ಕೃಷಿಕರ ಮನಸ್ಸು ಅರ್ಥ ಮಾಡಿದ್ದಕ್ಕೇ ಗೆದ್ದೆ: ಗವಿಯಪ್ಪ
ಸಂಜೆವಾಣಿ ವಾರ್ತೆ
ಹೊಸಪೇಟೆ (ವಿಜಯನಗರ)ಜುಲೈ1: ‘ವಿಧಾನಸಭೆ ಚುನಾವಣೆಯಲ್ಲಿ ಎರಡು ಬಾರಿ ಸೋತ ನಂತರ ನಾನು ನನ್ನ ತೋಟದಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿಕೊಂಡೆ ಹಾಗೂ ಕೃಷಿಕರ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದೆ. ಅದುವೇ ನನ್ನ ಗೆಲುವಿಗೆ ದಾರಿಮಾಡಿಕೊಟ್ಟಿತು’ ಎಂದು ಶಾಸಕ ಎಚ್‌.ಆರ್.ಗವಿಯಪ್ಪ ಹೇಳಿದರು.
ಇಲ್ಲಿನ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಭಾನುವಾರ ನಡೆದ ‘ಹಸಿರಿನೊಂದಿಗೆ ಮಾತುಕತೆ’ಯ ವಾರ್ಷಿಕೋತ್ಸವ, ಪುಸ್ತಕ ಬಿಡುಗಡೆ ಮತ್ತು ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ನಾನು ಯಾಕೆ ಸೋತೆ ಎಂಬ ಆತ್ಮಾವಲೋಕನ ನನ್ನ ತೋಟದಲ್ಲಿ ನನಗಾಯಿತು. ಕೃಷಿ ತೋಟದ ಸಾಂಗತ್ಯ ನನಗೆ ಒಂದಷ್ಟು ಮಾರ್ಗಗಳನ್ನು ತೋರಿಸಿತು. ಅದೇ ಕಾರಣದಿಂದ ರೈತರ ಕಷ್ಟಗಳ ಅರಿವೂ ಆಗಿದೆ. ಮಾಗಣೆ ರಸ್ತೆಗಳ ಸಮಸ್ಯೆ  ನೀಗಿಸಿದರೆ ಕಬ್ಬು, ಇತರ ಕೃಷಿ ಉತ್ಪನ್ನಗಳ ಸಾಗಣೆ ವೆಚ್ಚ ತಗ್ಗುತ್ತದೆ, ಹೀಗಾಗಿ ಈ ರಸ್ತೆಗಳ ದುರಸ್ತಿ, ಸುಧಾರಣೆಗೆ ಹೆಚ್ಚಿನ ಗಮನ ಹರಿಸಿದ್ದೇನೆ’ ಎಂದರು.
‘ಹೊಸಪೇಟೆಗೆ ಸಕ್ಕರೆ ಕಾರ್ಖಾನೆ ಅಗತ್ಯವಿದ್ದು, ಅದರ ನಿರ್ಮಾಣಕ್ಕೆ ಸಾಧ್ಯವಿರುವ ಎಲ್ಲ  ಪ್ರಯತ್ನ ಮಾಡುತ್ತಿದ್ದೇನೆ’ ಎಂದು ಶಾಸಕರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದ್ಗಲ್‌ ಮಾತನಾಡಿ, ಕೃಷಿ ಪ್ರವಾಸೋದ್ಯಮಕ್ಕೆ ಈ ಭಾಗದಲ್ಲಿ ಸಾಕಷ್ಟು ಅವಕಾಶ ಇದ್ದು, ಇದಕ್ಕಾಗಿ ಕೆಲವು ಕಾನೂನುಗಳನ್ನು ಸಡಿಲಗೊಳಿಸಲು ಪ್ರಯತ್ನಿಸಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.
ಹಗರಿ ಕೃಷಿ ಕಾಲೇಜಿನ ಸಹ ಪ್ರಾಧ್ಯಾಪಕಿ ಶಿಲ್ಪಾ ಎಚ್‌. ಅವರು ಬಾಳೆಯ ಮೌಲ್ಯವರ್ಧನೆ ಬಗ್ಗೆ ಮಾಹಿತಿ ನೀಡಿದರೆ, ವಿಜಯನಗರ ಕಾಲುವೆಗಳ ಆಧುನೀಕರಣ ಯೋಜನೆಯ ತಂಡ ನಾಯಕ ಆರ್.ದೊರೆಸ್ವಾಮಿ ಅವರು ನೀರಿನ ನಿರ್ವಹಣೆ, ಕೃಷಿ ಕಾಲುವೆ, ಅಚ್ಚುಕಟ್ಟು ಪ್ರದೇಶಗಳ ಕುರಿತು ಮಾತನಾಡಿದರು. ಪ್ರಗತಿಪರ ಕೃಷಿಕ ವಿಶ್ವೇಶ್ವರ ಸಜ್ಜನ್‌ ಅವರು ಬೇಲದ ಮೌಲ್ಯವರ್ಧನೆ ಬಗ್ಗೆ ಮಾಹಿತಿ ನೀಡಿದರು. ಹಸಿರುನೊಂದಿಗೆ ಮಾತುಕತೆ ಮೊದಲ ಬಾರಿಗೆ ಆರಂಭವಾದ ತೋಟದ ಮಾಲೀಕ ಹಾಗೂ ಪ್ರಗತಿಪರ ಕೃಷಿಕ ಬಸಯ್ಯ ಸ್ವಾಮಿ ವೇದಿಕೆಯಲ್ಲಿದ್ದರು.
ಗಂಗಾವತಿ ಕೃಷಿ ಕಾಲೇಜಿನ ಕೀಟಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಬದರಿಪ್ರಸಾದ್ ಪಿ.ಆರ್. ಕೃತಿ ಪರಿಚಯ ಮಾಡಿದರು.
ಮಣ್ಣಿನ ಮಡಿಕೆಗೆ ಸಿರಿಧಾನ್ಯ ಸುರಿಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಬಿಡುಗಡೆ ಮಾಡಲಾದ ಪುಸ್ತಕದ ಮೊದಲ ಪ್ರತಿಯನ್ನು ಪುಸ್ತಕದ ಮುಖಪುಟದಲ್ಲಿರುವ ಮಹಿಳೆ ಫಕೀರಮ್ಮ ಅವರಿಗೆ ನೀಡಲಾಯಿತು. ಹಸಿರಿನೊಂದಿಗೆ ಮಾತುಕತೆ ಬಳಗದ ಸಂಚಾಲಕ ಮಲ್ಲಿಕಾರ್ಜುನ ಹೊಸಪಾಳ್ಯ ಪ್ರಾಸ್ತಾವಿಕ ಮಾತನಾಡಿದರು. ವಾರ್ಷಿಕೋತ್ಸವ ನೆನಪಿನಲ್ಲಿ ಜೆ.ಡಿ. ಕಚೇರಿ ಆವರಣದಲ್ಲಿ ಹೊಂಗೆ ಗಿಡವನ್ನು ಶಾಸಕರು ನೆಟ್ಟರು.
ಪರಮೇಶ್ವರ ನಾಯ್ಕ ಸ್ವಾಗತಿಸಿದರು. ವಸಂತ ಮಾಲವಿ ನಿರೂಪಿಸಿದರು. ಶಿವಕುಮಾರ್ ವಂದಿಸಿದರು.
‘ಕೃಷಿ ಅನುಭವಗಳ ಕಥನ’
‘ಹಸಿರು ಮಾತುಕತೆ’ ಪುಸ್ತಕ ಒಂದು ವರ್ಷ ವಿಜಯನಗರ ಜಿಲ್ಲೆ ಮತ್ತು ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ನಡೆದ ‘ಹಸಿರಿನೊಂದಿಗೆ ಮಾತುಕತೆ’ ಕಾರ್ಯಕ್ರಮದ ಸಾರಾಂಶ ರೂಪದಲ್ಲಿದ್ದು, ಹಲವು ಪ್ರಗತಿಪರ ಕೃಷಿಕರ ಯಶೋಗಾಥೆ ಇದರಲ್ಲಿದೆ.
ಹುಲಿಕೆರೆಯ ವಿಶ್ವೇಶ್ವರ ಸಜ್ಜನ, ನಂದೀಪುರದ ಮಹೇಶ್ವರ ಸ್ವಾಮೀಜಿ, ಕಮಲಾಪುರದ ಪಂಪಯ್ಯ ಮಳೇಮಠ, ವೆಂಕಟಾಪುರದ ಅನ್ನಪೂರ್ಣ, ದೇವದಾಸಿ ಕೂಪದಿಂದ ಹೊರಬಂದು ಕೃಷಿ ಮಾಡುತ್ತಿರುವ ಈಶ್ವರಮ್ಮ, ಸಿರಿಧಾನ್ಯ ಬೆಳೆಯುವ ಪಾಪಿನಾಯಕನಹಳ್ಳಿಯ ಫಕೀರಮ್ಮ, ದೇಸೀ ಬೀಜ ಸಂರಕ್ಷಕ ಕಲ್ಲಪ್ಪ, ಅಕ್ಕಡಿ ಬೇಸಾಯದಲ್ಲಿ ಪರಿಣಿತರಾದ ಕೊಟ್ಟೂರಿನ ಕೋಟ್ಯಪ್ಪ, ಅನಂತಶಯನಗುಡಿಯ ಪ್ರಸನ್ನ, ಅಹೊಸೂರಿನ ಸಣ್ಣಕ್ಕಿ ಕುಟುಂಬ, ಒಣಭೂಮಿ ತೋಟಗಾರಿಕೆ ಮಾಡುತ್ತಿರುವ ವಸಂತ ಮಾಲವಿ ಮುಂತಾದ 12 ರೈತರ ಕೃಷಿ ಬದುಕನ್ನು ಪುಸ್ತಕದಲ್ಲಿ ನಿರೂಪಿಸಲಾಗಿದೆ. ಜೊತೆಗೆ ವಿಜಯನಗರ ಅರಸರ ಕಾಲದಲ್ಲಿ ಇಲ್ಲಿನ ಕೃಷಿ ವಿವರಗಳು, ಈ ಜಿಲ್ಲೆಯ ವಿಶಿಷ್ಟ ಬಾಳೆ ತಳಿಗಳಾದ ಸಕ್ಕರೆ ಬಾಳೆ ಮತ್ತು ಸುಗಂಧಿ ಬಾಳೆ ಬಗ್ಗೆಯೂ ಮಾಹಿತಿ ನೀಡಿರುವುದು ಪುಸ್ತಕದ ವೈಶಿಷ್ಟ್ಯ.