ವಾಡಿಯಲ್ಲಿ ಬಸ್ ತಂಗುದಾಣವೇ ಇಲ್ಲ !
ವಾಡಿ,ಜು.1-ಇವತ್ತು ಗ್ರಾಮೀಣ ಪ್ರದೇಶಗಳಲ್ಲಿಯೂ ಬಸ್ ತಂಗುದಾಣಗಳಿವೆ. ಆದರೆ ಪಟ್ಟಣ ಪ್ರದೇಶವಾದ ವಾಡಿಯಲ್ಲಿ ಮಾತ್ರ ಬಸ್ ತಂಗುದಾಣವೇ ಇಲ್ಲ.
ವಾಡಿ ಪಟ್ಟಣದಿಂದ ವಿವಿಧ ಗ್ರಾಮಗಳಿಗೆ ನೂರಾರು ಜನ ಓಡಾಡುತ್ತಾರೆ. ವಿವಿಧ ಗ್ರಾಮಗಳಿಂದ ಶಾಲಾ-ಕಾಲೇಜಿಗೆ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಬಂದು ಹೋಗುತ್ತಾರೆ. ಆದರೆ ಬಸ್ ತಂಗುದಾಣವಿಲ್ಲದೆ ಅವರು ಮಳೆ ಇರಲಿ, ಚಳಿ ಇರಲಿ, ಬಿಸಿಲಿರಲಿ ಬಯಲಿನಲ್ಲಿ ಬಸ್ಸಿಗಾಗಿ ಕಾಯುತ್ತ ನಿಲ್ಲುವಂತಾಗಿದೆ. ವಾಡಿಯಲ್ಲಿ ರೈಲ್ವೆ ಜಂಕ್ಷನ್ ಸಹ ಇದ್ದು ನೂರಾರು ಜನ ಪ್ರಯಾಣಿಕರು ಇಲ್ಲಿಗೆ ಬಂದು ಹೋಗುತ್ತಾರೆ. ಆದರೆ ಇಷ್ಟೆಲ್ಲಾ ಜನರ ಓಡಾಟವಿರುವ ಪಟ್ಟಣದಲ್ಲಿ ಮಾತ್ರ ಬಸ್ ತಂಗುದಾಣ ಇಲ್ಲದೇ ಇರುವುದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಈಗಲಾದರೂ ಸಂಬಂಧಪಟ್ಟವರು ಅಗತ್ಯವಿರುವ ಕಡೆ ಬಸ್ ತಂಗುದಾಣ ನಿರ್ಮಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕಿದೆ.