ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಶಿಕ್ಷಣದ ಜೊತೆಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಿ : ಡಾ.ಬಸಗೌಡ ಕಾಗೆ
ಅಥಣಿ: ಜು.2:ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣದ ಜೊತೆಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಅಷ್ಟೇ ಅಗತ್ಯ. ಪ್ರತಿಯೊಬ್ಬರ ಜೀವನದಲ್ಲಿ ಶಿಕ್ಷಣ ಮತ್ತು ಆರೋಗ್ಯ ಎಂಬುದು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಅಥಣಿ ತಾಲೂಕ ಆರೋಗ್ಯ ಅಧಿಕಾರಿ ಡಾ. ಬಸಗೌಡ ಕಾಗೆ ಅಭಿಪ್ರಾಯಪಟ್ಟರು.
ಅವರು ಸೋಮವಾರ ಅಥಣಿ ಪಟ್ಟಣದ ಶ್ರೀಮತಿ ಕಾಶಿಬಾಯಿ ಚಿಕ್ಕಟ್ಟಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ವೈದ್ಯರ ದಿನಾಚರಣೆಯ ಅಂಗವಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ವಿದ್ಯಾರ್ಥಿಗಳು ನಿರ್ದಿಷ್ಟವಾದ ಗುರಿಯನ್ನು ಇಟ್ಟುಕೊಂಡು ಗುರುಗಳ ಮಾರ್ಗದರ್ಶನದಲ್ಲಿ ವಿದ್ಯಾಭ್ಯಾಸವನ್ನು ಮಾಡಿ ಉನ್ನತವಾದ ಸಾಧನೆ ಮಾಡಬೇಕು. ಉತ್ತಮವಾದ ಆಹಾರ ಮತ್ತು ನಿತ್ಯ ವ್ಯಾಯಾಮ ಮಾಡುವ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಎಲ್ಲ ಕುಟುಂಬಗಳಲ್ಲಿ ಮೊಬೈಲ್ ಬಳಕೆ ಹೆಚ್ಚಾಗುತ್ತಿದೆ. ಇದರಿಂದ ಮಕ್ಕಳ ವಿದ್ಯಾಭ್ಯಾಸ ಮತ್ತು ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ವಿದ್ಯಾರ್ಥಿಗಳು ಶೈಕ್ಷಣಿಕ ಮಾಹಿತಿಗೆ ಅದನ್ನ ಬಳಸಿಕೊಂಡರೆ ತಪ್ಪಲ್ಲ, ಆದರೆ ಅತಿಯಾದ ಮೊಬೈಲ್ ಬಳಕೆಯಿಂದ ತಮ್ಮ ಮಾನಸಿಕ ನೆಮ್ಮದಿ ಹಾಳಾಗಿ ಅಭ್ಯಾಸದಲ್ಲಿ ಏಕಾಗ್ರತೆ ಸಾಧಿಸಲು ತೊಂದರೆಗಾಗಲಿದೆ. ಆದ್ದರಿಂದ ಮೊಬೈಲ್ ಬಳಕೆಯನ್ನು ವಿದ್ಯಾರ್ಥಿಗಳು ಕಡಿಮೆ ಮಾಡಬೇಕೆಂದು ಸಲಹೆ ನೀಡಿದರು.
ಅಥಣಿ ತಾಲೂಕ ಸರ್ಕಾರಿ ನೌಕರರ ಸಂಘದ ರಾಮಗೊಂಡ ಪಾಟೀಲ ಮಾತನಾಡಿ ಅಧ್ಯಕ್ಷ ವೈದ್ಯರು ದೇವರ ಸಮಾನ, ಜನರಿಗೆ ಆರೋಗ್ಯ ಸೇವೆ ನೀಡುವಲ್ಲಿ ತಮ್ಮ ಜೀವನವನ್ನು ಮುಡುಪಾಗಿಡುತ್ತಾರೆ. ನಮ್ಮ ಅಥಣಿ ಸಾರ್ವಜನಿಕ ಆಸ್ಪತ್ರೆಯ ಪ್ರಗತಿಯಲ್ಲಿ ತಾಲೂಕ ವೈದ್ಯಾಧಿಕಾರಿ ಡಾ. ಬಸಗೌಡ ಕಾಗೆ ಅವರ ಪಾತ್ರ ಮಹತ್ತರವಾಗಿದ್ದು, ಉತ್ತಮ ಆಡಳಿತ ನೀಡುವುದರ ಜೊತೆಗೆ ತಾಲೂಕಿನ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಆರೋಗ್ಯ ಸೇವೆಗಳನ್ನು ಉತ್ತಮವಾಗಿ ನೀಡುತ್ತಿದ್ದಾರೆ. ಅಂತಹ ವೈದ್ಯರನ್ನು ಗುರುತಿಸಿ ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯವರು ವೈದ್ಯರ ದಿನಾಚರಣೆಯ ಸಂದರ್ಭದಲ್ಲಿ ಸನ್ಮಿಸುತ್ತಿರುವುದು ಅವರಿಗೆ ಇನ್ನಷ್ಟು ಸ್ಪೂರ್ತಿ ತುಂಬಲಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುರೇಶ ಚಿಕ್ಕಟ್ಟಿ ಮಾತನಾಡಿದರು. ಈ ಸಂದರ್ಭದಲ್ಲಿ ಅಥಣಿ ಪತಂಜಲಿ ಯೋಗ ಸಮಿತಿಯ ಎಸ್ ಕೆ ಹೊಳೆಪ್ಪನವರ, ಕರವೇ ಸಂಘಟನೆಯ ಅಧ್ಯಕ್ಷ ಅಣ್ಣಾಸಾಬ ತೆಲಸoಗ, ಹಿರಿಯ ಪತ್ರಕರ್ತ ಸಿ.ಎ ಹಿಟ್ನಾಳಮಠ , ಸಮಾಜ ಸೇವಕ ರಾಮಣ್ಣ ಧರಿಗೌಡ, ಶಿಕ್ಷಣ ಪ್ರೇಮಿ ಅಪ್ಪಾಸಾಹೇಬ ಚಿಕ್ಕಟ್ಟಿ ಉಪಸ್ಥಿತರಿದ್ದರು.
ಸುರೇಶ್ ಚಿಕ್ಕಟ್ಟಿ ಸ್ವಾಗತಿಸಿದರು. ಶಿಕ್ಷಕ ಸೌದಾಗರ ನಿರೂಪಿಸಿದರು. ಕಾರ್ಯದರ್ಶಿ ಸದಾಶಿವ ಚಿಕ್ಕಟ್ಟಿ ವಂದಿಸಿದರು.