14 ಕೇಂದ್ರಗಳಲ್ಲಿ ಇಂದು ಶಿಕ್ಷಕರ ಅರ್ಹತಾ ಪರೀಕ್ಷೆ
ಕೋಲಾರ,ಜು.೧- ನಗರದ ೧೪ ಕೇಂದ್ರಗಳಲ್ಲಿ ಇಂದಿನಿಂದ (ಭಾನುವಾರ)ಶಿಕ್ಷಕರ ಅರ್ಹತಾ ಪರೀಕ್ಷೆ ನಡೆಯಲಿದ್ದು, ಎಲ್ಲಾ ಕೇಂದ್ರಗಳಲ್ಲಿ ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಿದ ಸಿಬ್ಬಂದಿಯ ಸಭೆ ನಡೆಸಿದ್ದು, ಡೆಸ್ಕ್‌ಗಳ ಮೇಲೆನೋಂದಣಿ ಸಂಖ್ಯೆ ದಾಖಲಿಸುವ ಕಾರ್ಯ ನಡೆಸಿದ್ದು, ವೆಬ್‌ಕಾಸ್ಟಿಂಗ್‌ಗೂ ಕ್ರಮವಹಿಸಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ತಿಳಿಸಿದರು.
ನಗರದ ಬಾಲಕರ ಪಿಯು ಕಾಲೇಜಿನಲ್ಲಿ ನೋಂದಣಿ ಸಂಖ್ಯೆ ದಾಖಲಿಸುವ ಕಾರ್ಯ ವೀಕ್ಷಿಸಿದ ನಂತರ ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಒ ಮಾರ್ಗದರ್ಶನದಲ್ಲಿ ಯಾವುದೇ ಅವ್ಯವಹಾರ,ಗೊಂದಲಗಳಿಗೆ ಅವಕಾಶವಿಲ್ಲದಂತೆ ಎಲ್ಲಾ ಅಗತ್ಯ ಕ್ರಮವಹಿಸಲಾಗಿದೆ, ಪ್ರತಿ ಕೇಂದ್ರದ ಪ್ರತಿಕೊಠಡಿಯಲ್ಲೂ ಸಿಸಿ ಕ್ಯಾಮರಾ ಅಳವಡಿಸಿದ್ದು, ವೆಬ್ ಕಾಸ್ಟಿಂಗ್ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಕೋಲಾರ ನಗರದ ಒಟ್ಟು ೧೪ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಬೆಳಗಿನ ಅಧಿವೇಶನ ೯-೩೦ರಿಂದ ೧೨ರವರೆಗೂ ಪತ್ರಿಕೆ-೧ರ ಪರೀಕ್ಷೆ ೯ ಕೇಂದ್ರಗಳಲ್ಲಿ ಹಾಗೂ ಮಧ್ಯಾಹ್ನ ೨ ರಿಂದ ೪-೩೦ ರವರೆಗೂ ಪತ್ರಿಕೆ-೨ರ ಪರೀಕ್ಷೆ ೧೪ ಕೇಂದ್ರಗಳಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಪತ್ರಿಕೆ-೧ ಬೆಳಗ್ಗೆ ೯-೩೦ ರಿಂದ ೧೨ ಗಂಟೆವರೆಗೂ ೯ ಕೇಂದ್ರಗಳಲ್ಲಿ ಮಾತ್ರ ಪರೀಕ್ಷೆ ನಡೆಯಲಿದ್ದು, ಒಟ್ಟು ೨೧೪೨ ಅಭ್ಯರ್ಥಿಗಳು ನೋಂದಣಿ ಮಾಡಿಸಿದ್ದಾರೆ. ಪತ್ರಿಕೆ-೨ರ ಪರೀಕ್ಷೆ ಮಧ್ಯಾಹ್ನ ೨ ರಿಂದ ೪-೩೦ರವರೆಗೂ ನಡೆಯಲಿದ್ದು, ೩೩೯೪ ಮಂದಿ ನೋಂದಣಿ ಮಾಡಿಸಿದ್ದಾರೆ ಎಂದು ತಿಳಿಸಿದರು.
೧೪ ಕೇಂದ್ರಗಳಿಗೂ ೧೪ ಮುಖ್ಯಅಧೀಕ್ಷಕರು, ೧೪ ಮಂದಿ ಸ್ಥಾನಿಕ ಜಾಗೃತದಳ ಅಧಿಕಾರಿಗಳು, ೯ ಮಾರ್ಗಗಳಿಗೂ ಮಾರ್ಗಾಧಿಕಾರಿಗಳು, ೨೧೦ ಮಂದಿ ಕೊಠಡಿ ಮೇಲ್ವಿಚಾರಕರನ್ನು ನೇಮಿಸಲಾಗಿದೆ ವೀಕ್ಷಕರಾಗಿ ಡಯಟ್ ಪ್ರಾಂಶುಪಾಲ ಕೆ.ಎನ್.ಜಯಣ್ಣ ಕಾರ್ಯ ನಿರ್ವಹಿಸುವರು ಎಂದು ತಿಳಿಸಿದರು.
ಪರೀಕ್ಷೆಗೆ ಬರುವ ಅಭ್ಯರ್ಥಿಗಳು ಕಡ್ಡಾಯವಾಗಿ ೩ ಇತ್ತೀಚಿನ ಭಾವಚಿತ್ರ ಹಾಗೂ ಪ್ರವೇಶ ಪತ್ರದೊಂದಿಗೆ ಒಂದು ಗುರುತಿನ ಚೀಟಿ ಕಡ್ಡಾಯವಾಗಿ ತರಬೇಕು ಎಂದು ತಿಳಿಸಿದ ಅವರು, ಪರಿಕ್ಷಾ ಕೇಂದ್ರದಲ್ಲಿ ಡಿಜಿಟಲ್ ವಾಚ್, ಮೊಬೈಲ್ ಮತ್ತಿತರ ಎಲೆಕ್ಟ್ರಾನಿಕ್ ಉಪಕರಣ ನಿಷೇಧಿಸಲಾಗಿದೆ ಎಂದು ತಿಳಿಸಿದರು.
ನಗರದ ಬಾಲಕರ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಮುಖ್ಯ ಅಧೀಕ್ಷಕ ಹಾಗೂ ಪಟ್ನ ಶಾಲೆ ಮುಖ್ಯಶಿಕ್ಷಕನಾಗರಾಜ್ ನೇತೃತ್ವದಲ್ಲಿ ನೋಂದಣಿ ಸಂಖ್ಯೆದಾಖಲಿಸುವ ಕಾರ್ಯ ನಡೆಯಿತು.