ಒಂದು ವರ್ಷದಿಂದ ವಶಪಡಿಸಿಕೊಂಡ ಕಳವು ಮಾಲು ಮಾಲಿಕರಿಗೆ ಹಸ್ತಾಂತರ.
ಸಂಜೆವಾಣಿ ವಾರ್ತೆ
ಹೊಸಪೇಟೆ (ವಿಜಯನಗರ): ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ ಪೊಲೀಸರು ವಶಪಡಿಸಿಕೊಂಡ ಕಳವು ಮಾಲುಗಳನ್ನು ಅವುಗಳ ಮಾಲೀಕರಿಗೆ ಹಸ್ತಾಂತರಿಸುವ ಕಾರ್ಯಕ್ರಮ ಇಲ್ಲಿನ ಎಸ್‌ಪಿ ಕಚೇರಿಯಲ್ಲಿ ಸಂಜೆ ನಡೆಯಿತು. 1.78 ಕೋಟಿ ಮೌಲ್ಯದ ವಸ್ತುಗಳನ್ನು ಹಸ್ತಾಂತರಿಸಲಾಯಿತು.
ಹತ್ತಾರು ಮಂದಿ ತಮ್ಮ ಕಳವಾದ ವಸ್ತುಗಳನ್ನು ಮರಳಿ ಪಡೆದ ಖುಷಿ ಅನುಭವಿಸಿದರು. ಚಿನ್ನದ ಸರಗಳು, ಬೆಳ್ಳಿಯ ಸಾಮಗ್ರಿಗಳು, ನಗದು, ಪಂಪ್‌ಸೆಟ್‌ಗಳು ಇದರಲ್ಲಿ ಸೇರಿದ್ದವು. ಜಿಲ್ಲಾ ಪೊಲೀಸ್‌ ವರಿಷ್ಠ ಶ್ರೀಹರಿಬಾಬು ಬಿ.ಎಲ್‌. ಅವರು ಇತರ ಹಿರಿಯ ಅಧಿಕಾರಿಗಳ ಜತೆಗೆ ವಶಪಡಿಸಿಕೊಂಡ ಸಾಮಗ್ರಿಗಳನ್ನು ಮೂಲ ಮಾಲೀಕರಿಗೆ ಹಸ್ತಾಂತರಿಸಿದರು. ಜಿಲ್ಲೆಯ ಮೂರೂ ಉಪವಿಭಾಗಗಳ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಕಳವು ಪ್ರಕರಣಗಳು ಇದರಲ್ಲಿ ಸೇರಿದ್ದವು.
‘ಕಳೆದ ವರ್ಷದ ಜೂನ್‌ 1ರಿಂದ ಈ ರ್ಷದ ಜೂನ್‌ 1ರವರೆಗಿನ ಕಳವು ಪ್ರಕರಣಗಳಲ್ಲಿ 254 ಸ್ವತ್ತಿನ ಪ್ರಕರಣಗಳು ವರದಿಯಾಗಿವೆ. ಈ ಅವಧಿಯಲ್ಲಿ ಲಾಭಕ್ಕಾಗಿ ಕೊಲೆ ನಡೆದಿಲ್ಲ. 4 ಡಕಾಯಿತಿ, 3 ಸರಗಳ್ಳತನ, 7 ಹಗಲು ಕನ್ನ ಹಾಕಿದ ಪ್ರಸಂಗ, 58 ರಾತ್ರಿ ಕನ್ನ ಹಾಕಿದ ಪ್ರಸಂಗ, 182 ಸಾಮಾನ್ಯ ಕಳತನ ಪ್ರಕರಣಗಳು ವರದಿಯಾಗಿವೆ. 87 ಪ್ರಕರಣಗಳನ್ನು ಪತ್ತೆ ಹೆಚ್ಚಲಾಗಿದೆ. ಒಟ್ಟು 162 ಜನರನ್ನು ಬಂಧಿಸಿ ಕಾನೂನು ಪ್ರಕಾರ ಕ್ರಮ ಜರುಗಿಸಲಾಗಿದೆ’ ಎಂದು ಎಸ್‌ಪಿ ಶ್ರೀಹರಿಬಾಬು ಬಿ.ಎಲ್‌. ಮಾಧ್ಯಮದವರಿಗೆ ತಿಳಿಸಿದರು.
‘ಒಟ್ಟು 5.54 ಕೋಟಿ ಮೌಲ್ಯದ ವಸ್ತುಗಳು ಕಳವಾಗಿವೆ. 2.15 ಕೋಟಿ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪೈಕಿ 1.78 ಕೋಟಿ ಮೌಲ್ಯದ ವಸ್ತುಗಳನ್ನು ವಾರಿಸುದಾರರಿಗೆ ಹಿಂದಿರುಗಿಸಲಾಗಿದೆ. 37.44 ಲಕ್ಷ ಮೌಲ್ಯದ ಮಾಲನ್ನು ನ್ಯಾಯಾಲಯದ ಆದೇಶ ಪಡೆದುಕೊಂಡು ಹಿಂದಿರುಗಿಸಲಾಗುವುದು’ ಎಂದರು.
‘ವಶಪಡಿಸಿಕೊಂಡ ಮಾಲುಗಳ ಪೈಕಿ 85 ಲಕ್ಷ ಮೌಲ್ಯದ 96 ದ್ವಿಚಕ್ರ ವಾಹನ, 42.31 ಲಕ್ಷ ಮೌಲ್ಯದ 118 ತೊಲೆ ಬಂಗಾರ, 95,300 ಮೌಲ್ಯದ 30 ತೊಲೆ ಬೆಳ್ಳಿ, 2.05 ಲಕ್ಷ ಮೌಲ್ಯದ 25 ಮೊಬೈಲ್‌, 11,71,580 ನಗದು, 3.50 ಲಕ್ಷ ಮೌಲ್ಯದ ಎಲೆಕ್ಟ್ರಾನಿಕ್ಸ್ ವಸ್ತುಗಳು, 37.45 ಲಕ್ಷ ಮೌಲ್ಯದ ಗಂಧದ ಕಟ್ಟಿಗೆ, ಟೊಯೊಟಾ ಕಾರು, 12.63 ಲಕ್ಷ ಮೌಲ್ಯದ ಸೋನಿ ಕ್ಯಾಮೆರಾ, 1 ಕಾರು, 1 ಸರ್ಕಾರಿ ಸಾರಿಗೆ ಬಸ್‌, 3 ಆಕಳು, 5 ಕುರಿ, 3 ಪಂಪ್‌ಸೆಟ್‌ಗಳು ಸೇರಿವೆ’ ಎಂದು ಅವರು ಮಾಹಿತಿ ನೀಡಿದರು.
ಬೆರಳಚ್ಚು ಪಡೆಯುವ ಸಾಧನ: ಜಿಲ್ಲೆಯಲ್ಲಿ ರಾತ್ರಿ ಹೊತ್ತಲ್ಲಿ ಸಂಶಯಾಸ್ಪದವಾಗಿ ಓಡಾಡುವವರ ಬೆರಳಚ್ಚು ಪಡೆದು ಸಂಗ್ರಹಿಸಿಟ್ಟುಕೊಳ್ಳುವ ಸಾಧನವನ್ನು ಪೊಲೀಸರಿಗೆ ಕೊಟ್ಟಿದ್ದು, ಇದುವರೆಗೆ 2,900 ಮಂದಿಯ ಬೆರಳಚ್ಚು ಸಂಗ್ರಹಿಸಲಾಗಿದೆ. ಕಳ್ಳರನ್ನು ವಶಕ್ಕೆ ಪಡೆಯುವಲ್ಲಿ ಈ ಸಾಧನ ಬಹಳಷ್ಟು ಮಟ್ಟಿಗೆ ನೆರವಿಗೆ ಬರುತ್ತಿದೆ. ಹಂಪಿ ಸಹಿತ ಪ್ರಮುಖ ಪ್ರವಾಸಿ ತಾಣಗಳಲ್ಲಿ ಸಿ.ಸಿ.ಟಿ.ವಿ.ಕ್ಯಾಮೆರಾಗಳನ್ನು ಅಳವಡಿಸುವ ಕೆಲಸ ಪೊಲೀಸ್ ಇಲಾಖೆಯಿಂದಲೂ ನಡೆಯುತ್ತಿದೆ ಎಂದು ಶ್ರೀಹರಿಬಾಬು ಹೇಳಿದರು.
ಎಎಸ್‌ಪಿ ಸಲೀಂ ಪಾಷಾ, ಡಿವೈಎಸ್‌ಪಿಗಳಾದ ಮಂಜುನಾಥ್‌, ಮಹಾಂತೇಶ್ ಸಜ್ಜನ್‌, ಮಲ್ಲೇಶಪ್ಪ ಮಲ್ಲಾಪುರ ಇದ್ದರು.