ಜುಲೈನಲ್ಲಿ ೭ನೇ ವೇತನ ಆಯೋಗ ವರದಿ ಜಾರಿ
ಕೋಲಾರ,ಜು.೧- ರಾಜ್ಯ ಸರ್ಕಾರ ಜುಲೈ ತಿಂಗಳಲ್ಲೇ ೭ನೇ ವೇತನ ಆಯೋಗದ ವರದಿ ಜಾರಿ ಮಾಡುವ ಮೂಲಕ ಶಿಕ್ಷಕರು ಹಾಗೂ ಸರ್ಕಾರಿ ನೌಕರರಿಗೆ ಸಿಹಿಸುದ್ದಿ ನೀಡಲಿದೆ ಎಂದು ವಿಧಾನಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್ ತಿಳಿಸಿದರು.
ನಗರದ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ನಿವೃತ್ತರಾದ ಕನ್ನಡ ಉಪನ್ಯಾಸಕ ಜಿ.ಎಂ. ಗೋಪಿಕೃಷ್ಣನ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಈಗಾಗಲೇ ವೇತನ ಆಯೋಗದ ವರದಿ ಸರ್ಕಾರದ ಕೈಸೇರಿದೆ ಅತಿ ಶೀಘ್ರ ಜಾರಿಗೆ ನಾನೂ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ, ಸಿಎಂ ಸಹಾ ಇದಕ್ಕೆ ಸಹಮತ ವ್ಯಕ್ತಪಡಿಸಿದ್ದು, ಜುಲೈ ತಿಂಗಳಲ್ಲಿ ನೌಕರರಿಗೆ ಶುಭ ಸುದ್ದಿ ಕೊಡುವುದಾಗಿ ತಿಳಿಸಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನಾ ತನ್ನ ಚುನವಣಾ ಪ್ರಣಾಳಿಕೆಯಲ್ಲಿ ನೀಡಿರುವ ಪ್ರಮುಖ ಭರವಸೆಯಾಗಿರುವ ಹೊಸ ಪಿಂಚಣಿ ನೀತಿ ರದ್ದು ಹಾಗೂ ಹಳೆ ಪಿಂಚಣಿ ನೀತಿ ಜಾರಿಗೆ ಬದ್ದವಾಗಿದ್ದು, ಈ ವರ್ಷವೇ ಅದರ ಜಾರಿಗೆ ಸರ್ಕಾರದ ಮೇಲೆ ತಾವು ಒತ್ತಡ ಹಾಕುವುದಾಗಿ ಭರವಸೆ ನೀಡಿದರು.
ರಾಜ್ಯದ ಅನುದಾನಿತ ಶಾಲೆಗಳಲ್ಲಿ ೨೦೧೫ ರಿಂದ ೨೦೨೫ ರವರೆಗೂ ನಿವೃತ್ತಿ ಮತ್ತಿತರ ಕಾರಣಗಳಿಂದ ಖಾಲಿಯಾಗಿರುವ ಹಾಗೂ ಖಾಲಿಯಾಗಲಿರುವ ಹುದ್ದೆಗಳ ಭರ್ತಿಗೂ ಸರ್ಕಾರಕ್ಕೆ ಮನವಿ ಮಾಡಿರುವುದಾಗಿ ತಿಳಿಸಿದ ಅವರು, ಜು.೧೫ ರಿಂದ ನಡೆಯುವ ವಿಧಾನಮಂಡಳದ ಅಧಿವೇಶನದಲ್ಲಿ ಈ ಕುರಿತು ಆಗ್ರಹಿಸುವುದಾಗಿ ತಿಳಿಸಿದರು.
ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ಹುದ್ದೆಗಳು ಖಾಲಿಯಾಗಿರುವುದರಿಂದ ಪಾಠಪ್ರವಚನಗಳಿಗೆ ಅಡ್ಡಿಯಾಗಿದೆ, ಇದು ಶೈಕ್ಷಣಿಕ ಅಭಿವೃದ್ದಿಯ ಮೇಲೆ ಪರಿಣಾಮವೂ ಬೀರುತ್ತಿದ್ದು, ಶೀಘ್ರ ಖಾಲಿ ಹುದ್ದೆ ಭರ್ತಿಗೆ ಸರ್ಕಾರದ ಅನುಮೋದನೆ ಕೊಡಿಸುವುದಾಗಿ ತಿಳಿಸಿದರು.
ಬಾಲಕಿಯರ ಪಿಯು ಕಾಲೇಜಿನ ಕನ್ನಡ ಉಪನ್ಯಾಸಕರಾಗಿದ್ದು, ತಮ್ಮ ಅತ್ಯುತ್ತಮ ಸೇವೆಯ ಮೂಲಕ ಎಲ್ಲರ ಗಮನ ಸೆಳೆದಿರುವ ಗೋಪಿಕೃಷ್ಣನ್ ವಯೋ ನಿವೃತ್ತಿಯಾಗುತ್ತಿದ್ದು, ಅವರ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.
ಸರ್ಕಾರಿ ಸೇವೆಯಲ್ಲಿ ನಿವೃತ್ತಿ ಸಾಮಾನ್ಯ ಆದರೆ ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಮಾಡಿದ ಸೇವೆ ಎಂದೆಂದು ಸ್ಮರಣೀಯವಾಗಿರುತ್ತದೆ, ಈ ನಿಟ್ಟಿನಲ್ಲಿ ಕಾಲೇಜಿನಲ್ಲಿ ಮಕ್ಕಳ ಅಚ್ಚುಮೆಚ್ಚಿನ ಕನ್ನಡ ಉಪನ್ಯಾಸಕರಾಗಿ ಉತ್ತಮ ಸೇವೆ ಮಾಡಿದ್ದಾರೆ, ಅವರು ನಿವೃತ್ತಿ ನಂತರವೂ ಇನ್ನಷ್ಟು ಮಕ್ಕಳ ಶೈಕ್ಷಣಿಕ ಉನ್ನತಿಗೆ ನೆರವಾಗಲಿ ಎಂದು ಆಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಉಪಪ್ರಾಂಶುಪಾಲ ಬಾಲಕೃಷ್ಣ ಮಾತನಾಡಿ, ಗೋಪಿಕೃಷ್ಣನ್ ಅವರು ತಮ್ಮ ಕರ್ತವ್ಯದಲ್ಲಿ ಎಂದು ಹಿಂದೆ ಬಿದ್ದವರಲ್ಲ, ತಮಗೆ ವಹಿಸಿದ ಸೇವೆಯನ್ನು ಅತ್ಯಂತ ನಿಷ್ಟೆಯಿಂದ ಮಾಡಿದ್ದಾರೆ, ತಮಗೆ ವಹಿಸಿದ ಬೋಧನಾ ಅವಧಿಗಳಲ್ಲಿ ಮಕ್ಕಳಿಗೆ ನ್ಯಾಯ ಒದಗಿಸಿದ್ದಾರೆ ಎಂದು ಅಭಿನಂದಿಸಿ, ಜಿಲ್ಲಾಡಳಿತದ ಚುನಾವಣಾ ಕಾರ್ಯದಲ್ಲೂ ಇವರು ತಮ್ಮ ಸೇವೆಯನ್ನು ಒದಗಿಸಿ ಗಮನ ಸೆಳೆದಿದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಉಪನ್ಯಾಸಕ ಗೋಪಿಕೃಷ್ಣನ್, ತಮ್ಮ ಬದುಕಿನಲ್ಲಿ ಅನೇಕ ಕಷ್ಟ,ಸುಖಗಳನ್ನು ಕಂಡಿದ್ದೇನೆ, ಅರೆಕಾಲಿಕ ಉಪನ್ಯಾಸಕನಾಗಿ, ನಂತರ ಖಾಯಂ ಉಪನ್ಯಾಸಕನಾಗಿ ಸೇವೆ ಸಲ್ಲಿಸಿದ್ದೇನೆ, ಜಿಲ್ಲಾಡಳಿತ ಸೂಚಿಸಿದಾಗ ಚುನಾವಣಾ ಕರ್ತವ್ಯವನ್ನು ಚಾಚೂ ತಪ್ಪದೇ ಪಾಲಿಸಿ ನಿರ್ವಹಿಸಿದ್ದೇನೆ, ನನ್ನ ಸೇವೆಗೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ ಎಂದರು.
ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ರೋಟರಿ ಸೆಂಟ್ರಲ್ ಅಧ್ಯಕ್ಷ ಸಿಎಂಆರ್.ಶ್ರೀನಾಥ್, ಪಿಯು ಡಿಡಿ ರಾಮಚಂದ್ರಪ್ಪ, ಜಿಲ್ಲೆಯ ವಿವಿಧ ಕಾಲೇಜುಗಳ ಪ್ರಾಂಶುಪಾಲರುಗಳಾದ ಪರುಶುರಾಮ್ ಉನ್ಕಿ, ಬಂಗಾರಪೇಟೆ ಸುಬ್ರಮಣಿ, ಮುರಳಿ, ಪ್ರಾಣೇಶ್, ನಾರಾಯಣಪ್ಪ, ನಾರಾಯಣಸ್ವಾಮಿ, ನಾಗರಾಜನ್, ಉಪನ್ಯಾಸಕರ ಸಂಘದ ಅಧ್ಯಕ್ಷ ಟಿ.ಕೆ.ನಟರಾಜ್, ಕಾರ್ಯದರ್ಶಿ ಬೋಡಿರೆಡ್ಡಿ ಸೇರಿದಂತೆ ವಿವಿಧ ಕಾಲೇಜುಗಳ ಉಪನ್ಯಾಸಕರು, ಶಿಕ್ಷಕ ಸಂಘಟನೆಗಳ ಮುಖಂಡರು,ಸ್ನೇಹಿತರು, ತಾಲ್ಲೂಕು,ಜಿಲ್ಲಾಮಟ್ಟದ ಅಧಿಕಾರಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು, ನಿವೃತ್ತಿಯಾದ ಗೋಪಿಕೃಷ್ಣನ್ ಅವರಿಗೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಗೋಪಿಕೃಷ್ಣನ್ ಅವರ ಪತ್ನಿ ಶೋಭಾ,ಕುಟುಂಬದವರಾದ ಸರೋಜಮ್ಮ,ಶಾರದಮ್ಮ,ಸರಸ್ವತಮ್ಮ, ವನಜಮ್ಮ,ಲಕ್ಷ್ಮೀನಾರಾಯಣ, ವಿಶ್ವಾಸ್ ಸ್ನೇಹಿತರು ಬೀಳ್ಕೊಡುಗೆ ಸಮಾರಂಭಕ್ಕೆ ಸಾಥ್ ನೀಡಿದರು.
ವೇದಿಕೆಯಲ್ಲಿ ಕಸಾಪ ಮಾಜಿ ಜಿಲ್ಲಾಧ್ಯಕ್ಷರುಗಳಾದ ಜೆ.ಜಿ.ನಾಗರಾಜ್, ನಾಗಾನಂದ್ ಕೆಂಪರಾಜ್, ಶಿಕ್ಷಕ ಮುಖಂಡರಾದ ದಾಸಪ್ಪ, ರತ್ನಪ್ಪ, ಶರಣಪ್ಪ ಜಮಾದಾರ್, ಮುಕುಂದ, ಉಪನ್ಯಾಸಕಾದ ವೆಂಕಟೇಶ್, ಉದಯಕುಮಾರ್, ಸುಜಾತಾ,ಶ್ರೀನಿವಾಸ್, ರವಿ, ಕೋಲಾರಮ್ಮ ಡ್ರೈವಿಂಗ್ ಶಾಲೆಯ ನಿತೀಶ್ ಯಾದವ್, ಜಿಲ್ಲಾ ಯಾದವ ಕ್ಷೇಮಾಭಿವೃದ್ದಿ ಸಂಘದ ಚಲಪತಿ, ಮಾಯಂಡಿ ಮನೋಹರ್, ಪ್ರಶಾಂತ್ ಮತ್ತಿತರರಿದ್ದರು.