ಮೈಮುಲ್ ಎಂ.ಡಿ ವಿಜಯಕುಮಾರ್‍ಗೆ ಆತ್ಮೀಯ ಬೀಳ್ಕೊಡುಗೆ
ಸಂಜೆವಾಣಿ ನ್ಯೂಸ್
ಮೈಸೂರು: ಜು.01:- ಮೈಸೂರು ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾದ ಬಿ.ಎನ್.ವಿಜಯಕುಮಾರ್ ಅವರಿಗೆ ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಅಧಿಕಾರಿಗಳು, ಸಿಬ್ಬಂದಿ ವರ್ಗ ಆತ್ಮೀಯವಾಗಿ ಬೀಳ್ಕೊಟ್ಟರು.
ಮೈಮುಲ್ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಬೀಳ್ಕೊಡುಗೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿ.ಎನ್.ವಿಜಯಕುಮಾರ್ ಅವರು, 1987ರಲ್ಲಿ ಶಿವಮೊಗ್ಗದಿಂದ ವೃತ್ತಿ ತಾಂತ್ರಿಕ ಅಧಿಕಾರಿ ವೃತ್ತಿ ಆರಂಭಿಸಿದೆ. ತದನಂತರ ದಾವಣಗೆರೆ, ಬಳ್ಳಾರಿ ನಂತರ ಬೆಂಗಳೂರಿನ ಕೆಎಂಎಫ್ ನಂದಿನಿಯಲ್ಲಿ 7 ವರ್ಷ ಕೆಲಸ ಮಾಡುವ ಅವಕಾಶ ದೊರೆಯಿತು. ಈ ವೇಳೆ ಮೈಸೂರು ಪಾಕ್ ಸೇರಿ ಅನೇಕ ಉತ್ಪನ್ನ ಹೊರತರಲಾಯಿತು. ಬಳಿಕ 2004ರಲ್ಲಿ ಎನ್ ಎಂಪಿ ಗುಣ ನಿಯಂತ್ರಣ ದಲ್ಲಿ ಕೆಲಸ ನಿರ್ವಹಿಸಿ, 2008 ರಲ್ಲಿ ಕೆಎಂಎಫ್ ಮಾರುಕಟ್ಟೆ ವಿಭಾಗದ ಮೂಲಕ ಗುಡ್ ಲೈಫ್ ಉತ್ಪನ್ನವನ್ನು ಹೊರರಾಜ್ಯಕ್ಕೂ ವಿಸ್ತರಿಸುವ ಯೋಜನೆ ಜಾರಿಗೊಳಿಸಲಾಯಿತು. ನಂತರ 2010 ರಲ್ಲಿ ಚನ್ನರಾಯಪಟ್ಟಣ ದಲ್ಲಿ ಹೊಸ ಪ್ಲಾಂಟ್ ನಿರ್ಮಿಸಿ, ಗುಲ್ಬರ್ಗ ಡೇರಿಗೆ ಪ್ರಧಾನ ವ್ಯವಸ್ಥಾಪಕನಾದೆ ಆಗ 55000 ಇದ್ದ ಹಾಲಿನ ಉತ್ಪನ್ನದ ಶೇಖರಣೆಯನ್ನು 73000 ತನಕ ಹೆಚ್ಚುವರಿ ಮಾಡಿದೆ. ಆ ಮೂಲಕ 2 ಕೋಟಿ ರೂ. ಲಾಭಗಳಿಸುವಲ್ಲಿ ಯಶಸ್ವಿಯಾದೆವೆಂದು ಸ್ಮರಿಸಿಕೊಂಡರು.
ಮಂಗಳೂರು ಮಾರುಕಟ್ಟೆಯಲ್ಲಿ, ಡೆಂಪೆÇೀಡಿ ಯಲ್ಲಿ ನಾಲ್ಕು ವರ್ಷ ಹೊಸ ಯಂತ್ರೋಪಕರಣಗಳ ಅಳವಡಿಸಿದ್ದೇನೆ. ತದನಂತರ ರಾಮನಗರದಲ್ಲಿ 10 ಲಕ್ಷದ ಪ್ಲಾಂಟ್ ಪ್ರಾರಂಭಿಸಿದೆವು. 2021 ಮೇ 18ರಲ್ಲಿ ಮೈಸೂರು ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕನಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ಶೇ.7 ರಿಂದ ಶೇ 8ರಷ್ಟು ಶೇಖರಣೆ ಹೆಚ್ಚಳಕ್ಕೆ ಕ್ರಮವಹಿಸಿದ್ದೇನೆ.
ನಂದಿನಿ ಪಾಕ ಸ್ಪರ್ಧೆ, ಶಾಲಾ ಅರಿವು, ವಿಶ್ವ ಹಾಲು ದಿನ ಹೀಗೆ ಹಲವು ಕಾರ್ಯಕ್ರಮದ ಮೂಲಕ ನಂದಿನಿ ಉತ್ಪನ್ನಗಳ ಅರಿವು ಮೂಡಿಸುವ ಪ್ರಯತ್ನ ಸಹ ಯಶಸ್ವಿಯಾಗಿ ಮಾಡಿದ್ದೇನೆ. 40000 ಇದ್ದ ಹಾಲಿನ ಮಾರಾಟ 3 ಲಕ್ಷ 20000ವರೆಗೆ ಮಾಡಿರುವುದು ಹಾಗೂ ಹೊಸ ಘಟಕಗಳ ಸ್ಥಾಪನೆ ಮಾಡಿರುವ ಕರ್ತವ್ಯ ನನಗೆ ತೃಪ್ತಿ ತಂದಿದೆ ಎಂದು ಸ್ಮರಿಸಿಕೊಂಡರು.
ಇನ್ನೂ ಅಭಿನಂದಿಸಿದ ಮೈಸೂರು ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಪಿ.ಎಂ.ಪ್ರಸನ್ನ ಮಾತನಾಡಿ, ಹಿರಿಯ ಅಧಿಕಾರಿಗಳ ಬದ್ಧತೆಕಾರ್ಯ ವೈಖರಿಯಿಂದ ಮೈಸೂರು ಡೇರಿ ಇಷ್ಟೆಲ್ಲಾ ಸಾಧನೆ ಮಾಡಲು ಸಾಧ್ಯವಾಗಿದೆ. ಇವರ ಮುಂದಿನ ನಿವೃತ್ತಿ ಜೀವನವೂ ಸುಖಕರವಾಗಿರಲಿ. ಮೈಮುಲ್ ಅಭಿವೃದ್ಧಿಗೆ ಇವರ ಸಲಹೆ ನಿರಂತರವಾಗಿ ಇರಲಿ. ಮುಂಬರುವ ವ್ಯವಸ್ಥಾಪಕ ನಿರ್ದೇಶಕರು ಇವರಂತೆಯೇ ಸಾಧನೆ ಮಾಡಲಿ ಎಂದು ಆಶಿಸಿದರು.
ನಿರ್ದೇಶಕರಾದ ಎ.ಟಿ.ಸೋಮಶೇಖರ್, ಕೆ.ಜಿ.ಮಹೇಶ್, ಕೆ.ಈರೇಗೌಡ, ಕೆ.ಎಸ್.ಕುಮಾರ್, ಸಿ.ಓಂಪ್ರಕಾಶ್, ಕೆ.ಊಮಾಶಂಕರ್, ದ್ರಾಕ್ಷಾಯಣಿ ಬಸವರಾಜಪ್ಪ, ಲೀಲಾ ಬಿ.ಕೆ.ನಾಗರಾಜ್, ವಿ.ಶಿವಗಾಮಿ ಷಣ್ಮುಗಂ, ಬಿ.ಎ ಪ್ರಕಾಶ್ ಪಿರಿಯಾಪಟ್ಟಣ, ಬಿ.ಎನ್.ಸದಾನಂದ, ಆರ್. ಚೆಲುವರಾಜು, ಬಿ.ಗುರುಸ್ವಾಮಿ, ಬಿ ನೀಲಾಂಬಿಕ ಮಹೇಶ್ ಕುರಹಟ್ಟಿ ಸೇರಿ ಆಡಳಿತ ವರ್ಗ ಸಿಬ್ಬಂದಿ ಸೇರಿ ಇನ್ನಿತರರು ಉಪಸ್ಥಿತರಿದ್ದರು.