್ತಾವಿಕ ನುಡಿಗಳನ್ನಾಡಿಗಳನ್ನಾಡಿದರು. ಇತಿಹಾಸ ವಿಭಾಗದ ಪ್ರಾಧ್ಯಾಪಕ ಡಾ. ಎಮ್.ಎಸ್. ಮುಜಾವರ ವಂದಿಸಿದರು, ಸಹಾಯಕ ಪ್ರಾಧ್ಯಾಪಕಿ ಡಾ. ತಹಮೀನ ನಿಗಾರ್ ಸುಲ್ತಾನಾ ಕಾರ್ಯಕ್ರಮವನ್ನು ನಿರೂಪಿಸಿದರು.