ಜೀವ ರಕ್ಷಣೆಯಲ್ಲಿ ವೈದ್ಯರ ಕೊಡುಗೆ ಅನನ್ಯ: ಡಾ. ಹೀನಾ
ಸಂಜೆವಾಣಿ ವಾರ್ತೆ,
ವಿಜಯಪುರ,ಜು.2: ಅನಾರೋಗ್ಯಕ್ಕೆ ತುತ್ತಾದ ಪ್ರತಿಯೊಬ್ಬ ರೋಗಿಯನ್ನು ಚಿಕಿತ್ಸೆ ನೀಡುವ ಮೂಲಕ ಗುಣಪಡಿಸಿ ಮತ್ತು ಪ್ರಾಣ ರಕ್ಷಣೆ ಮಾಡಿ ಅವರಿಗೆ ಪುನರ್ಜನ್ಮ ನೀಡುವಲ್ಲಿ ವೈದ್ಯರ ಕೊಡುಗೆ ಅನನ್ಯವಾದುದು. ಪಶ್ಚಿಮ ಬಂಗಾಲದ ಎರಡನೆಯ ಮುಖ್ಯಮಂತ್ರಿ ಹಾಗೂ ಶ್ರೇಷ್ಠ ವೈದ್ಯರೆಂದೇ ಹೆಸರುವಾಸಿಯಾಗಿದ್ದ ಡಾ. ಬಿಧನ್ ಚಂದ್ರ ರಾಯ್ ಅವರ ಜನ್ಮದಿನ ಜುಲೈ 1 ರಂದು ರಾಷ್ಟ್ರದೆಲ್ಲೆಡೆ ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತಿದೆ. ಅವರು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಹಾಗೂ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಸಂಸ್ಥೆಯನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿ 1991 ರಲ್ಲಿ ಮೊಟ್ಟಮೊದಲಿಗೆ ಭಾರತದಲ್ಲಿ ಜುಲೈ 1 ರಂದು ವೈದ್ಯರ ದಿನವನ್ನಾಗಿ ಆಚರಿಸಲು ತೀರ್ಮಾನಿಸಲಾಯಿತು ಎಂದು ಡಾ. ಹೀನಾ ಸಾಹೇಬಾ ಅವರು ಅಭಿಪ್ರಾಯಪಟ್ಟರು.
ನಗರದ ಅಲ್-ಅಮೀನ್ ಆಸ್ಪತ್ರೆಯಲ್ಲಿ ವಿದ್ಯಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಮಕ್ಕಳಿಂದ ಆಚರಿಸಲ್ಪಟ್ಟ ರಾಷ್ಟ್ರೀಯ ವೈದ್ಯರ ದಿನದ ಅಂಗವಾಗಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ಡಾ. ಬಿ.ಸಿ.ರಾಯ್ ಅವರು ನೀಡಿರುವ ಅಮೂಲ್ಯವಾದ ಕೊಡುಗೆಯನ್ನು ಇಂದು ಸ್ಮರಿಸಲೇ ಬೇಕು. ಕೋವಿಡ್‍ನಂತಹ ಕಾಲಘಟ್ಟದಲ್ಲಿ ತಮ್ಮ ವೈದ್ಯರು ಪ್ರಾಣವನ್ನೇ ಪಣಕ್ಕಿಟ್ಟು ಜೀವನ್ಮರಣ ಮಧ್ಯೆ ಹೋರಾಡುತ್ತಿರುವ ರೋಗಿಗಳ ಪ್ರಾಣ ರಕ್ಷಣೆಯಲ್ಲಿ ಮತ್ತು ಅಗತ್ಯ ವೈದ್ಯಕೀಯ ಸೇವೆ ನೀಡುವಲ್ಲಿ ಶ್ರಮಿಸಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ವಿದ್ಯಾ ಆಂಗ್ಲ ಮಾಧ್ಯಮ ಶಾಲೆಯ ಕ್ರಿಯೇಟಿವ್ಹ ಚೈಲ್ಡ್ ಸಮರ್ಥ ಖೊದ್ನಾಪೂರ ಈತನು ಸ್ವಯಂ ತಯಾರಿಸಿದ ವೈದ್ಯರ ದಿನಾಚರಣೆಯ ಬಗೆಗಿನ ಸಂದೇಶದ ಇಮೇಜ್ ವೈದ್ಯರಿಗೆ ನೀಡಿ ಶುಭಾಶಯ ಕೋರಿದನು. ಮಕ್ಕಳು ವೈದ್ಯರುಗಳಿಗೆ ಪುಷ್ಪ ನೀಡಿ ವೈದ್ಯರ ದಿನದ ಪ್ರಯುಕ್ತ ಶುಭಾಶಯ ಕೋರಿದರು. ನಂತರ ಶಾಲೆಯ ಮಕ್ಕಳಿಗೆ ಆಸ್ಪತ್ರೆಯ ವಿವಿಧ ವಿಭಾಗಗಳು, ಪ್ರಾಯೋಗಿಕ ಲ್ಯಾಬೋರೇಟರಿ ಮತ್ತು ಇನ್ನಿತರ ಮಾಹಿತಿಯನ್ನು ನೀಡಲಾಯಿತು. ಇದೇ ಸಂದರ್ಭದಲ್ಲಿ ಆಸ್ಪತ್ರೆಯ ಟ್ರಸ್ಟಿ ಇವರು ವಿದ್ಯಾ ಆಂಗ್ಲ ಮಾಧ್ಯಮ ಶಾಲೆಯ ಎಲ್ಲ ಶಿಕ್ಷಕರಿಗೆ ಹಾಗೂ ಮಕ್ಕಳಿಗೆ ಉಚಿತವಾಗಿ ಆರೋಗ್ಯ ತಪಾಸಣೆಯ ಸೌಲಭ್ಯವನ್ನು ಒದಗಿಸಲಾಗುವುದು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಅಧೀಕ್ಷಕ ವೈದ್ಯಾಧಿಕಾರಿಗಳಾದ ಡಾ. ಜಿಲಾನಿ, ಡಾ. ಬಿಲಾಲ ಹಾಗೂ ಮುಖ್ಯೋಪಾಧ್ಯಾಯಿನಿ ದಿಲಶಾದ್ ಬದಾಮಿ, ಶಿಕ್ಷಕಿಯರಾದ ಸನಾ ಕೌಸರ್, ಮುಸ್ಕಾನ್, ತಸ್ಲೀಂ, ಡಿ.ಎಂ. ಅನೀತಾ, ಸರೋಜಿನಿ, ದಾನಮ್ಮ ಹಾಗೂ ಇತರರು ಉಪಸ್ಥಿತರಿದ್ದರು.