ಡಿಸಿಎಂ ಹೆಚ್ಚಿನ ಹುದ್ದೆ ಸರಿಯಲ್ಲ
ಸಂಜೆವಾಣಿ ನ್ಯೂಸ್
ಮೈಸೂರು: ಜು.01:- ಜಾತಿಗೊಂದು ಡಿಸಿಎಂ ನೇಮಕ ಮಾಡಿ ಎಂಬ ಹೇಳಿಕೆ ಯಾರು ಸಹ ನೀಡಬಾರದೆಂದು ಮೈಸೂರು ನಗರ ಕಾಂಗ್ರೆಸ್ ವಕ್ತಾರ ಎಸ್.ರಾಜೇಶ್ ಹೇಳಿದರು.
ಮೈಸೂರು ನಗರದ ಜಿಲ್ಲಾ ಪತ್ರಕರ್ತರ ಸಂಘದ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಜಾತಿಗೊಂದು ಡಿಸಿಎಂ ನೇಮಿಸಿದರೆ ಸಿಎಂ ಪರಮಾಧಿಕಾರಕ್ಕೆ ಧಕ್ಕೆ ಬರಲಿದ್ದು, ಪಕ್ಷದ ವರ್ಚಸ್ಸಿಗೂ ಧಕ್ಕೆ ತರಲಿದೆ. ಒಂದಕ್ಕಿಂತ ಹೆಚ್ಚಿನ ಡಿಸಿಎಂ ಆಡಳಿತ ವೈಪಲ್ಯದ ಸೂಚನೆಯಾಗಿದ್ದು, ಬಿಜೆಪಿಯ ಅವಧಿಯಲ್ಲಿ ಮೂರು ಡಿಸಿಎಂ ಹುದ್ದೆ ಸೃಷ್ಠಿಸಿ ವಿಫಲ ಆಡಳಿತ ನೋಡಿದ್ದೇವೆ. ಎಸ್ಸಿ, ಎಸ್ಟಿ, ಒಕ್ಕಲಿಗ ಹಾಗೂ ಲಿಂಗಾಯಿತ ಹೇಗೆ ಎಲ್ಲಾ ಸಮುದಾಯಕ್ಕೂ ಪ್ರಬಲ ಖಾತೆಯನ್ನೇ ನೀಡಲಾಗಿದೆ ಎಂದರು.
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಶಿವಕುಮಾರ್ ಜೋಡಿಯಾಗಿ ಉತ್ತಮ ಆಡಳಿತ ನೀಡುತ್ತಿದ್ದು, ಇದಕ್ಕೆ ಧಕ್ಕೆ ಬರುವ ರೀತಿ ಸಚಿವ, ಶಾಸಕರು ಹೇಳಿಕೆ ನೀಡುವುದು ಖಂಡನೀಯ. ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ನೀಡುವ ಕುರಿತು ಎಐಸಿಸಿ ಹಾಗೂ ಪಕ್ಷದ ಶಾಸಕರು ಒಮ್ಮತದಲ್ಲಿ ನಿರ್ಧರಿಸುವರು ಎಂದು ಹೇಳಿದರು.
ಸಿಎಂ, ಡಿಸಿಎಂ ಗೊಂದಲದ ಬಗ್ಗೆ ಎಐಸಿಸಿ ಹಂತದಲ್ಲೇ ಸ್ಪಷ್ಟನೆ ನೀಡಬೇಕೆಂದು ಮನವಿ ಮಾಡಿದರು. ವಕ್ತಾರ ಶ್ರೀನಿವಾಸ್, ಕಾಂಗ್ರೆಸ್ ಮುಖಂಡರಾದ ಮೈಸೂರು ಬಸವಣ್ಣ, ಎಸ್.ಎ.ರವಿ ಇನ್ನಿತರರು ಉಪಸ್ಥಿತರಿದ್ದರು.