ನಂದಿನಿ ಹಾಲಿನ ದರ ಏರಿಕೆಗೆ ಖಂಡಿಸಿ ಬಿಜೆಪಿ‌ ಪ್ರತಿಭಟನೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಜು.೧: ನಂದಿನಿ ಹಾಲಿನ ದರದಲ್ಲಿ  ಏರಿಕೆ ಮಾಡಿರುವುದನ್ನು ವಿರೋಧಿಸಿ ಬಿಜೆಪಿ ರೈತಮೋರ್ಚಾ ಕಾರ್ಯಕರ್ತರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.ನಗರದ ಜಯದೇವ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಗಾಂಧಿ ವೃತ್ತದ ಮಾರ್ಗವಾಗಿ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿದ ಕಾರ್ಯಕರ್ತರು ಹಾಲಿನ ದರ ಕಡಿಮೆ ಮಾಡುವಂತೆ ಮನವಿ ಮಾಡಿದರು.ರಾಜ್ಯದಲ್ಲಿ ನಿತ್ಯ ಹಾಲಿನ ಉತ್ಪಾದನೆ 1 ಕೋಟಿ ಲೀಟರ್ ಸನಿಹದಲ್ಲಿದೆ ಎಂಬ ಕಾರಣದಿಂದ ಹಾಲಿನ ದರ ಹೆಚ್ಚಳ ಮಾಡಿರುವುದು ಹಾಸ್ಯಾಸ್ಪದ. ಯಾವುದೇ ಉತ್ಪನ್ನಗಳ ಅಭಾವವಾದಾಗ ದರ ಹೆಚ್ಚಳವಾಗುವುದು ಸಾಮಾನ್ಯ. ಆದರೆ ಉತ್ಪನ್ನ ಅಧಿಕವಾಗಿದೆ ಎಂದು ದರ ಹೆಚ್ಚಳ ಮಾಡುವುದು ಹುಚ್ಚು ಸರ್ಕಾರದ ಪರಮಾವಧಿ ಎಂದು ಕಿಡಿಕಾರಿದರು.ಹಾಲು ಪೋಷಕಾಂಶಗಳ ಅಗರ. ಇದನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಹುಚ್ಚು ಹುಚ್ಚಾಗಿ ನಿರ್ವಹಣೆ ಮಾಡುತ್ತಿದೆ. ಹಾಲು ಉತ್ಪಾದನೆ ಹೆಚ್ಚಾಗಿರುವುದರಿಂದ 1 ಲೀಟರ್ ಪ್ಯಾಕೆಟ್ ನಲ್ಲಿ 100 ಎಂ ಎಲ್ ಹೆಚ್ಚಿಸಿ, ಹಳೇ ದರಕ್ಕೆ ಮಾರಾಟ ಮಾಡಿದ್ದರೆ ಕ್ಷೀರ ಭಾಗ್ಯ ಎಂದು ಜನ ಪರವಾಗಿ ಇರುತ್ತಿತ್ತು. ಆದರೆ ಹಾಲಿನ ದರ ಹೆಚ್ಚಳ ಮಾಡಿರುವುದು ಜನ ವಿರೋಧಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ರಾಜ್ಯದಲ್ಲಿ ಒಟ್ಟು 15 ಹಾಲು ಒಕ್ಕೂಟಗಳಲ್ಲಿ 7,98,691 ಹಾಲು ಉತ್ಪಾದಕ ರೈತರಿದ್ದಾರೆ. ಇವರಿಗೆ ಆಗಸ್ಟ್, 2023 ರಿಂದ ಮಾರ್ಚ್, 2024 ರವರೆಗೆ ಒಟ್ಟು 8 ತಿಂಗಳ 1083 ಕೋಟಿ ರೂ ಪ್ರೋತ್ಸಾಹ ಧನ ಬಾಕಿ ಇದೆ. ಆದರೆ ಎಪ್ರಿಲ್, 2024ನೇ ತಿಂಗಳ ಪ್ರೋತ್ಸಾಹ ಧನ 109 ಕೋಟಿ ಬಿಡುಗಡೆ ಮಾಡಿದೆ. 2023-24ನೇ ಸಾಲಿನ ಪ್ರೋತ್ಸಾಹ ಧನ ಬಿಡುಗಡೆ ನೆನೆಗುದಿಗೆ ಬಿದ್ದಿದೆ. ಇದರಿಂದ ಹಾಲು ಉತ್ಪಾದಕ ರೈತರು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ತಕ್ಷಣ ಹಾಲಿನ ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕು ಎಂದು  ಒತ್ತಾಯಿಸಿದರು.ಉತ್ತಮ ಮಳೆಯಾಗಬಹುದು ಎಂಬ ಹವಾಮಾನ ಇಲಾಖೆ ಮುನ್ಸೂಚನೆಯಿಂದ ರೈತರು ಸಂತಸದಿಂದ ಜಮೀನು ಉಳಿಮೆ ಮಾಡಿಕೊಂಡು ಬಿತ್ತನೆಗೆ ಹನಿಯಾದಾಗ ಬಿತ್ತನೆ ಬೀಜಗಳ ದರವನ್ನು ಹೆಚ್ಚಿಸಿ, ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.‌ ಯಾಂತ್ರಿಕೃತ ಕೃಷಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರೈತರು ಖರೀದಿಸಿದ ಡಿಸೇಲ್ ಬೆಲೆಯನ್ನು ಹಿಂದಿನ ಬಿಜೆಪಿ ಸರ್ಕಾರ ರೈತಶಕ್ತಿ ಯೋಜನೆಯನ್ನು ಜಾರಿ ಮಾಡಿ ರೈತರ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡುತ್ತಿತ್ತು. ಈ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ನಿಲ್ಲಿಸಿದ್ದಲ್ಲದೆ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮಾಡಿ ಯಾಂತ್ರಿಕೃತ ಕೃಷಿ ಚಟುವಟಿಕೆಗಳನ್ನು ದುಬಾರಿ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ನೀರಾವರಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ತಗಲುವ ವೆಚ್ಚವನ್ನು ರೈತರೇ ಭರಿಸಬೇಕೆಂದು ರಾಜ್ಯದ ಕಾಂಗ್ರೆಸ್ ಸರ್ಕಾರ ಆದೇಶಿಸಿದೆ. ಇದು ರೈತರನ್ನು ಬಹಳಷ್ಟು ಕಂಗೇಡಿಸಿದೆ. ಪಂಪ್ ಸೆಟ್ ಗಳಿಗೆ ಬಿಜೆಪಿ ಸರ್ಕಾರ ಇದ್ದಾಗ ಕೇವಲ 25 ಸಾವಿರದಲ್ಲಿ ವಿದ್ಯುತ್ ಸಂಪರ್ಕ ಪಡೆಯುತ್ತಿದ್ದರು. ಈಗ ಕಾಂಗ್ರೆಸ್ ಸರ್ಕಾರದಲ್ಲಿ ವಿದ್ಯುತ್ ಸಂಪರ್ಕ ಪಡೆಯಲು ರೈತರು 3 ರಿಂದ 4 ಲಕ್ಷ ರೂಪಾಯಿ ಖರ್ಚು ಮಾಡುವಂತಾಗಿದೆ. ಇದು ರೈತ ವಿರೋಧಿ ಧೋರಣೆಯಾಗಿದೆ ಎಂದು ಹೇಳಿದರು.
ಭೂ ಸಿರಿ ಯೋಜನೆ,ರೈತ ವಿದ್ಯಾನಿಧಿ ಯೋಜನೆಯನ್ನು ನಿಲ್ಲಿಸಲಾಗಿದೆ. ದುಪ್ಪಟ್ಟು ಹಣವನ್ನು ಟ್ರಾನ್ಸ್ ಫಾರ್ಮರ್ ಗಳಿಗೆ ನೀಡುವಂತಾಗಿದೆ, ಪೆಟ್ರೋಲ್, ಡೀಸೆಲ್ ಬೆಲೆಯನ್ನು ಏರಿಕೆ, ಮುದ್ರಾಂಕ ದರ ಏರಿಕೆ, ಆಸ್ತಿ ನೋಂದಣಿ ಶೇ.30 ರಷ್ಟು ಹೆಚ್ಚಾಗಿದೆ, ಕ್ಷೀರ ಸಮೃದ್ಧಿ ಬ್ಯಾಂಕ್ ಯಾಕೆ ಪ್ರಾರಂಭಿಸಿಲ್ಲ, 824 ರೈತರ ಆತ್ಮ ಹತ್ಯೆಗೆ ಕಾರಣಗಳೇನು, ಮತ್ತು ರೈತರಿಗೆ ಅತ್ಯಂತ ನಿಕಟ ವಾಗಿರುವ ಇಲಾಖೆ ಕಂದಾಯ ಇಲಾಖೆ, ಆ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಕೇಳಿ ಬರುತ್ತಿದೆ ಎಂದು ತಿಳಿಸಿದರು.ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ ನಾಗಪ್ಪ, ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೇಬಾಳು, ಹರಿಹರ ಶಾಸಕ ಬಿ.ಪಿ.ಹರೀಶ್, ಲೋಕಿಕೆರೆ ನಾಗರಾಜ್, ಡಾ.ನಾಸೀರ್ ಅಹಮದ್, ಪುಷ್ಪಾವಾಲಿ, ಶಿವನಗೌಡ ಸೇರಿದಂತೆ ಇತರರು ಇದ್ದರು.