ರೈತರು ಬೆಳೆ ವಿಮೆ ನೋಂದಣಿ ಮಾಡಿಸಲು ಕರೆ
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜು.1 :- ಮಳೆಯಾಶ್ರಿತ ಪ್ರದೇಶವಾದ ಕೂಡ್ಲಿಗಿ ತಾಲೂಕಿನಲ್ಲಿ  ರೈತರು ಕೃಷಿ ಇಲಾಖೆ ಸೂಚಿಸಿರುವ ಬೆಳೆಗಳಿಗೆ ಕೊನೆಯ ದಿನಾಂಕದೊಳಗೆ ತಪ್ಪದೇ ಬೆಳೆ ವಿಮೆಯನ್ನು ನೋಂದಣಿ ಮಾಡಿಸಿಕೊಳ್ಳಬೇಕೆಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತಿಳಿಸಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿದ ಇತ್ತೀಚೆಗೆ ಆಯೋಜಿಸಿದ್ದ ಜನತಾ ದರ್ಶನ ಕಾರ್ಯಕ್ರಮದ ಸಂದರ್ಭ ಕೃಷಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಮಣ್ಣು ಸಂರಕ್ಷಣೆ ಹಾಗೂ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಪ್ರಚಾರ ವಾಹನಕ್ಕೆ ಚಾಲನೆ ನೀಡಿ ಮಾತನಾಡುತ್ತಾ  ಅತಿವೃಷ್ಟಿ, ಅನಾವೃಷ್ಟಿಯಿಂದ ರೈತರು ಬೆಳೆ ನಷ್ಟವಾಗುವ ಸಂಭವ ಇರುವುದರಿಂದ ಪ್ರತಿಯೊಬ್ಬರೂ ಕೃಷಿ ಇಲಾಖೆ ನಿಗದಿಪಡಿಸಿದ ಬೆಳೆಗಳಿಗೆ ತಪ್ಪದೆ ಕೊನೆಯ ದಿನಾಂಕದೊಳಗೆ ಬೆಳೆವಿಮೆಯ ಕಂತನ್ನು ಪಾವತಿಸುವ ಮೂಲಕ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್ ಮಾತನಾಡಿ, ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ನೋಂದಣಿಗೆ ಸರಕಾರ ಮುಂದಾಗಿದ್ದು, ಕೃಷಿ ಇಲಾಖೆಯಿಂದ ಸೂಚಿಸಿರುವ ಬೆಳೆಗಳಿಗೆ ಹತ್ತಿರದ ಬ್ಯಾಂಕ್ ಇಲ್ಲವೆ ಗ್ರಾಮ ಒನ್ ಕೇಂದ್ರಗಳಲ್ಲಿ ಬೆಳೆ ವಿಮೆ ಕಂತು ಪಾವತಿಸುವ ಮೂಲಕ ನೋಂದಣಿ ಮಾಡಿಕೊಳ್ಳಬೇಕೆಂದು ರೈತರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ, ಜಿಪಂ ಸಿಇಒ ಸದಾಶಿವ ಬಿ.ಪ್ರಭು, ಕೂಡ್ಲಿಗಿ ಸಹಾಯಕ ಕೃಷಿ ನಿರ್ದೇಶಕ ಎಂ.ಟಿ.ಸುನಿಲ್ ಕುಮಾರ್, ಕೂಡ್ಲಿಗಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ವೈ. ರವಿಕುಮಾರ.ಕೃಷಿಕ ಸಮಾಜದ ಮಾಜಿ ಅಧ್ಯಕ್ಷ ಹಾಗೂ ಸದಸ್ಯ ಬಣವಿಕಲ್ಲು ಯರಿಸ್ವಾಮಿ ಸೇರಿ ಕೃಷಿ ಇಲಾಖೆ ಸಿಬ್ಬಂದಿ ಇದ್ದರು.