ಅನಧಿ ಕೃತವಾಗಿ ತಲೆ ಎತ್ತಿದ ಹೋಟೆಲ್ ಅಂಗಡಿ
ಸಂಜೆವಾಣಿ ವಾರ್ತೆ
ಹನೂರು ಜು 1 :- ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತಿರುವ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಯಾವುದೇ ಅನುಮತಿ ಇಲ್ಲದೆ ಅನಧಿಕೃತವಾಗಿ ಹೋಟೆಲ್ ಅಂಗಡಿಯನ್ನು ತೆರೆದಿದ್ದು ಇದರಿಂದ ಕಾಡುಪ್ರಾಣಿಗಳು ಸ್ವಚ್ಛ ಪರಿಸರಕ್ಕೆ ಮಾರಕವಾಗಿ ಪರಿಣಮಿಸಲಿದೆ ಇದನ್ನು ತೆರವು ಮಾಡಬೇಕೆಂದು ಎಂದು ಆರ್.ಟಿ.ಐ ಕಾರ್ಯಕರ್ತ ಎನ್.ಅಪ್ಪಾಜಿ ಆಗ್ರಹಿಸಿದ್ದಾರೆ.
ಹನೂರು ತಾಲೂಕು ಮತ್ತು ಕೊಳ್ಳೇಗಾಲದಿಂದ ಲೊಕ್ಕನಹಳ್ಳಿ ಒಡೆಯರಪಾಳ್ಯ ಮಾರ್ಗವಾಗಿ ತಮಿಳುನಾಡು ಸತ್ಯಮಂಗಲಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಯಾವುದೇ ಅನುಮತಿ ಇಲ್ಲದೆ ಅನಧಿಕೃತವಾಗಿ ಹೋಟೆಲ್ ಅಂಗಡಿಯನ್ನು ತೆರೆದಿದ್ದು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕಿದೆ.
ಕೊಳ್ಳೇಗಾಲ ಸತ್ತಿ ರಾಜ್ಯ ಹೆದ್ದಾರಿ 17ರಲ್ಲಿ. ಲೊಕ್ಕನಹಳ್ಳಿ ಮಾರ್ಗವಾಗಿ ತೆರಳಿದರೆ ಮೈಸೂರಪ್ಪನ ದೊಡ್ಡಿ ಬಸ್ ನಿಲ್ದಾಣದಿಂದ ಸ್ವಲ್ಪ ದೂರ ಮುಂದೆ ಹೋದರೆ ಮಸ್ಕಿತ್ತಿ ಹಳ್ಳದ ಹತ್ತಿರ ಅಂಗಡಿಯನ್ನು ತೆರೆಯಲಾಗಿದೆ. ಇದರ ಎದುರು ಹುಲಿ ಸಂರಕ್ಷಿತ ಅರಣ್ಯ ಪ್ರದೇಶವಾಗಿದೆ. ಇಲ್ಲಿ ಆನೆ ಕಂದಕ ಮತ್ತು ಸೋಲಾರ್ ವಿದ್ಯುತ್ ತಂತಿಯನ್ನು ಅಳವಡಿಸಲಾಗಿದೆ.
ಪಕ್ಕದಲ್ಲಿ ಅರಣ್ಯ ಪ್ರದೇಶ ಇರುವುದರಿಂದ ಈಗಾಗಲೇ ದಾರಿಯಲ್ಲಿ ಹೋಗುವ ವಾಹನ ಸವಾರರು ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸುವುದು ಕೆಲವರು ಅರಣ್ಯ ಪ್ರದೇಶದ ಒಳಗಡೆ ಪ್ರವೇಶಿಸಿ ಮಧ್ಯಪಾನ ಮಾಡುವುದು ಇನ್ನಿತರ ಪರಿಸರ ಮಾರಕ ಚಟುವಟಿಕೆಗಳನ್ನು ನಡೆಸುವುದರಿಂದ ಇಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳು ಬಾಟಲಿಗಳು ಬಿಟ್ಟಿರುವುದು ಸಹಜವಾಗಿಯೇ ಕಂಡುಬರುತ್ತದೆ.
ರಸ್ತೆಯ ಒಂದು ಕಡೆ ಜಮೀನುಗಳು ಇದ್ದು ಇಲ್ಲಿ ಬೆಳೆಗಳನ್ನು ಸಹ ಬೆಳೆಯಲಾಗುತ್ತದೆ. ಇನ್ನೊಂದು ಕಡೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ಇರುವುದರಿಂದ. ಈ ಭಾಗದಲ್ಲಿ ವನ್ಯಪ್ರಾಣಿಗಳ ಹಾವಳಿಯು ಸಹ ಹೆಚ್ಚಾಗಿದೆ. ಸಂಜೆಯಾಗುತ್ತಿದ್ದಂತೆ ಹಂದಿಗಳು ಜಿಂಕೆಗಳು ಇತರ ಪ್ರಾಣಿಗಳು ಹಳ್ಳದಲ್ಲಿ ನೀರು ಕುಡಿಯಲು ಆಗಮಿಸುತ್ತವೆ. ಹೆಚ್ಚಾಗಿ ದಿನನಿತ್ಯ ಆನೆಗಳು ಬರುವುದು ಸಾಮಾನ್ಯವಾಗಿದೆ.
ಅನ್ಯ ವ್ಯಕ್ತಿಯೊಬ್ಬರು ಯಾವುದೇ ಅನುಮತಿ ಇಲ್ಲದೆ ಅಂಗಡಿಯನ್ನು ತೆರೆದು ವ್ಯಾಪಾರ ಲಾಭಕ್ಕಾಗಿ ತಿಂಡಿ ತಿನಿಸುಗಳು ಆಹಾರ ಪದಾರ್ಥಗಳನ್ನು ಮಾರಾಟ ಮಾಡುವುದರಿಂದ ಇಲ್ಲಿ ಬಿಸಾಡುವಂತಹ ಪ್ಲಾಸ್ಟಿಕ್ ಬಾಟೆಲ್ ತ್ಯಾಜ್ಯ ವಸ್ತುಗಳು ಅಲ್ಲಲ್ಲಿ ಬಿಸಾಕುವ ಸಾಧ್ಯತೆ ಇರುತ್ತದೆ. ಮತ್ತು ಅಂಗಡಿ ತಿಂಡಿ ತಿನಿಸುಗಳಿಂದ ವಾಸನೆಯೂ ಸಹ ಬರುತ್ತದೆ. ಇದಕ್ಕೆ ಆಕರ್ಷಣೆಯಾಗಿ ವನ್ಯಜೀವಿ ಪ್ರಾಣಿಗಳು ಆಗಮಿಸಿ ಪ್ಲಾಸ್ಟಿಕ್ ಆಹಾರ ತ್ಯಾಜ್ಯಗಳನ್ನು ಸೇವಿಸಬಹುದು.
ಇಲ್ಲಿ ಅಂಗಡಿಯನ್ನು ತೆರೆದಿರುವುದರಿಂದ ಜನಸಂದಣಿ ಹೆಚ್ಚಾಗುವುದರ ಜೊತೆಗೆ ವಾಹನ ಸವಾರರು ವಾಹನಗಳನ್ನು ಅಲ್ಲಲ್ಲಿ ನಿಲ್ಲಿಸುವುದು ಹೆಚ್ಚಾಗುತ್ತದೆ. ಇದರಿಂದ ವನ್ಯಜೀವಿ ಪ್ರಾಣಿಗಳ ಪ್ರಾಣಹಾನಿಗೆ ಕಾರಣವಾಗುವುದರ ಜೊತೆಗೆ ಸುತ್ತಮುತ್ತಲು ಹಸಿರಿನಿಂದ ಕಂಗೊಳಿಸುವ ಸ್ವಚ್ಛ ಪರಿಸರಕ್ಕೆ ಮಾರಕವಾಗಿ ಪರಿಣಮಿಸಲಿದೆ. ಈ ಬಗ್ಗೆ ಸಂಬಂಧಪಟ್ಟ ಅರಣ್ಯ ಇಲಾಖೆ, ಗ್ರಾಮ ಪಂಚಾಯಿತಿ, ಪಿಡಬ್ಲ್ಯೂಡಿ ಅಧಿಕಾರಿಗಳು ಪರಿಶೀಲನೆ ನಡೆಸಿ ಅನಧಿಕೃತವಾಗಿ ತೆರೆದಿರುವ ಅಂಗಡಿಯನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.