ಪೌರ ಕಾರ್ಮಿಕರ ಸೇವೆ ಅತ್ಯಮೂಲ್ಯ : ಸಿದ್ದು ಹಂಡಗಿ
ಅಥಣಿ : ಸೆ.೨೭:ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಪೌರ ಕಾರ್ಮಿಕರ ಪಾತ್ರ ಅತ್ಯಮೂಲ್ಯವಾಗಿದೆ. ಪಟ್ಟಣದ ಸ್ವಚ್ಛತೆಯೊಂದಿಗೆ ಜನರ ಆರೋಗ್ಯಕ್ಕಾಗಿ ಶ್ರಮಿಸುತ್ತಿರುವ ಪೌರಕಾರ್ಮಿಕರ ಸೇವೆ ಅನನ್ಯ ಎಂದು ಸಾನ್ವಿ ಮೋಟಾರ್ ಡ್ರೈವಿಂಗ್ ಸ್ಕೂಲ್ ಮಾಲೀಕರಾದ ಸಿದ್ದು ಹಂಡಗಿ ಹೇಳಿದರು.
ಅವರು ಅಥಣಿ ಪಟ್ಟಣದ ಸಾನ್ವಿ ಮೋಟಾರ್ ಡ್ರೈವಿಂಗ್ ಸ್ಕೂಲ್ / ವಾಹನ ಚಾಲಕರ ತರಬೇತಿ ಕೇಂದ್ರದಲ್ಲಿ ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಪೌರ ಕಾರ್ಮಿಕರನ್ನು ಸನ್ಮಾನಿಸಿ ಮಾತನಾಡಿದರು.
ಪ್ರತಿನಿತ್ಯ ಬೆಳಿಗ್ಗೆ ಪಟ್ಟಣದ ಸ್ವಚ್ಛತೆಗೆ ಶ್ರಮಿಸುತ್ತಿರುವ ಪೌರ ಕಾರ್ಮಿಕರು ನಿಜವಾದ ಕಾಯಕ ಜೀವಿಗಳು. ಪೌರಕಾರ್ಮಿಕರ ದಿನಾಚರಣೆಯ ಸಂದರ್ಭದಲ್ಲಿ ಅವರ ಸೇವೆಯನ್ನು ಸ್ಮರಿಸಿ ಅವರನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಾರಿಗೆ ಇಲಾಖೆಯ ನಿರೀಕ್ಷಕ ರವಿಶಂಕರ ನಾಗಠಾಣ ಮಾತನಾಡಿ ಎಲ್ಲಿ ಸ್ವಚ್ಛತೆ ಇರುತ್ತದೋ ಅಲ್ಲಿ ಭಗವಂತ ನೆಲೆಸಿರುತ್ತಾನೆ ಎಂಬುದು ನಂಬಿಕೆಯಾಗಿದೆ. ನಾಗರಿಕರ ಆರೋಗ್ಯ ಮತ್ತು ಸ್ವಚ್ಛತೆಗೆ ಗಮನ ಕೊಟ್ಟು ಕೆಲಸ ನಿರ್ವಹಿಸುತ್ತಿರುವ ಪೌರ ಕಾರ್ಮಿಕರ ಕಾರ್ಯ ಶ್ಲಾಘನೀಯ ಎಂದರು.
ಪಟ್ಟಣದ ಸ್ವಚ್ಛತೆ ಹಾಗೂ ಆರೋಗ್ಯವಂತ ಸಮಾಜವನ್ನು ಕಟ್ಟುವಲ್ಲಿ ಪೌರಕಾರ್ಮಿಕರ ಸೇವೆ ಸ್ಮರಣೀಯವಾಗಿದ್ದು. ಪೌರಕಾರ್ಮಿಕರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಆರೋಗ್ಯವಂತ ಸಮಾಜಕ್ಕಾಗಿ ಶ್ರಮಿಸುವುದು ಅಗತ್ಯ ಎಂದು ಹೇಳಿದರು.
ಈ ವೇಳೆ ಶ್ರೀರಂಗ ಜೋಶಿ, ಸುಕುಮಾರ ಕಾಂಬಳೆ, ದೇವೇಂದ್ರ ಸೌದಾಗರ, ಸತೀಶ ರಬಕವಿ, ಬಸವರಾಜ ಕಾಂಬಳೆ, ಕು.ವಾಣಿ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.