ಮೂರ್ಚೆ ರೋಗ ಮುಕ್ತ ಜಿಲ್ಲೆಗೆ ಶ್ರೀನಾಥ್ ಕರೆ
ಕೋಲಾರ,ಜು.೧- ಕೋಲಾರ ಜಿಲ್ಲೆಯನ್ನು ಮೂರ್ಚೆ ರೋಗ ಮುಕ್ತ ಜಿಲ್ಲೆಯನ್ನಾಗಿಸಲು ಆರೋಗ್ಯ ಇಲಾಖೆ ಹಾಗೂ ಪರಿಣಿತ ವೈದ್ಯಾಕಾರಿಗಳ ಕಾರ್ಯದೊಂದಿಗೆ ಕೈಜೋಡಿಸೋಣ ಎಂದು ಸಮಾಜ ಸೇವಕ ಸಿ.ಎಂ.ಆರ್ ಶ್ರೀನಾಥ್ ಹೇಳಿದರು.
ತಾಲೂಕಿನ ವಕ್ಕಲೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ ಅಸ್ತರ್ ಆಸ್ಪತ್ರೆ, ವಿವಿಧ ರೋಟರಿ ಸಂಸ್ಥೆಗಳು ಹಾಗೂ ಸಿ.ಎಂ.ಆರ್ ಶ್ರೀನಾಥ್ ತಂಡದ ಸಹಕಾರದೊಂದಿಗೆ ಏರ್ಪಡಿಸಿದ್ದ ಮೂರ್ಚೆ ರೋಗ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಮೂರ್ಚೆ ರೋಗವನ್ನು ಕಳಂಕ ಎಂದು ಭಾವಿಸದೆ ಪತ್ತೆಯಾದ ಆರಂಭಿಕ ದಿನಗಳಲ್ಲಿಯೇ ಸೂಕ್ತ ಚಿಕಿತ್ಸೆ ನೀಡುವ ಮೂಲಕ ರೋಗ ನಿರ್ಮೂಲನೆಗೆ ಪ್ರತಿಯೊಬ್ಬರೂ ಸಹಕರಿಸಬೇಕೆಂದು ಮನವಿ ಮಾಡಿದ ಅವರು, ಶಿಬಿರಗಳಲ್ಲಿ ಚಿಕಿತ್ಸೆ ಪಡೆದು ಗುಣಮಖರಾದವರು ಇತರರನ್ನು ಚಿಕಿತ್ಸೆಗೆ ಪ್ರೇರೇಪಿ ಮೂರ್ಚೆ ರೋಗ ಮುಕ್ತ ಸಮಾಜಕ್ಕಾಗಿ ಶ್ರಮಿಸಬೇಕೆಂದರು.
ಅಸ್ತರ ಆಸ್ಪತ್ರೆಯ ತಜ್ಞ ವೈದ್ಯ ಡಾ.ಸತೀಶ್ ರುದ್ರಪ್ಪ ಮಾತನಾಡಿ,ಆರಂಭಿಕ ಹಂತಗಳಲ್ಲಿಯೇ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾಗಬಹುದು ಎಂದರು.ಜಿಲ್ಲಾ ಮಾನಸಿಕ ರೋಗ ವೈದ್ಯಾಧಿಕಾರಿ ಡಾ.ಎನ್.ಸಿ.ನಾರಾಯಣಸ್ವಾಮಿ ಮಾತನಾಡಿ, ಎಸ್‌ಎನ್‌ಆರ್ ಆಸ್ಪತ್ರೆಯಲ್ಲಿ ಚಿಕಿತ್ಸಾ ಕೌನ್ಸಿಲಿಂಗ್ ಕೇಂದ್ರವನ್ನು ಆರಂಭಿಸಲಾಗಿದೆ ಎಂದರು.
ತಾಲೂಕು ವೈದ್ಯಾಧಿಕಾರಿ ಡಾ.ಎ.ವಿ.ನಾರಾಯಣಸ್ವಾಮಿ ಮಾತನಾಡಿ, ಹಿಂದಿನ ಶಿಬಿರಗಳಲ್ಲಿ ರೋಗ ಪತ್ತೆಯಾದವರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ, ತಜ್ಞ ವೈದ್ಯ ಸತೀಶ್ ರುದ್ರಪ್ಪ ಗ್ರಾಮೀಣ ಭಾಗಕ್ಕೆ ಬಂದು ಚಿಕಿತ್ಸೆ ನೀಡುತ್ತಿರುವುದು ಶ್ಲಾಘನೀಯ ಕಾರ್ಯವೆಂದರು.
ವೇದಿಕೆಯಲ್ಲಿ ಆಸ್ಪತ್ರೆ ಐಟಿ ಮುಖ್ಯಸ್ಥ ಅನಿಲ್‌ಕುಮಾರ್, ಗ್ರಾಮದ ಮುಖಂಡ ವಕ್ಕಲೇರಿ ರಾಮು, ಪಾಲಾಕ್ಷಗೌಡ, ರೋಟರಿ ಸೆಂಟ್ರಲ್ ಅಧ್ಯಕ್ಷ ಕೆ.ಎನ್.ಎನ್.ಪ್ರಕಾಶ್, ರೋಟರಿಯನ್ ಫೈರ್ ರಮೇಶ್, ಗ್ರಾಪಂ ಅಧ್ಯಕ್ಷೆ ರಾಕಾ ಮಂಜುನಾಥ್, ಉಪಾಧ್ಯಕ್ಷ ಆನಂದ ಕುಮಾರ, ಅಸ್ತರ್ ಆಸ್ಪತ್ರೆಯ ಡಾ.ಬಾಲಾಜಿ, ಡಾ.ಸೂರಜ್, ಡಾ.ಅಭಿಷೇಕ್, ಡಾ.ರವಿ ಮತ್ತು ಸಿಬ್ಬಂದಿ ಮತ್ತಿತರರು ಹಾಜರಿದ್ದರು.
ಮಮತಾ ತಂಡದಿಂದ ಪ್ರಾರ್ಥನೆ, ಶಿಕ್ಷಣ ಆರೋಗ್ಯಾಧಿಕಾರಿ ಪ್ರೇಮ ನಿರೂಪಿಸಿ, ಭಾರತ ಸೇವಾದಳ ಕಾರ್ಯದರ್ಶಿ ಎಸ್.ಸುಧಾಕರ್ ಸ್ವಾಗತಿಸಿದರು.
ವಕ್ಕಲೇರಿ ಸುತ್ತಮುತ್ತಲಿನ ಗ್ರಾಮಗಳ ನೂರಕ್ಕೂ ಹೆಚ್ಚು ಮಂದಿಯನ್ನು ಆಶಾ ಕಾರ್ಯಕರ್ತೆಯರು ಶಿಬಿರಕ್ಕೆ ಕರೆ ತಂದು ತಪಾಸಣೆಗೊಳಪಡುವಂತೆ ಮಾಡಿದರು.