ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿಗ್ರಾಮ ಆಡಳಿತ ಅಧಿಕಾರಿಗಳಿಂದ ಕೈಗೆ ಕಪ್ಪು ಬಟ್ಟೆ ಕಟ್ಟಿ ಪ್ರತಿಭಟನೆ
ಅಥಣಿ : ಸೆ.೨೭:ಕೆಲಸದ ಒತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗ್ರಾಮ ಆಡಳಿತ ಅಧಿಕಾರಿಗಳು ಕರ್ತವ್ಯವನ್ನು ಬಹಿಷ್ಕರಿಸಿ ತಹಶೀಲ್ದಾರ್ ಕಚೇರಿ ಮಿನಿ ವಿಧಾನಸೌಧದ ಎದುರಿಗೆ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.
ಅಥಣಿ ತಾಲೂಕಾ ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ವಿಷ್ಣು ಪೂಜಾರಿ ಮಾತನಾಡಿ ಗ್ರಾಮ ಆಡಳಿತ ಅಧಿಕಾರಿಗಳಿಗೆ ಸರ್ಕಾರ ಮೂಲಭೂತ ಸೌಲಭ್ಯಗಳನ್ನು ಒದಗಿಸುತ್ತಿಲ್ಲ, ಅನೇಕ ಗ್ರಾಮಗಳ ಆಡಳಿತ ಅಧಿಕಾರಿಗಳಿಗೆ ಕಚೇರಿಗಳಲ್ಲಿ ಸ್ವಂತ ಕಟ್ಟಡ ಮತ್ತು ಪೀಠೋಪಕರಣಗಳಿಲ್ಲ. ಕಂದಾಯ ಇಲಾಖೆಯಿಂದ ಬೆಳೆ ಸಮೀಕ್ಷೆ, ಬಗರ್ ಹುಕ್ಕಂ ಭೂಮಿ ಗುರುತು ಮಾಡುವುದು ಸೇರಿದಂತೆ ಸುಮಾರು ೨೧ ಮೊಬೈಲ್
ಆಪ್ ಗಳನ್ನು ಸೃಷ್ಟಿಸಿ ಕೆಲಸ ಮಾಡುವಂತೆ ಗ್ರಾಮ ಆಡಳಿತಾಧಿಕಾರಿಗಳಿಗೆ ಒತ್ತಡ ಹಾಕಲಾಗುತ್ತಿದೆ. ಆದರೆ ಈ ಮೊಬೈಲ್
ಆಪ್ ಗಳ ಅಪರೇಟರ್ ಮಾಡಲು ಅಗತ್ಯವಿರುವ ಅಧುನಿಕ ತಂತ್ರಜ್ಞಾನ ಒಳಗೊಂಡ ಮೊಬೈಲ್ ಆಗಲಿ, ಅದಕ್ಕೆ ಬೇಕಾದ ಇಂಟರನೆಟ್ ಸೌಲಭ್ಯ, ಪ್ರಿಂಟರ್ ಸ್ಕ್ಯಾನರ್ ಸೇರಿದಂತೆ ಯಾವ ಪರಿಕರಗಳನ್ನು ನೀಡದೆ, ಕೆಲಸ ಮಾಡುವಂತೆ ಒತ್ತಡ ಹೇರಲಾಗುತ್ತಿದೆ ಎಂದು ದೂರಿದರು. ಈ ತಂತ್ರಾAಶಗಳ ನಿರ್ವಹಣೆಗೆ ಅವಶ್ಯಕವಾಗಿರುವ ಮೊಬೈಲ್, ಲ್ಯಾಪ್‌ಟಾಪ್, ಅದಕ್ಕೆ ಅವಶ್ಯವಿರುವ ಇಂಟರ್‌ನೆಟ್ ಹಾಗೂ ಸ್ಕ್ಯಾನರ್‌ಗಳನ್ನು ಒದಗಿಸದೇ ಕರ್ತವ್ಯ ನಿರ್ವಹಿಸುವಂತೆ ಒತ್ತಡ ಹೇರುತ್ತಿರುವುದರಿಂದ ಗ್ರಾಮ ಆಡಳಿತ ಅಧಿಕಾರಿಗಳು ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾರೆ. ಕ್ಷೇತ್ರಗಳಲ್ಲಿ ನಿರಂತರವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮ ಆಡಳಿತಾಧಿಕಾರಿಗಳಿಗೆ ಯಾವುದೇ ರೀತಿಯ ಮೂಲಭೂತ ಸೌಲಭ್ಯ ಇಲ್ಲದೆ ಕಾರ್ಯ ನಿರ್ವಹಿಸುತ್ತಿದ್ದಾರೆ, ಕೆಲಸದ ಒತ್ತಡವು ಹೆಚ್ಚಾಗಿದ್ದು ಸರ್ಕಾರದಿಂದ ಯಾವುದೇ ಸೌಲಭ್ಯಗಳು ದೊರೆತಿಲ್ಲ. ಕೆಲಸದ ಒತ್ತಡದಿಂದ ಕಾರ್ಯನಿರ್ವಹಿಸಲು ಆಗದೆ ಅನೇಕ ಅಧಿಕಾರಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ದೂರಿದರು. ಕಂದಾಯ ಇಲಾಖೆಯ ನೌಕರರ ಸಂಘದ ಕಾರ್ಯದರ್ಶಿ ಸಿದ್ದು ಅವಟಿ ಮಾತನಾಡಿ ನಾವು ಬೆಳಿಗ್ಗೆ ೮ ಗಂಟೆಯಿAದ ಸಂಜೆ ೮ ಗಂಟೆಯವರೆಗೆ ಕೆಲಸ ನಿರ್ವಹಿಸುತ್ತಿದ್ದು, ನಮಗೆ ಸರ್ಕಾರ ಯಾವುದೇ ರೀತಿಯ ಸೌಲಭ್ಯ ನೀಡುತ್ತಿಲ್ಲ ಆದ್ದರಿಂದ ಮುಷ್ಕರ ಕೈಗೊಳ್ಳಲಾಗಿದೆ. ನಮ್ಮ ರಾಜ್ಯ ಸಂಘಟನೆಯ ನಿರ್ದೇಶನದಂತೆ ಎರಡು ದಿನಗಳ ಕಾಲ ಇಲ್ಲಿ ಪ್ರತಿಭಟನೆ ನಡೆಸಿದ್ದೇವೆ. ಶುಕ್ರವಾರ ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಾಗುವುದು. ನಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದೆ ಹೋದಲ್ಲಿ ಈ ಹೋರಾಟವನ್ನು ಬೆಂಗಳೂರಿನಲ್ಲಿ ನಡೆಸಲಾಗುವುದು ಎಂದು ಹೇಳಿದರು.
ಉಪ ತಹಸಿಲ್ದಾರ ಮಹಾದೇವ ಬಿರಾದಾರ ಮಾತನಾಡಿ ಕಂದಾಯ ಇಲಾಖೆಯ ನೌಕರರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು. ಮುಷ್ಕರದಲ್ಲಿ ಎಂ ಎಂ ಮಿರ್ಜಿ, ಎಂ ಎಂ ಮಲ್ಲುಖಾನ, ಕೆ ಜಿ ಕನಮಡಿ, ಎಸ್ ಎ ಸಿಂದಗಿ, ಆರ್ ಪಿ ಕ್ಷತ್ರಿ, ಬಿಎಸ್ ನೇಮಗೌಡ, ಬಿ ಎ ಹುನ್ನೂರ, ಎಂ ಕೆ ಕೊಟ್ರಶೆಟ್ಟಿ, ಸುನಿತಾ ನವಲಗುಂದ, ಪೂಜಾ ಹಿರೇಮಠ, ಅಶ್ವಿನಿ ಸಾಗರ ಸೇರಿದಂತೆ ತಾಲೂಕಾ ವ್ಯಾಪ್ತಿಯ ಗ್ರಾಮ ಆಡಳಿತ ಅಧಿಕಾರಿಗಳು ಕಂದಾಯ ಇಲಾಖೆ ನೌಕರರು ಭಾಗವಹಿಸಿದ್ದರು.
” ಕೈಗೆ ಕಪ್ಪು ಬಟ್ಟೆ ಕಟ್ಟಿ ಪ್ರತಿಭಟನೆ “
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಆಡಳಿತ ಅಧಿಕಾರಿಗಳು ಕೈಗೆ ಕಪ್ಪು ಬಟ್ಟೆಯನ್ನು ಕಟ್ಟಿಕೊಂಡು ರಾಜ್ಯ ಸರ್ಕಾರ ವಿರುದ್ಧ ಘೋಷಣೆಗಳನ್ನ ಕೂಗಿ ಅಸಮಾಧಾನ ವ್ಯಕ್ತಪಡಿಸಿ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರ ಮುಖಾಂತರ ಕಂದಾಯ ಸಚಿವರಿಗೆ ಮನವಿ ಸಲ್ಲಿಸಿದರು.