ಮನೆಯೊಳಗೆ ನುಗ್ಗಿದ ಚರಂಡಿ ನೀರು: ಇಡೀ ರಾತ್ರಿ ಮಳೆಯಲ್ಲೇ ನೆನೆದ ವೃದ್ಧ ದಂಪತಿ
ವಾಡಿ,ಜು.1-ಚರಂಡಿ ನೀರು ಮನೆಯೊಳಗೆ ನುಗ್ಗಿದ್ದರಿಂದ ವೃದ್ಧ ದಂಪತಿ ಇಡೀ ರಾತ್ರಿ ಮಳೆ ನೀರನ್ನು ಹೊರಗೆ ಹಾಕುತ್ತ ಮಳೆಯಲ್ಲೇ ನೆನೆದ ಘಟನೆ ಇಲ್ಲಿನ ಮಲ್ಲಿಕಾರ್ಜುನ ಬಡಾವಣೆಯಲ್ಲಿ ನಡೆದಿದೆ.
ಭಾನುವಾರ ಸುರಿದ ಮಳೆಯಿಂದಾಗಿ ಚರಂಡಿ ನೀರು ಶೇಖ್ ಮೌಲಾ ದಂಪತಿಗಳು ವಾಸಿಸುವ ಮನೆಯೊಳಗೆ ನುಗ್ಗಿದೆ. ಇದರಿಂದಾಗಿ ದಂಪತಿ ಇಡೀ ರಾತ್ರಿ ಮಳೆ ನೀರಲ್ಲಿ ನೆನೆಯುತ್ತ ಮನೆಯೊಳಗೆ ನುಗ್ಗಿದ ನೀರುನ್ನು ಹೊರ ಹಾಕಿದ್ದಾರೆ. ಅವೈಜ್ಞಾನಿಕ ರೀತಿಯಲ್ಲಿ ಚರಂಡಿ ನಿರ್ಮಿಸಿದ್ದೇ ಮಳೆ ನೀರು ಮನೆಯೊಳಗೆ ನುಗ್ಗಲು ಕಾರಣವೆನ್ನುವುದು ಇಲ್ಲಿನ ನಿವಾಸಿಗಳ ಆರೋಪವಾಗಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ಇದೇ ಸಮಸ್ಯೆ ತಲೆದೋರುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಚರಂಡಿ ನೀರು ಮನೆಯೊಳಗೆ ನುಗ್ಗದಂತೆ ಕ್ರಮ ಕೈಗೊಳ್ಳಬೇಕು ಎಂದು ಇಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ.