ಬದುಕಿನ ಮಾತು ದೇವ ಪೂಜೆಯಾಗಲಿ
ಕಲಬುರಗಿ:ಜು.1:ನಾವಾಡುವ ಮಾತೆಲ್ಲವೂ ದೇವಾರ್ಚನೆಯಾದರೆ ಈಗಿನ ಜಗತ್ತಿನ ದೇಶ,ದೇಶಗಳ, ಹಾಗೂ ಪ್ರಜೆಗಳ ಆಂತರಿಕ ,ಹಾಗೂ ಬಾಹ್ಯ ಸಮಸ್ಯೆಗಳು ಪರಿಹಾರವಾಗುತ್ತದೆ. ಹೀಗೆಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥರು ಜನತೆಗೆ ಸಂದೇಶ ನೀಡಿದರು.
ಮಳಖೇಡ ಕ್ಷೇತ್ರದಲ್ಲಿ ಶ್ರೀಮತ್ಟೀಕಾಕೃತ್ಪಾದರ ಮೂಲ ಬೃಂದಾವನ ಸನ್ನಿಧಾನದಲ್ಲಿ ನಡೆಯುತ್ತಿರುವ ಶ್ರೀಮದ್ಭಾಗವತ ಸಪ್ತಾಹ ಕಾರ್ಯಕ್ರಮದಲ್ಲಿ ಅನುಗ್ರಹ ಸಂದೇಶವನ್ನು ನೀಡುತ್ತಾ ” ಮನೋನಿಗ್ರಹ ಏಕಾಗ್ರತೆಗಳಿಂದ ಕೂಡಿದ ಭಗವಂತನಲ್ಲಿ ಮಾಡುವ ಪ್ರೇಮ ಅರ್ಥಾತ್ ಭಕ್ತಿ ಭಗವಂತನ ಸಾಕ್ಷಾತ್ಕಾರಕ್ಕೆ ಕಾರಣವಾಗಿ ಈ ಸಂಸಾರದುಃಖದಿಂದ ಮುಕ್ತನಾಗಲು ಕಾರಣವಾಗುತ್ತದೆ. ಅಷ್ಟೇ ಅಲ್ಲ ,ಈ ಸಂಸಾರ ಪ್ರಪಂಚದಲ್ಲಿದ್ದಾಗಲೂ ನಮ್ಮ ಸಮಯ,ಶಕ್ತಿ,ಬುದ್ಧಿ,ಜ್ಞಾಪಕಶಕ್ತಿ ವಿದ್ಯಾಧ್ಯಯನ ,ವ್ಯವಹಾರ ಸಾಫಲ್ಯ,ಈ ವಿಷಯಗಳಲ್ಲಿ ಸಾರ್ಥಕ್ಯ ,ಪೂರ್ಣತೆ,ಯಶಸ್ಸುಗಳನ್ನು ತಂದುಕೊಡುವುದಲ್ಲದೆ ಮನೋರೋಗ,ದೇಹರೋಗಗಳಿಂದಲೂ ಕಾಪಾಡುತ್ತದೆ. ಆದರೆ ಈ ರೀತಿಯ ಏಕಾಗ್ರತೆ,ಮನೋನಿಗ್ರಹ ಹೇಗೆ ಸಾಧ್ಯ? ಇದಕ್ಕೆ ಪರಿಹಾರವನ್ನೂ ಭಾಗವತ ತಿಳಿಸಿದೆ. ಲೋಕ ಸಂಬಂಧಿಯಾಗಿ ಇರುವ ವಿಷಯಗಳ ಮಾತು ಆಡದೆ ವ್ಯವಹಾರ ಸಾಧ್ಯವಿಲ್ಲ. ಆದರೆ ಆ ಸಂದರ್ಭ ಸನ್ನಿವೇಶಗಳಲ್ಲೂ ಆ ಎಲ್ಲಾ ಶಬ್ದಗಳಲ್ಲೂ ಭಗವಂತನ ಸಂಬಂಧ, ಅಂದರೆ ಆ ಶಬ್ದ,ಪದಗಳಿಂದ ಭಗವಂತನ ಮಾಹಾತ್ಮೆಯ ಚಿಂತನ ಲೋಕ ವ್ಯವಹಾರ ಜೊತೆಯಲ್ಲೇ ಆದರೆ ಆಗ ಎಲ್ಲಾ ಮಾತುಗಳೂ ಆ ದೇವರ ಸ್ತುತಿಯೇ ಆಗುತ್ತದೆ. ಉದಾಃ “ನೀರು ಕುಡಿಯಲು ಕೊಡಿ” ಎಂದು ಒಬ್ಬ ವ್ಯಕ್ತಿ ಕೇಳಿದಾಗ ಆ ವ್ಯಕ್ತಿಗೆ ನೀರು ಕೊಟ್ಟು ಬಿಟ್ಟರೆ ಆಗ ಕೇವಲ ಅಷ್ಟು ಕ್ರಿಯೆ ಕೇವಲ ಲೋಕ ವ್ಯವಹಾರವಾಗುತ್ತದೆ. ಆದರೆ ಅದರ ಜೊತೆಯಲ್ಲಿ ಈ ನೀರು ಭಗವಂತನಿಂದ ಸ್ಪಷ್ಟವಾಗಿದೆ.ನೀರು ಕೇಳಿದ ಈ ವ್ಯಕ್ತಿಯಲ್ಲಿ ಭಗವಂತನಿದ್ದಾನೆ. ಅವನೇ ಇವನಿಗೆ ಬಾಯಾರಿಕೆ ಉಂಟು ಮಾಡಿದ್ದಾನೆ. ನನ್ನಲ್ಲಿ ಬರುವಂತೆ ಪ್ರೇರಣೆ ಮಾಡಿದ್ದಾನೆ. ನನಗೆ ನೀರು ಕೊಡಲು ಸ್ಥಳ ,ನೀರು ಕೊಟ್ಟವನೂ ಆ ದೇವರೆ. ನನಗೆ ನೀರು ಕೊಡಲು ಪ್ರೇರಣೆ ಮಾಡಿದವನೂ ಆ ದೇವರೆ. ನಾನು ಕೊಡುವ ಈ ನೀರಿನಿಂದ ಈ ವ್ಯಕ್ತಿಗೆ ತೃಪ್ತಿ,ಆನಂದ ನೀಡುವವನೂ ಆ ದೇವರೆ. ” ನೀರು” ಎಂಬ ಇತ್ಯಾದಿ ಪದಗಳು ಭಗವಂತನನ್ನೇ ತಿಳಿಸುತ್ತವೆ. ನೀ ಅಂದರೆ ಚೆನ್ನಾಗಿ “ಈರ” ಅಂದರೆ ಪ್ರೇರಿಸುವವ. ಅಂದರೆ ನೀರಿನಲ್ಲಿದ್ದು ಅದನ್ನು ಸೇವಿಸುವವರನ್ನು ಶಕ್ತಿ ತುಂಬಿ ಚಟುವಟಿಕೆಗಳಲ್ಲಿ ಪ್ರೇರಿಸುತ್ತಾನೆ ಆದ್ದರಿಂದ ಭಗವಂತನಿಗೆ ” ನೀರು’ ಎಂದು ಹೆಸರು. ಇದು ಕೇವಲ ಒಂದು ಉದಾಹರಣೆ ಆಗಿದೆ. ಇದರಂತೆ ನಾವಾಡುವ ಎಲ್ಲಾ ಲೋಕ ವ್ಯವಹಾರಿಕ ಅನಂತ ಶಬ್ದ,ಪದಗಳೂ ಆ ದೇವರನ್ನೇ ತಿಳಿಸುತ್ತವೆ. ಹೀಗೆ ಲೋಕ ವ್ಯವಹಾರದ ಜೊತೆಯಲ್ಲಿ ಈ ಚಿಂತನೆ ನಡೆದಾಗ ಭಗವಂತನಲ್ಲಿ ಏಕಾಗ್ರತೆಯಿಂದ ಭಕ್ತಿ ಸಾಧ್ಯ. ಜೊತೆಗೆ ಮೇಲೆ ತಿಳಿಸಿದ ಲೋಕಕ್ಕೆ ಸಂಬಂಧಿಸಿದ ಲಾಭವೂ ಇದೆ.ಇದನ್ನು ಭಾಗವತ ” ಶಬ್ದಸ್ಯ ಹಿ ಬ್ರಹ್ಮಣ ಏಷ ಪಂಥಾಃ” ಎಂಬಲ್ಲಿ ತಿಳಿಸಿದೆ .ಈ ಕ್ರಮದ ಅನುಷ್ಠಾನದಿಂದ ಶ್ರೀಮದ್ಭಾಗವತದಲ್ಲಿ ಬರುವ ಪ್ರಹ್ಲಾದ, ನಾರದ, ಅಂಬರೀಶ, ಧ್ರುವ, ಮೊದಲಾದ ಮಹಾನುಭಾವರೂ, ನಮ್ಮ ನಾಡಿನ ಪುರಂದರದಾಸರು ಮೊದಲಾದ ಅನೇಕ ದಾಸರೂ ಭಗವಂತನ ಸಾಕ್ಷಾತ್ಕಾರ ಮಾಡಿಕೊಂಡಿದ್ದಾರೆ. ನಮ್ಮ ಮಾತೂ ಭಗವತ್ಸಂಬಂಧಿ ಆಗಲಿ.ಮಾತು ವ್ಯರ್ಥವಾಗದಿರಲಿ. ಮಿತವಾಗಿರಲಿ. ಈ ಭಾಗವತದ ಸಂದೇಶವನ್ನು ಶ್ರೀ ಸತ್ಯಾತ್ಮತೀರ್ಥರು ನೆರೆದ ಸಾವಿರಾರು ಭಕ್ತರನ್ನು ಉದ್ದೇಶಿಸಿ ಕರೆ ಕೊಟ್ಟರು.