ಗುಣಾತ್ಮಕ ಸಂಶೋಧನೆಗೆ ಸಂಖ್ಯಾಶಾಸ್ತ್ರದ ಪಾತ್ರ ಪ್ರಮುಖ: ಖೊದ್ನಾಪೂರ
ಸಂಜೆವಾಣಿ ವಾರ್ತೆ,
ವಿಜಯಪುರ,ಜು.1: ಇಡೀ ಜಗತ್ತಿಗೆ ಅಂಕಿ-ಸಂಖ್ಯೆಗಳ ಮಹತ್ವ ಮತ್ತು ಸಂಶೋಧನೆಯಲ್ಲಿ ಸಂಖ್ಯಾಶಾಸ್ತ್ರದ ಬಳಕೆಯ ಕುರಿತು ಖ್ಯಾತ ಸಂಖ್ಯಾಶಾಸ್ತ್ರಜ್ಞ ಹಾಗೂ ಗಣಿತಶಾಸ್ತ್ರಜ್ಞ ಪ್ರಶಾಂತಚಂದ್ರ ಮಹಲನೋಬಿಸ್ ಅವರ ಕೊಡುಗೆ ಅನನ್ಯವಾದುದು. ದೇಶದ ಆರ್ಥಿಕ ಪ್ರಗತಿಗೆ ಪರಿಣಾಮಕಾರಿ ಪಂಚವಾರ್ಷಿಕ ಯೋಜನೆಗಳ ಪೂರಕವಾಗಿ ಭಾರತವು ಆರ್ಥಿಕವಾಗಿ ಸಬಲವಾಗುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ವಿಜ್ಞಾನ-ತಂತ್ರಜ್ಞಾನ ಮತ್ತು ಆರ್ಥಿಕಾಭಿವೃದ್ಧಿ ಕ್ಷೇತ್ರದಲ್ಲಿ ಅಮೂಲಾಗ್ರ ಸುಧಾರಣೆಗಳಾಗುತ್ತಿವೆ. ಸುಸ್ಥಿರ ಅಭಿವೃದ್ಧಿ ಸಾಧಿಸುವಲ್ಲಿ ಬೆಲೆ ಸೂಚ್ಯಂಕ, ಕಾಲಶ್ರೇಣಿ, ಸಹ ಸಂಬಂಧ ಗುಣಾಂಕ ಹಾಗೂ ವಿವಿಧ ಸಂಖ್ಯಾಶಾಸ್ತ್ರ ಪದ್ಧತಿಗಳು ಸಹಕಾರಿಯಾಗಿವೆ ಎಂದು ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಎಂ.ಎಸ್. ಖೊದ್ನಾಪೂರ ಅಭಿಪ್ರಾಯಪಟ್ಟರು.
ನಗರದ ನವಭಾಗದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ವಿಭಾಗವು ರಾಷ್ಟ್ರೀಯ ಸಂಖ್ಯಾಶಾಸ್ತ್ರ ದಿನದ ಪ್ರಯುಕ್ತ “ಸಂಶೋಧನೆಯಲ್ಲಿ ಸಂಖ್ಯಾಶಾಸ್ತ್ರದ ವಿಧಾನಗಳ ಬಳಕೆ” ವಿಷಯ ಕುರಿತು ಆಯೋಜಿಸಿದ ವಿಶೇಷ ಉಪನ್ಯಾಸದಲ್ಲಿ ಮಾತನಾಡುತ್ತಿದ್ದರು.
ಮಹಲನೋಬಿಸ್ ಅವರು ಎರಡನೇ ಪಂಚ ವಾರ್ಷಿಕ ಯೋಜನೆಯಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ ಅಮೂಲಾಗ್ರ ಸುಧಾರಿಸಲು ಮತ್ತು ರಾಷ್ಟ್ರದ ಆರ್ಥಿಕತೆಯನ್ನು ಬಲಪಡಿಸುವಲ್ಲಿ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ. 2024 ರ ಸಂಖ್ಯಾಶಾಸ್ತ್ರ ದಿನದ ಘೋಷವಾಕ್ಯ “ನಿರ್ಣಯ ತೆಗೆದುಕೊಳ್ಳುವಲ್ಲಿ ಸಂಖ್ಯಾಶಾಸ್ತ್ರದ ಉಪಯುಕ್ತತೆ” ಬಗ್ಗೆ ತಿಳಿಸುವುದಾಗಿದೆ. ಇಡೀ ಜಗತ್ತಿನಲ್ಲಿ ಭಾರತದ ಅರ್ಥವ್ಯವಸ್ಥೆಯು ಒಂದು ಸುರಕ್ಷಿತ, ಸುಭದ್ರ ಮತ್ತು ಸುಸ್ಥಿರವಾದ ಆರ್ಥಿಕತೆಯ ರಾಷ್ಟ್ರವನ್ನಾಗಿಸುವ ಕನಸು ಕಂಡಿದ್ದರು. ಆದ್ದರಿಂದ ಪ್ರತಿಯೊಬ್ಬರೂ ಸಂಖ್ಯಾಶಾಸ್ತ್ರ ವಿಷಯವನ್ನು ಅಧ್ಯಯನ ಮಾಡಿ ಸಂಶೋಧನೆ, ಸಮೀಕ್ಷೆ, ಮಾಹಿತಿ ಸಂಗ್ರಹಣೆ, ದತ್ತಾಂಶ ವಿಶ್ಲೇಷಣೆ ಮತ್ತು ಸಂಶೋಧನೆಯನ್ನು ಪರಿಮಾಣಾತ್ಮಕ ಮತ್ತು ಗುಣಾತ್ಮಕವನ್ನಾಗಿ ಕೈಗೊಂಡು ಸಮುದಾಯಿಕ ಉಪಯುಕ್ತ ಫಲಿತಾಂಶ ಹೊರಬರುವಂತೆ ಮಾಡುವಲ್ಲಿ ಸಂಖ್ಯಾಶಾಸ್ತ್ರದ ಅತ್ಯಂತ ಪರಿಣಾಮಕಾರಿ ಬಳಕೆಯಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಆಕಾಶ ಕೇಂಗಾರ ಅವರು ಸಂಖ್ಯಾಶಾಸ್ತ್ರ ವಿಷಯದ ಪ್ರಾಮುಖ್ಯತೆ ಮತ್ತು ವಾಣಿಜ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ಹೇಗೆ ಪ್ರಯೋಜನಕಾರಿಯಾಗಿದೆ ಎಂಬುದರ ಬಗ್ಗೆ ತಿಳಿಸಿದರು. ಸಮಾರಂಭದಲ್ಲಿ ಡಾ. ವಿವೇಕಾನಂದ ಉಗಟೆ, ಡಾ. ಐ.ಎಸ್. ಶಿವಶರಣರ, ಉಪನ್ಯಾಸಕಿಯರಾದ ಆಶಾ ಹಜೇರಿ, ಆಶ್ವಿನಿ ಹೊನಕಟ್ಟಿ, ಶೋಭಾ ಜೀರಾಳ ಇತರರು ಉಪಸ್ಥಿತರಿದ್ದರು.