ಶಿಕ್ಷಕರ ಅರ್ಹತಾ ಪರೀಕ್ಷೆ ಕೇಂದ್ರಗಳಿಗೆ ಜಿ.ಪಂ. ಸಿಇಒ ಭೇಟಿ, ಪರಿಶೀಲನೆ
ಸಂಜೆವಾಣಿ ವಾರ್ತೆ,
ವಿಜಯಪುರ,ಜು.1:ಶಿಕ್ಷಕರ ಅರ್ಹತಾ ಪರೀಕ್ಷೆಗಳು ನಡೆಯುತ್ತಿರುವ ವಿಜಯಪುರ ನಗರದ ಪಿಡಿಜೆ ಪ್ರೌಢಶಾಲೆ ಹಾಗೂ ವ್ಹಿ.ಬಿ. ದರಬಾರ ಹೈಸ್ಕೂಲ್ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಿಷಿ ಆನಂದ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಭಾನುವಾರ ಬೆಳಗಿನ ಅವಧಿಯ ಹಾಗೂ ಅಪರಾಹ್ನ ಅವಧಿಯ ಪರೀಕ್ಷೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ ಅವರು, ಪರೀಕ್ಷೆಗಳು ಸುಗಮವಾಗಿ ಹಾಗೂ ವ್ಯವಸ್ಥಿತವಾಗಿ ನಡೆಯುತ್ತಿರುವ ಕುರಿತು ಪರಿಶೀಲನೆ ನಡೆಸಿ, ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.
ಪಿ.ಡಿ.ಜೆ. (ಬಿ) ಪ್ರೌಢ ಶಾಲೆ ಪರೀಕ್ಷಾ ಕೇಂದ್ರದಲ್ಲಿ 16 ಕೊಠಡಿಗಳಿದ್ದು, 16 ಕೊಠಡಿ ಮೇಲ್ವಿಚಾರಕರು, 02 ರೀಲಿವರ, 01 ಮೊಬೈಲ್ ಸ್ವಾಧೀನಾಧಿಕಾರಿ, ಪೆÇಲೀಸ್ ಸಿಬ್ಬಂದಿಗಳು ಮತ್ತು ಕಚೇರಿ ಸಹಾಯಕರು ಕರ್ತವ್ಯಕ್ಕೆ ನಿಯೋಜಿಸಲಾಗಿದ್ದು, ನೋಂದಣಿಯಾದ 293 ಪರೀಕ್ಷಾರ್ಥಿಗಳಲ್ಲಿ 271 ಪರೀಕ್ಷಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 22 ಪರೀಕ್ಷಾರ್ಥಿಗಳು ಗೈರು ಹಾಜರಾಗಿದ್ದರು. ವ್ಹಿ.ಬಿ. ದರಬಾರ ಹೈಸ್ಕೂಲ್ ಪರೀಕ್ಷಾ ಕೇಂದ್ರದಲ್ಲಿ ನೋಂದಣಿಯಾದ 235 ಪರೀಕ್ಷಾರ್ಥಿಗಳಲ್ಲಿ 205 ಪರೀಕ್ಷಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 30 ಪರೀಕ್ಷಾರ್ಥಿಗಳು ಗೈರು ಹಾಜರಾಗಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನ್ಯಾಸಕಿ ಎ. ಪಿ. ಚವ್ಹಾಣ, ಪರೀಕ್ಷೆ ಕೇಂದ್ರದ ಮುಖ್ಯ ಅಧೀಕ್ಷಕ ಎ. ಡಿ.ಅವಟಿ ಹಾಗೂ ಇತರರು ಉಪಸ್ಥಿತರಿದ್ದರು.
ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕಿ ಉಮಾದೇವಿ ಹಾಗೂ ಸ್ಥಾನಿಕ ಜಾಗೃತ ದಳದ ಅಧಿಕಾರಿ ಶಿವಾನಂದ ಧನ್ಯಾಳ ಉಪಸ್ಥಿತರಿದ್ದರು.