ರೈತರ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನ: ತಹಶೀಲ್ದಾರ್ ಭರವಸೆ
ಸಂಜೆವಾಣಿ ವಾರ್ತೆ
ಹನೂರು ಜು 1:- ತಾಲೂಕಿನಾದ್ಯಂತ ರೈತರು ಎದುರಿಸುತ್ತಿರುವ ಹಲವಾರು ಸಮಸ್ಯೆ ತೊಂದರೆಗಳನ್ನು ಈಗಾಗಲೇ ನಮ್ಮ ಗಮನಕ್ಕೆ ತಂದಿದ್ದೀರಿ ಈ ಬಗ್ಗೆ ಆಯಾಯಾ ಇಲಾಖೆಗೆ ಜವಾಬ್ದಾರಿ ವಹಿಸಿ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲು ಪ್ರಯತ್ನ ಮಾಡಲಾಗುವುದು ಎಂದು ತಹಸೀಲ್ದಾರ್ ಗುರುಪ್ರಸಾದ್ ಅವರು ಭರವಸೆ ನೀಡಿದರು.
ಹನೂರು ಪಟ್ಟಣದ ಡಾII ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ರೈತರ ಕುಂದು ಕೊರತೆ ನಿವಾರಣೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ತಾಲೂಕಿನಲ್ಲಿರುವ ವಿವಿಧ ಇಲಾಖೆಗಳಲ್ಲಿ ಸಮಸ್ಯೆಗಳಿದ್ದಲ್ಲಿ ರೈತರು ಮುಕ್ತವಾಗಿ ಹೇಳಬಹುದು ಜೊತೆಗೆ ಅಧಿಕಾರಿಗಳು ಸಹ ಇಂದು ತಮ್ಮ ಪ್ರಶ್ನೆಗೆ ಉತ್ತರ ನೀಡಲಿದ್ದು ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ರೈತರು ಮಾತನಾಡಿ ಹನೂರು ತಾಲೂಕಿನ ಉದ್ದಗಲಕ್ಕು ರಸ್ತೆ ತುಂಬಾ ಅವ್ಯವಸ್ಥೆಯಾಗಿದೆ ಗುಂಡಿ ಮಯವಾಗಿದೆ ಜೊತೆಗೆ ನಾಲ್ ರೋಡು ರಾಮಾಪುರ ರಸ್ತೆ ಉದ್ಘಾಟನೆಯಾದರು ಕಾಮಗಾರಿ ಪ್ರಾರಂಭವಾಗಿಲ್ಲ ಈಗಾಗಿ ತುಂಬಾ ತೊಂದರೆಯಾಗಿದೆ ಎಂದು ದೂರಿದರು.
ಮುಖ್ಯವಾಗಿ ರೈತರ ಜಮೀನುಗಳಿಗೆ ಕಾಡು ಪ್ರಾಣಿಗಳ ಹಾವಳಿ ಮಿತಿ ಮೀರಿದೆ ಇದರಿಂದ ಹಾನಿಯಾದ ಬೆಳೆಗಳಿಗೆ ಪರಿಹಾರ ನೀಡಬೇಕು ಅಲ್ಲದೇ ಕಾಡು ಪ್ರಾಣಿಗಳ ಹಾವಳಿಗೆ ಕಡಿವಾಣ ಹಾಕಬೇಕು ಜೊತೆಗೆ ರೈತರಿಗೆ ಬರ ಪರಿಹಾರದ ಹಣ ಬರುತ್ತಿಲ್ಲ ಹಾಗಾಗಿ ಆದಷ್ಟು ಬೇಗ ಈ ಬಗ್ಗೆ ಕ್ರಮವಹಿಸಬೇಕು ಎಂದು ಮನವಿ ಮಾಡಿದರು.
ಕೃಷಿ ಇಲಾಖೆ. ತೋಟಗಾರಿಕೆ ಇಲಾಖೆಗಳಲ್ಲಿ ರೈತರಿಗೆ ಬೇಕಾಗುವಂತಹ ಸೌಲಭ್ಯಗಳು ಯಾವುದರ ಬಗ್ಗೆ ಮಾಹಿತಿಯು ಇಲ್ಲದೆ ರೈತರಿಗೆ ಸರ್ಕಾರದಿಂದ ಸಿಗಬೇಕಾದಂತಹ ಸೌಲಭ್ಯಗಳು ಸಿಗುತ್ತಿಲ್ಲ. ಇಲಾಖೆಗಳಲ್ಲಿ ನಡೆಯುವಂತಹ ಕಾರ್ಯಕ್ರಮಗಳ ಬಗ್ಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ ಎಂದು ದೂರಿದರು.
ಮಲೆ ಮಹದೇಶ್ವರ ಬೆಟ್ಟ, ಪೆÇನ್ನಾಚಿ, ಒಡೆಯರಪಾಳ್ಯ, ಶಾಗ್ಯ ಸೇರಿದಂತೆ ಕಾಡಂಚಿನ ಗ್ರಾಮಗಳಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಇದರಿಂದಾಗಿ ರೈತರು ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳಲಾಗದಷ್ಟು ತೊಂದರೆ ಎದುರಿಸಬೇಕಾಗಿದೆ. ಬೆಳೆದ ಬೆಳೆಗಳು ಕೈಗೆ ಬಂದ ತುತ್ತು ಬಾಯಿಗೆ ಸಿಗದಂತಾಗಿದೆ ರೈತರ ಪರಿಸ್ಥಿತಿ ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡು ಕಾಡುಪ್ರಾಣಿಗಳ ಹಾವಳಿಯನ್ನು ತಪ್ಪಿಸಬೇಕು ಎಂದು ಮನವಿ ಮಾಡಿದರು.
ಹನೂರು ತಾಲೂಕಿನಲ್ಲಿ 46146 ಫಲಾನುಭವಿಗಳು ಈಗಾಗಲೇ ನೋಂದಣಿ ಮಾಡಿದ್ದು ಅವರಿಗೆ ಗೃಹಲಕ್ಷ್ಮಿ ಹಣ ತಲುಪುತ್ತಿದೆ ಉಳಿದಂತೆ 300 ಜನ ಫಲಾನುಭವಿಗಳಿಗೆ ನಾನಾ ಕಾರಣಗಳಿಂದ ತಲುಪಿಲ್ಲ ಅವರಿಗೆ ಈಗಾಗಲೇ ಕರೆ ಮಾಡಿ ತಿಳಿಸಿದ್ದು ಕೆ ವೈ ಸಿ ಮಾಡಿಸಲು ತಿಳಿಸಲಾಗಿದೆ. ಜೊತೆಗೆ ಮುಖ್ಯವಾಗಿ ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ ಎಂದು ಸಿಡಿಪಿಒ ನಂಜಮಣಿ ಹೇಳಿದರು.