`ಸಾಹಿತ್ಯ ಐಕಾನ್’ ಪ್ರಶಸ್ತಿಗೆ ಐವರು ಆಯ್ಕೆ
ಕಲಬುರಗಿ, ಜು. 1 : ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಬೆಂಗಳೂರು ನಗರ ಘಟಕದಿಂದ ಕೊಡಮಾಡುವ `ಕನ್ನಡ ಸಾಹಿತ್ಯ ಐಕಾನ್ ಪ್ರಶಸ್ತಿ- 2024′ ಗೆ ಮಕ್ಕಳ ಸಾಹಿತ್ಯ ಕ್ಷೇತ್ರದ ಐದು ಜನ ಸಾಹಿತಿಗಳ ಪುಸ್ತಕಗಳನ್ನು ಆಯ್ಕೆ ಮಾಡಲಾಗಿದೆ.
ಧಾರವಾಡದ ಹಿರಿಯ ಸಾಹಿತಿ ವಿದ್ಯಾಧರ ದೇಸಾಯಿ ಮುತಾಲಿಕ (ಹಿಮ್ಮುಖ ಹರಿದ ನದಿ), ಶಿವಮೊಗ್ಗದ ಮತ್ತೂರು ಸುಬ್ಬಣ್ಣ (ಅಂಶು ಮತ್ತು ರೋಬೋ ಕಥೆಗಳು), ಕಲಬುರಗಿಯ ಮಹಿಪಾಲರೆಡ್ಡಿ ಮುನ್ನೂರ್ (ಬಿಸಿಲನಾಡಿನ ಬೆಳದಿಂಗಳು), ಬೆಂಗಳೂರಿನ ಶ್ರೀಮತಿ ಆರ್.ಹಂಸಾ ನಾಜರೆ (ಮಂಗನ ಮಾತು ಕಾಕರಾಜನ ಪ್ರತಿಭಟನೆ) ಮತ್ತು ಗದಗ ಡಾ.ತಯಬಅಲಿ ಅ. ಹೊಂಬಳ (ಚಿನ್ನ ಎಂದೂ ನಗುತಿರು) ಅವರಿಗೆ ಪ್ರಶಸ್ತಿ ಲಭಿಸಿದೆ ಎಂದು ಮಕ್ಕಳ ಸಾಹಿತ್ಯ ಪರಿಷತ್ತಿನ ಬೆಂಗಳೂರು ಘಟಕದ ಅಧ್ಯಕ್ಷ ಡಾ. ಬೋಪಾಳಂ ಸುನೀಲ್ ಮತ್ತು ಪ್ರಧಾನ ಕಾರ್ಯದರ್ಶಿ ಡಾ. ಮಲಕಪ್ಪ ಅಲಿಯಾಸ್ ಮಹೇಶ್ ತಿಳಿಸಿದ್ದಾರೆ.
ಜುಲೈ 21 ರಂದು ಬೆಳಿಗ್ಗೆ 10.30 ಕ್ಕೆ ಬೆಂಗಳೂರಿನ ವಿಧಾನಸೌಧ ಎದುರಿಗಿರುವ ಸೆಂಚೂರಿ ಕ್ಲಬ್ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಆಯ್ಕೆ ಸಮಿತಿಯಲ್ಲಿದ್ದ ಡಾ. ಮೈಥಿಲಿ ಪಿ. ರಾವ್, ಎಸ್.ಆರ್.ಸುಳ್ಕೊಡೆ, ರಮೇಶ್ ಬೊಂಗಾಳೆ, ಡಾ. ಮಲಕಪ್ಪ ಅಲಿಯಾಸ್ ಮಹೇಶ್ ಮತ್ತು ಶಿವಾನಂದ್ ಭಾಗಯ್ ಅವರುಗಳು ಆಯ್ಕೆ ಪ್ರಕ್ರಿಯೆಯಲ್ಲಿದ್ದರು ಎಂದು ಅವರು ತಿಳಿಸಿದ್ದಾರೆ.