ಪ್ರಮಾಣಿಕ ಸೇವೆಗೆ ಸಮಾಜದಲ್ಲಿ ಗೌರವ ಹೆಚ್ಚು
ಕೋಲಾರ,ಜು.೧- ಸೇವೆಯಲ್ಲಿ ಇದ್ದಷ್ಟು ದಿನ ವೃತ್ತಿಗೆ ಧಕ್ಕೆಯುಂಟು ಬಾರದಂತೆ ಕೆಲಸ ಮಾಡಿದಾಗ ಸಮಾಜದಲ್ಲಿ ಗೌರವ ಹೆಚ್ಚುತ್ತದೆ ಎಂದು ರೇಷ್ಮೆ ಕೃಷಿ ಇಲಾಖೆ ಉಪ ನಿರ್ದೇಶಕ ಶ್ರೀನಿವಾಸಗೌಡ ಹೇಳಿದರು.
ನಗರದ ರೇಷ್ಮೆ ಕೃಷಿ ಇಲಾಖೆಯಿಂದ ಶನಿವಾರ ನಿವೃತ್ತರಾದ ಮುಳಬಾಗಿಲು ವಿಸ್ತರ್ಣಾಧಿಕಾರಿ ಎಚ್.ಬಿ.ಹನುಮಂತಪ್ಪ ಅವರಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನಿಸಿ ಮಾತನಾಡಿದರು.
ಹನುಮಂತಪ್ಪರ ಸೇವೆಯಲ್ಲಿ ಇಷ್ಟು ದಿನ ಯಾವುದೇ ದೂರು ಬಂದಿಲ್ಲ, ವಿಶ್ವಾಸ ಉಳಿಸಿಕೊಂಡು ವೃತ್ತಿಗೆ ಧಕ್ಕೆಯಾದಂತೆ ಕೆಲಸ ಮಾಡಿದ್ದಾರೆ. ಈಗ ತಂತ್ರಜ್ಞಾನ ಬಹಳ ಮುಂದುವರೆದಿದ್ದು ಏನಾದರು ನ್ಯೂನತೆಗಳು ಇದ್ದರೆ ವ್ಯಾಟ್ಸಪ್, ಫೇಸ್ ಬುಕ್‌ನಲ್ಲಿ ಜನನೇ ವೈರಲ್ ಮಾಡುತ್ತಾರೆ. ಹನುಮಂತ ಅವರ ವಿರುದ್ಧ ಒಂದೇ ಒಂದು ದೂರು ಬಂದಿಲ್ಲ. ಅವರು ಇತರರಿಗೆ ಮಾದರಿ ಎಂದರು.
ನಿವೃತ್ತರು ಬಹುಮುಖ ಪ್ರತಿಭೆಯಾಗಿದ್ದು, ಕಿರಿಯ ಅಧಿಕಾರಿಗಳಿಗೆ ಮಾರ್ಗದರ್ಶನ ಅಗತ್ಯವಿದೆ. ಇಲಾಖೆಯಲ್ಲಿ ಫೀಲ್ಡ್ ಸ್ಟಾಪ್ ಬಹಳ ಕೊರತೆಯಿದೆ, ನಿವೃತ್ತರ ಸ್ಥಾನ ತೆರವಾದ ಕೂಡಲೇ ಭರ್ತಿ ಮಾಡಿದರೆ ಪ್ರಗತಿ ಸಾಧನೆ ಮಾಡಬಹುದು. ರೈತರೊಂದಿಗೆ ಒಡಂಬಡಿಕೆಯಿಂದ ಇದ್ದಾಗ ಮಾತ್ರ ಗೌರವ ಸಿಗುತ್ತದೆ, ಕಾಟಾಚಾರಕ್ಕೆ ಕೆಲಸ ಮಾಡಿದರೆ ರೈತರು ನಮ್ಮನ್ನು ಕಡೆಗಣಿಸುತ್ತಾರೆ ಎಂದು ತಿಳಿಸಿದರು.
ರೇಷ್ಮೆ ಸಹಾಯಕ ನಿರ್ದೇಶಕ ಬೈರೈಗೌಡ ಮಾತನಾಡಿ, ಸರ್ಕಾರಿ ಕೆಲಸದಲ್ಲಿ ನಿವೃತ್ತಿ ಕಡ್ಡಾಯ, ಅಲ್ಲಿಗೆ ಜವಾಬ್ದಾರಿ ಮುಗೀತು ಅಂತಲ್ಲ, ಕಿರಿಯ ಅಧಿಕಾರಿಗಳಿಗೆ ಮಾರ್ಗದರ್ಶನ ಮುಖ್ಯವಾಗಿರುತ್ತದೆ ಎಂದು ತಿಳಿಸಿದರು.
ರೇಷ್ಮೆ ಕೃಷಿ ಕೆಲಸ ಅಂದರೆ ಬಹಳ ವಿಭಿನ್ನ, ಕಂದಾಯ ಸೇರಿದಂತೆ ಇತರೆ ಇಲಾಖೆಯ ಕೆಲಸ ಇಲ್ಲಿ ಇರುವುದಿಲ್ಲ. ರೈತರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುವ ಇಲಾಖೆ ಇದು, ಹನುಮಂತಪ್ಪ ಪತ್ರಕರ್ತರಿಗೆ, ರೈತರಿಗೆ, ಸಂಘಸಂಸ್ಥೆಗಳ ಮುಖಂಡರು, ರಾಜಕಾರಣಿಗಳೊಂದಿಗೆ ಒಳ್ಳೆಯ ಸಂಪರ್ಕ ಬೆಳೆಸಿಕೊಂಡಿದ್ದಾರೆ. ಒಂದೇ ಇಲಾಖೆ, ಒಂದೇ ಜಾಗದಲ್ಲಿ ೩೮ ವರ್ಷ ಸೇವೆ ಮಾಡಿ ನಿವೃತ್ತಿ ಯಾಗಿರುವ ಹನುಮಂತ ಸೇವೆ ಇತರರಿಗೆ ಮಾದರಿ ಎಂದು ಬಣ್ಣಿಸಿದರು.
ನಿವೃತ್ತ ವಿಸ್ತರ್ಣಾಧಿಕಾರಿ ಎಚ್.ಬಿ.ಹನುಮಂತಪ್ಪ ಮಾತನಾಡಿ, ೧೯೮೭ರಲ್ಲಿ ಇಲಾಖೆ ಸೇರಿ ಚನ್ನಪಟ್ಟಣದಲ್ಲಿ ತರಬೇತಿ ಪಡೆದುಕೊಂಡೆ. ಸೈಕಲ್ ಬಾಡಿಗೆ ತಗೆದುಕೊಂಡು ರೈತರ ತಾಲೂಕುಗಳಿಗೆ ಭೇಟಿ ನೀಡಿ ಮಾರ್ಗದರ್ಶನ ನೀಡುತ್ತಿದ್ದೆ, ಗೌರವಕ್ಕೆ, ವೃತ್ತಿಗೆ ಧಕ್ಕೆಯಾದಂತೆ ಕೆಲಸ ಮಾಡಿದ್ದೇನೆ, ಹಿರಿಯ ಅಧಿಕಾರಿಗಳ, ರೈತರ ವಿಶ್ವಾಸಗಳಿಸಿದ್ದೇನೆ. ಬೇರೆಯವರ ಕೆಲಸ ನೋಡಿ ಅಸೂಯೆ ಪಡುವುದಲ್ಲ, ಮಾಡಿದ ಕೆಲಸ ನಮಗೆ ತೃಪ್ತಿ ತರಬೇಕು ಎಂಭ ಸೇವಾ ಮನೋಭಾವನೆಯಿಂದ ಕೆಲಸ ಮಾಡಿದರೆ ಗುರಿ ಸಾಧಿಸಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರೇಷ್ಮೆ ಕೃಷಿ ಸಹಾಯಕ ನಿರ್ದೇಶಕ ವೆಂಕಟೇಶಪ್ಪ, ನಿರೀಕ್ಷಕರಾದ ಬಿ.ಜಿ.ಕಾರ್ತಿಕ್, ಬಿ.ಚಂದ್ರಶೇಖರ್, ಜನಾಕಿರಾಮ್ ಮತ್ತಿತರರು ಹಾಜರಿದ್ದರು.