ಗ್ರಾಮೀಣ ಪ್ರದೇಶದ ಬಡ ಹಾಗೂ ರೈತರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಶ್ರೇಯಸ್ಸು ಕೆಎಲ್ ಇ ಸಂಸ್ಥೆಗೆ ಸಲ್ಲುತ್ತದೆ : ಶಾಸಕ ಲಕ್ಷ್ಮಣ ಸವದಿ
ಅಥಣಿ :ಜು.2: ಶತಮಾನೋತ್ಸವದ ಇತಿಹಾಸವನ್ನು ಹೊಂದಿರುವ ಕೆಎಲ್‍ಇ ಸಂಸ್ಥೆಯು ಇಂದು ಡಾ. ಪ್ರಭಾಕರ ಕೋರೆ ಅವರ ನೇತೃತ್ವದಲ್ಲಿ ವಿಶ್ವ ವ್ಯಾಪಿಯಾಗಿ ಬೆಳೆದು ಸಂಸ್ಥೆಯ ಸಪ್ತ ಋಷಿಗಳ ಕನಸು ನನಸು ಮಾಡುತ್ತಿದ್ದಾರೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅವರು ಸೋಮವಾರ ಕೆಎಲ್‍ಇ ಸಂಸ್ಥೆಯ ಸ್ಥಳೀಯ ಸ್ವತಂತ್ರ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯ ಹಾಗೂ ಎಸ್ ಎಸ್ ಎಮ್ ಎಸ್ ಪದವಿ ಪೂರ್ವ ಮಹಾವಿದ್ಯಾಲಯದ ಕ್ರೀಡಾ ಮತ್ತು ಸಾಂಸ್ಕøತಿಕ ಚಟುವಟಿಕೆಯ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು.
ಒಂದು ಶಿಕ್ಷಣ ಸಂಸ್ಥೆಯನ್ನು ಯಾವ ರೀತಿ ಬೆಳೆಸಬೇಕು ಎಂಬುದನ್ನ ಡಾ. ಪ್ರಭಾಕರ ಕೋರೆ ಅವರ ಶೈಕ್ಷಣಿಕ ಪ್ರಗತಿಯೇ ಮಾದರಿಯಾಗಿದೆ. ಗ್ರಾಮೀಣ ಪ್ರದೇಶದ ಬಡ ಹಾಗೂ ರೈತರ ಮಕ್ಕಳಿಗೆ ಒಳ್ಳೆಯ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವ ಶ್ರೇಯಸ್ಸು ಕೆಎಲ್ ಇ ಸಂಸ್ಥೆಗೆ ಸಲ್ಲುತ್ತದೆ
ವಿದ್ಯಾರ್ಥಿಗಳು ಗುರುಗಳ ಮಾರ್ಗದರ್ಶನವನ್ನು ಸರಿಯಾಗಿ ಬಳಸಿಕೊಂಡು ಉತ್ತಮವಾದ ಶಿಕ್ಷಣವನ್ನು ಪಡೆದು ಬದುಕನ್ನು ಚೆನ್ನಾಗಿ ರೂಪಿಸಿಕೊಳ್ಳಬೇಕು. ನಿಮ್ಮ ಬದುಕು ನಿಮ್ಮ ಕೈಯಲ್ಲಿದೆ, ವಿದ್ಯಾರ್ಥಿ ಜೀವನದಲ್ಲಿ ಒಳ್ಳೆಯ ಭವಿಷ್ಯವನ್ನು ಸಾಕಾರಗೊಳಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಮಖಂಡಿಯ ಉಪವಿಭಾಗಿಯ ಅಧಿಕಾರಿ ಸಂತೋಷ ಕಾಮಗೌಡರ ಮಾತನಾಡಿ ವಿದ್ಯಾರ್ಥಿಗಳ ಜೀವನದಲ್ಲಿ ಗುರಿ ಇರಬೇಕು, ಗುರಿ ಸಾಧನೆಗಾಗಿ ಗುರುಗಳ ಮಾರ್ಗದರ್ಶನದ ಜೊತೆಗೆ ಪಾರದರ್ಶಕ ಪ್ರಯತ್ನ ಇರಬೇಕು. ಗುರಿ ಮುಟ್ಟುವ ತನಕ ಛಲ ಬಿಡಬಾರದು. ಅನೇಕ ಸಾಧಕರ ಜೀವನ ಚರಿತ್ರೆಗಳನ್ನು ತಿಳಿದುಕೊಳ್ಳುವ ಮೂಲಕ ಅವರಂತೆ ತಾವು ಸಾಧಕರಾಗಲು ಪ್ರಯತ್ನಿಸಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೆಎಲ್ ಇ ಸಂಸ್ಥೆಯ ನಿರ್ದೇಶಕ ಮಹಾಂತೇಶ ಕವಟಗಿಮಠ ಮಾತನಾಡಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಹೆಚ್ಚಿನ ಜ್ಞಾನ ಸಂಪಾದಿಸಬೇಕು. ಉನ್ನತ ಶಿಕ್ಷಣ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾಗುವ ಮಾರ್ಗದರ್ಶನವನ್ನು ಕೆಎಲ್ ಇ ಸಂಸ್ಥೆಯಿಂದ ನೀಡಲು ಸಂಸ್ಥೆಯ ಕಾರ್ಯಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು ಮುoದಾಗಿದ್ದಾರೆ. ಅಥಣಿ ಪಟ್ಟಣದಲ್ಲಿ ಸ್ವತಂತ್ರ ವಿಜ್ಞಾನ ಪದವಿ ಪೂರ್ವ ವಸತಿ ಮಹಾವಿದ್ಯಾಲಯವನ್ನು ಸ್ಥಾಪನೆ ಮಾಡಲಾಗಿದ್ದು, ಅಥಣಿ ತಾಲೂಕಿನ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು, ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಪದವಿಪೂರ್ವ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಸಾಧಕ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಾಲೇಜಿನ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ಕೆಎಲ್‍ಇ ಸಂಸ್ಥೆಯ ನಿರ್ದೇಶಕ ಜಯಾನಂದ ಮುನ್ನೊಳ್ಳಿ, ಎಸ್ ಎಸ್ ಎಮ್ ಎಸ್ ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಡಾ.ಎಂ. ಜಿ. ಹಂಜಿ, ಪ್ರಾಚಾರ್ಯರಾದ ಡಾ. ಬಿ ಎಸ್ ಕಾಂಬಳೆ, ಡಾ. ರೇಷ್ಮಾ ಇನಾಮದಾರ. ಕೆ ಶ್ರೀನಿವಾಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಡಾ. ಬಿ ಎಸ್ ಕಾಂಬಳೆ ಸ್ವಾಗತಿಸಿದರು. ಗೌರಿ ಪಾಟೀಲ್ ಮತ್ತು ಸ್ವಾತಿ ಚವಾಣ ನಿರೂಪಿಸಿದರು. ಕೆ ಶ್ರೀನಿವಾಸ್ ವಂದಿಸಿದರು.