ತ್ಯಾಜ್ಯ ವಿಲೇವಾರಿ  ಘಟಕ ವಿರೋಧಿಸಿ ಗ್ರಾಮಸ್ಥರ ಪ್ರತಿಭಟನೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಜು.2:ತಾಲ್ಲೂಕಿನ ಹೊಸಳ್ಳಿ ಗ್ರಾಮದಲ್ಲಿ ದಾವಣಗೆರೆ ಮಹಾನಗರ ಪಾಲಿಕೆಯಿಂದ ನಿರ್ಮಿಸಲು ಉದ್ದೇಶಿಸಿರುವ ವರಾಹ ಶಾಲೆ ಮತ್ತು ತ್ಯಾಜ್ಯ ವಿಲೇವಾರಿ  ಘಟಕ ವಿರೋಧಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹುಚ್ಚವ್ವಹಳ್ಳಿ ಮಂಜುನಾಥ್ ಬಣದ ನೇತೃತ್ವದಲ್ಲಿ ಹೊಸಳ್ಳಿ ಗ್ರಾಮಸ್ಥರು  ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥರು, ಮಹಾನಗರ ಪಾಲಿಕೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ಹೊಸಳ್ಳಿ ಬಳಿ ವರಾಹ ಶಾಲೆ ಆರಂಭಿಸಲು ಉದ್ದೇಶಿಸಿರುವುದು ಅವೈಜ್ಞಾನಿಕವಾಗಿದೆ. ಈ ಶಾಲೆ ದಾವಣಗೆರೆ ನಗರ ವ್ಯಾಪ್ತಿಯಿಂದ 23 ಕಿಮಿ ದೂರದಲ್ಲಿದೆ. ಈಗಾಗಲೇ ಈ ಸ್ಥಳಕ್ಕೆ ನಾವು ಹೋಗುವುದಿಲ್ಲ ಎಂದು ಹಂದಿ ಸಾಕಾಣಿಕೆದಾರರು ಖಡಾಖಂಡಿತವಾಗಿ ಹೇಳಿದ್ದಾರೆ. ಅದರಂತೆ ಗ್ರಾಮಸ್ಥರು ಕೂಡ ಇಲ್ಲಿ ವರಾಹ ಶಾಲೆ ಮಾಡಲು ಬಿಡುವುದಿಲ್ಲ.ಕಂದಾಯ ಇಲಾಖೆ ನಿಯಮದ ಪ್ರಕಾರ ಪಾಲಿಕೆ ವ್ಯಾಪ್ತಿಯ 13 ಕಿಮಿ ಅಂತರದ ಒಳಗೆ ವರಾಹ ಶಾಲೆ ಆರಂಭಿಸಲು ಮಾತ್ರ ಕಾನೂನಿನಲ್ಲಿ ಅವಕಾಶವಿದೆ. ದಾವಣಗೆರೆ ಮಹಾನಗರ ಪಾಲಿಕೆಯ 13 ಕಿಮಿ ವ್ಯಾಪ್ತಿಯಲ್ಲಿ ಯಾವುದೇ ಸರ್ಕಾರಿ ಜಮೀನು ಸಾಗುವಳಿ ಮಾಡುತ್ತಿದ್ದರೆ ಹಕ್ಕು ಪತ್ರ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ. ಈ ರೀತಿಯ ಸರ್ಕಾರಿ ಜಮೀನು ಇದ್ದರೆ ಅಲ್ಲಿ ಯೋರೋಪಿಯನ್ ರಾಷ್ಟçಗಳ ಮಾದರಿಯಲ್ಲಿ ಹೈಟೆಕ್ ವರಾಹ ಶಾಲೆಯನ್ನು ನಗರ ವ್ಯಾಪ್ತಿಯಲ್ಲಿಯೇ ಆರಂಭಿಸಲು ನಮ್ಮದೇನೂ ಅಡ್ಡಿ ಇಲ್ಲ ಎಂದರು.ಹಂದಿಯಿಂದ 18 ರೀತಿಯ ವಿವಿಧ ಕಾಯಿಲೆಗಳು ಹರಡುತ್ತವೆ ಎಂದು ವೈದ್ಯಕೀಯ ವರದಿಗಳು ಹೇಳುತ್ತವೆ. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಹೊಸಳ್ಳಿ ಸುತ್ತ ಮುತ್ತ ವರಾಹ ಶಾಲೆ ಆರಂಭಕ್ಕೆ ಅವಕಾಶ ನೀಡುವುದಿಲ್ಲ. ಇಷ್ಟೇ ಅಲ್ಲದೇ ಹೊಸಳ್ಳಿ ಗ್ರಾಮದ ಸುತ್ತ ಮುತ್ತ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣದ ಉದ್ದೇಶವನ್ನೂ ಮಹಾನಗರ ಪಾಲಿಕೆ ಹೊಂದಿದೆ. ಇದಕ್ಕೂ ಕೂಡ ನಾವು ಅವಕಾಶ ಕೊಡುವುದಿಲ್ಲ. ನಗರದಲ್ಲಿ ಉತ್ಪತ್ತಿಯಾಗುವ ಕಸಕ್ಕೆ ನಗರ ಪ್ರದೇಶದಲ್ಲಿಯೇ ವಿಲೇವಾರಿ ಘಟಕ ನಿರ್ಮಾಣ ಮಾಡಿಕೊಳ್ಳಬೇಕು. ಈ ಸಂಬAಧ ನಡೆಯುತ್ತಿರುವ ಪ್ರಯತ್ನವನ್ನು ಕೂಡಲೇ ನಿಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘ ಹಸಿರುಸೇನೆ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್, ಅಸ್ತಪನಹಳ್ಳಿ ಗಂಡುಗಲಿ, ಆಲೂರು ಪರಶುರಾಮ್, ನಿಟುವಳ್ಳಿ ಪೂಜಾರ ಅಂಜಿನಪ್ಪ,  ಹೂವಿನಮಡು ನಾಗರಾಜ್, ಕುರ್ಕಿ ಹನುಮಂತ, ಗೋಪಾಲ ನಾಯ್ಕ, ಭೀಮಾ ನಾಯ್ಕ, ಕೆಎಸ್‌ಆರ್‌ಟಿಸಿ ಚಂದ್ರಾನಾಯ್ಕ, ಮೋಹನ್ ನಾಯ್ಕ, ಗೋವಿಂದಣ್ಣ ಮತ್ತು ಗುಡಾಳು ಗ್ರಾಪಂ ಅಧ್ಯಕ್ಷ ಬಿ.ಲೋಕೇಶ್, ಗುಮ್ಮನೂರು  ಭೀಮೇಶ್, ಕಡರನಾಯಕನಹಳ್ಳಿ ಪ್ರಭು, ಪಾಳ್ಯ ರುದ್ರನಗೌಡ, ಭಾಗವಹಿಸಿದ್ದರು.